ಸಾರಾಂಶ
ಭೂಮಿಯನ್ನು ನೋಂದಣಿ ಮಾಡಿಕೊಂಡು ಗೇಣಿದಾರ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ದೂರು ಸಲ್ಲಿಸುವುದಾಗಿ ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ತಿಳಿಸಿದರು.
ರಾಮನಗರ: ಕನಕಪುರ ತಾಲೂಕು ಉಯ್ಯಂಬಳ್ಳಿ ಹೋಬಳಿ ಯಡಮಾರನಹಳ್ಳಿ ಸರ್ವೆ ನಂಬರ್ 265ರ ಹೊಂಗಾಣಿದೊಡ್ಡಿ ಗ್ರಾಮದ ಭೂಮಿಯನ್ನು ನೋಂದಣಿ ಮಾಡಿಕೊಂಡು ಗೇಣಿದಾರ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ದೂರು ಸಲ್ಲಿಸುವುದಾಗಿ ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಇಕ್ಬಾಲ್ ಹುಸೇನ್ ತಮ್ಮ ಅಧಿಕಾರದ ಪ್ರಭಾವ ಬಳಿಸಿ ಭೂಮಿಯನ್ನು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಹವಾಲ ಹಣ ಚಲಾವಣೆ ಆಗಿರುವ ಶಂಕೆ ಇರುವುದರಿಂದ ರಾಜ್ಯಪಾಲರಿಗೆ ದೂರು ಸಲ್ಲಿಸಿ ಇಡಿ, ಸಿಬಿಐನಂತಹ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತೇವೆ ಎಂದರು.
ಈಗಾಗಲೇ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ. ಹಾಗೊಂದು ವೇಳೆ ಲೋಕಾಯುಕ್ತರು ಕ್ಲೀನ್ ಚಿಟ್ ನೀಡಿದರೂ ರಾಜ್ಯಪಾಲರು ಉನ್ನತ ಮಟ್ಟದ ತನಿಖೆಗೆ ಆದೇಶಿಸುತ್ತಾರೆಂಬ ವಿಶ್ವಾಸವಿದೆ. ಅಲ್ಲಿಯೂ ನೊಂದ ರೈತರಿಗೆ ನ್ಯಾಯ ಸಿಗದಿದ್ದರೆ ದಯಾಮರಣ ಕೋರಿ ಅರ್ಜಿ ಸಲ್ಲಿಸುತ್ತೇವೆ ಎಂದು ಎಚ್ಚರಿಸಿದರು.
ಸರ್ವೆ ನಂ.265ರಲ್ಲಿರುವ ಹೊಂಗಾಣಿದೊಡ್ಡಿ ಗ್ರಾಮದಲ್ಲಿ 120 ವರ್ಷಗಳಿಂದ 31 ಕುಟುಂಬಗಳು ವಾಸವಾಗಿದ್ದು, ಈಗ 120 ಕುಟುಂಬಗಳ ಹಳ್ಳಿಯಾಗಿ ರಚನೆಯಾಗಿದೆ. ಗ್ರಾಮದಲ್ಲಿ ದೇವಸ್ಥಾನ, ಶಾಲೆ, ಅಂಗನವಾಡಿ ಕೇಂದ್ರ ಇದ್ದು, ಅಚ್ಚಲು ಗ್ರಾಪಂನಿಂದ ನರೇಗಾ ಯೋಜನೆಯಡಿ ಹಲವಾರು ಸೌಲಭ್ಯಗಳು ದೊರೆತಿವೆ. ಈಗ ಆ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.
ಇಂದಿರಾಗಾಂಧಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಉಳುವವನೆ ಭೂ ಒಡೆಯ ಭೂ ಸುಧಾರಣೆ ಕಾಯ್ದೆಯಡಿ ಗೇಣಿದಾರ ರೈತರಿಗೆ ಭೂಮಿ ನೀಡಬೇಕು. ಆದರೆ, ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ರವರು ರೈತರಿಂದ ಭೂಮಿ ಕಸಿಯುವ ಮೂಲಕ ಅವರದೇ ಪಕ್ಷದ ಅಧಿನಾಯಕಿಯ ಆಶೋತ್ತರಗಳಿಗೆ ವಿರುದ್ಧವಾಗಿ ನಡೆಯುತ್ತಿದ್ದಾರೆ.
ಶಾಸಕ ಇಕ್ಬಾಲ್ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷರು ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ರವರು ಕೈಜೋಡಿಸಿರುವ ಶಂಕೆಯಿದೆ. ಇಲ್ಲದಿದ್ದರೆ ಡಿ.ಕೆ.ಶಿವಕುಮಾರ್ ಅವರೇ ಮುಂದೆ ನಿಂತು ಗೇಣಿದಾರ ರೈತರಿಗೆ ಭೂಮಿ ಒದಗಿಸುವ ಕೆಲಸ ಮಾಡಲಿ. ಡಿಕೆಶಿರವರ ಸ್ವ ಕ್ಷೇತ್ರದಲ್ಲಿ ರೈತರಿಗೆ ಅನ್ಯಾಯವಾಗುತ್ತಿದ್ದರೂ ಮೌನ ವಹಿಸಿರುವುದು ಏಕೆಂದು ಪ್ರಶ್ನೆ ಮಾಡಿದರು.
1975ರಲ್ಲಿ 36 ಕುಟಂಬದ ಗೇಣಿದಾರರು ಕನಕಪುರ ತಾಲೂಕು ಭೂ ನ್ಯಾಯ ಮಂಡಳಿಗೆ ಫಾರಂ ನಂಬರ್ 7ರ ಅರ್ಜಿ ಸಲ್ಲಿಸಿದ್ದರು. ಆದರೆ, ಮಂಡಳಿಯ ಅಧಿಕಾರಿಗಳು 1979ರಲ್ಲಿ ಸರ್ವೆ ನಂಬರ್ 269, 271, 274,, 348, 349ರ 15 ಎಕರೆ 8 ಗುಂಟೆ ವಿಸ್ತೀರ್ಣದಲ್ಲಿ 31 ಗೇಣಿದಾರರಿಗೆ ಹಂಚಿಕೆ ಮಾಡಿ 31 ವಂಚನೆ ಮಾಡಿದ್ದರು. ಆನಂತರ ಕರ್ನಾಟಕ ಉಚ್ಚ ನ್ಯಾಯಾಲಯವು ಕನಕಪುರ ಭೂ ನ್ಯಾಯ ಮಂಡಳಿಗೆ ತನ್ನ ಆದೇಶವನ್ನು ಮರು ಪರಿಶೀಲನೆ ಮಾಡುವಂತೆ ಆದೇಶಿಸಿತ್ತು ಎಂದರು.
ಮಂಡಳಿಯಲ್ಲಿ ಭೂ ಮಾಲೀಕರು ತಮ್ಮ ಪ್ರಭಾವ ಬಳಸಿ 5 ಕುಟುಂಬದ ಗೇಣಿದಾರರಿಗೆ ಮಾತ್ರ 1988ರಲ್ಲಿ ನಮೂನೆ 10ರ ಹಕ್ಕು ಪತ್ರ ವಿತರಣೆ ಮಾಡಿದ್ದರು. ಉಳಿದ ಗೇಣಿದಾರರು 1976 ರಿಂದ 2000ನೇ ಸಾಲಿನವರೆಗೂ ಪಹಣಿ ಕಾಲಂ ನಂಬರ್ 12ರಲ್ಲಿ ವ್ಯವಸಾಯಗಾರರು ಎಂದು ನಮೂದಾಗಿದೆ. ಉಳಿದ ಗೇಣಿದಾರರಿಗೆ ನಮುೂನೆ 10ರ ಹಕ್ಕನ್ನು ಕೊಡದ ವಿಚಾರವಾಗಿ ಪ್ರಕರಣ ದಾಖಲಿಸಿದಾಗ ಕರ್ನಾಟಕ ಉಚ್ಛ ನ್ಯಾಯಾಲಯ ಗೇಣಿದಾರರು ಸ್ವಾಧೀನಾನುಭವದಲ್ಲಿರುವ ಜಮೀನುಗಳ ಸರ್ವೆ ನಂಬರ್ ಮತ್ತು ವಿಸ್ತೀರ್ಣ ಪರಿಶೀಲನೆ ಮಾಡಿ ಹಕ್ಕನ್ನು ಕೊಡಲು ನಿರ್ದೇಶನ ನೀಡಿತ್ತು ಎಂದು ಹೇಳಿದರು.
ರಚನೆಯಾಗದ ಭೂ ನ್ಯಾಯ ಮಂಡಳಿ
ಹೈಕೋರ್ಟ್ ಆದೇಶದಂತೆ ಗೇಣಿದಾರ ರೈತರು ಅರ್ಜಿ ಸಲ್ಲಿಸಲು ಕನಕಪುರ ಭೂ ನ್ಯಾಯ ಮಂಡಳಿ ರಚನೆಯೇ ಆಗಿಲ್ಲ. ಭೂ ಮಾಫಿಯಾಕ್ಕಾಗಿಯೇ ಮಂಡಳಿ ರಚಿಸಿಲ್ಲ. ಇದನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡು ಭೂ ಮಾಲೀಕರು, ರಿಯಲ್ ಎಸ್ಟೇಟ್ ದಂಧೆಕೋರರು ಹಾಗೂ ಶಾಸಕ ಇಕ್ಬಾಲ್ ಹುಸೇನ್ 2023ರ ಸೆ.16ರಂದು ಗೇಣಿದಾರ ರೈತರ ಸ್ವಾಧೀನದಲ್ಲಿರುವ 256, 257, 258, 259, 260, 264, 346, 349 ಮತ್ತು 2018ರ ಡಿ.20ರಂದು ಸರ್ವೆ ನಂಬರ್ 265, 267, 272ರ ಜಮೀನನ್ನು ಕನಕಪುರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ದಾಖಲೆ ಸಮೇತ ಆರೋಪಿಸಿದರು.
ಬಹಿರಂಗ ಚರ್ಚೆಗೆ ಬರಲಿ
ಈ ಭೂ ಕಬಳಿಕೆಯಲ್ಲಿ ಶಾಸಕರೊಂದಿಗೆ ಭೂ ಮಾಲೀಕರ ಜೊತೆಗೆ ತಹಸೀಲ್ದಾರ್ ಮಂಜುನಾಥ್, ಗ್ರೇಡ್ 2 ತಹಸೀಲ್ದಾರ್ ಶಿವಕುಮಾರ್, ಶಿರಸ್ತೆದಾರ ಜಗದೀಶ್, ರಾಜಸ್ವ ನಿರೀಕ್ಷಕ ರಜತ್, ಗ್ರಾಮ ಲೆಕ್ಕಾಧಿಕಾರಿ ರಮೇಶ್, ಹಿಂದಿನ ತಹಸೀಲ್ದಾರ್ ಸ್ಮಿತಾ ರಾಮ್ ಭಾಗಿಯಾಗಿದ್ದಾರೆ. ಹಾಗೊಂದು ವೇಳೆ ಶಾಸಕರು ಭೂ ಕಬಳಿಕೆ ಮಾಡಿಲ್ಲ ಎನ್ನುವುದಾದರೆ ಬಹಿರಂಗ ಚರ್ಚೆಗೆ ಬರಲಿ.
-ಕುಮಾರಸ್ವಾಮಿ, ರಾಜ್ಯ ಸಲಹೆಗಾರರು, ಜಯ ಕರ್ನಾಟಕ ಜನಪರ ವೇದಿಕೆ