ಈ ವೇಳೆ ಶಾಸಕರಾದ ಎಚ್.ಟಿ.ಮಂಜು ಹಾಗೂ ಕೆ.ವಿವೇಕಾನಂದ ಅವರು ನೀವು ಆದಷ್ಟು ಬೇಗ ನೂರು ಎಕರೆ ಭೂಮಿಯನ್ನು ಕೆಐಎಡಿಬಿಗೆ ಹಸ್ತಾಂತರ ಮಾಡಿಸಿ. ನಾವು ಕೇಂದ್ರ ಸಚಿವರ ಮೇಲೆ ಒತ್ತಡ ತಂದು ಕೈಗಾರಿಕೆ ತರುವ ಪ್ರಯತ್ನ ಮಾಡುವುದಾಗಿ ಹೇಳಿದರು.
ಕನ್ನಡಪ್ರಭ ವಾರ್ತೆ, ಮಂಡ್ಯ
ಮಂಡ್ಯ ತಾಲೂಕಿನ ಬಸರಾಳು ಸಮೀಪದ ಮುದ್ದನಘಟ್ಟ ಮತ್ತು ಹೆಗ್ಗಡತಿಹಳ್ಳಿ ಬಳಿ ಎಆರ್ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ ೧೦೦ ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್ನ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೋದಲ್ಲಿ ಬಂದಲ್ಲೆಲ್ಲಾ ಸರ್ಕಾರ ಭೂಮಿ ಕೊಡುತ್ತಿಲ್ಲ ಎಂದು ಆರೋಪ ಮಾಡುತ್ತಿರುವ ಕುರಿತು ಶಾಸಕ ಪಿ.ರವಿಕುಮಾರ್ ಗಮನಸೆಳೆದಾಗ ವಿವರಣೆ ನೀಡಿದರು.
ನೂರು ಎಕರೆ ಸಂಪೂರ್ಣ ಸರ್ಕಾರಿ ಜಾಗವನ್ನೇ ನಾವು ಸರ್ವೇ ಮಾಡಿಸಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿದ್ದೇವೆ. ಶೀಘ್ರದಲ್ಲೇ ಅದನ್ನು ಕ್ಯಾಬಿನೆಟ್ಗೆ ತಂದು ಕೆಐಎಡಿಬಿಗೆ ಹಸ್ತಾಂತರ ಮಾಡುವುದಾಗಿ ಭರವಸೆ ನೀಡಿದರು.ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತಾಗಿದೆ ಎಚ್ಡಿಕೆ ಅವರ ಕಥೆ. ಎಆರ್ಎಐ ಸಂಸ್ಥೆಯ ಎಲ್ಲಾ ಷರತ್ತುಗಳನ್ನು ಒಪ್ಪಿ ಜಿಲ್ಲಾಧಿಕಾರಿಗಳು ವಿವರಿಸಿದ್ದಾರೆ. ಕೈಗಾರಿಕಾ ಪ್ರದೇಶಕ್ಕೆ ಭೂಮಿ ನೀಡಲು ನಾವು ಎಲ್ಲಾ ಸಿದ್ಧತೆಗಳನ್ನು ಮಾಡಿದ್ದೇವೆ. ಆದರೆ, ಈ ಕೈಗಾರಿಕೆ ತರಲು ಕುಮಾರಸ್ವಾಮಿ ಅವರಿಂದ ಸಾಧ್ಯವಾಗುತ್ತಿಲ್ಲ. ಉದ್ದೇಶಿತ ಭೂಮಿಯಲ್ಲಿ ಕೈಗಾರಿಕೆ ತಂದರೆ ಯಾವುದೇ ಲಾಭ ಇಲ್ಲ, ಈಗಾಗಲೇ ಕೈಗಾರಿಕೆಗಳಿರುವ ಪ್ರದೇಶದಲ್ಲಿ ಎಆರ್ಎಐ ಸ್ಥಾಪಿಸಬೇಕು ಎಂದು ಕುಮಾರಸ್ವಾಮಿ ಅವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೂ ನಾವು ಸಚಿವ ಸಂಪುಟದಲ್ಲಿ ನೂರು ಎಕರೆ ಭೂಮಿಗೆ ಅನುಮೋದನೆ ಕೊಡಿಸುತ್ತೇವೆ. ಅವರು ಹೇಳಿದಂತೆ ಎಆರ್ಎಐ ಸಂಸ್ಥೆಯನ್ನು ಸ್ಥಾಪಿಸಲು ಹೇಳಿ ಎಂದು ಜೆಡಿಎಸ್ ಶಾಸಕರಿಗೆ ಸಚಿವರು ತಿರುಗೇಟು ನೀಡಿದರು.
ಈ ವೇಳೆ ಶಾಸಕರಾದ ಎಚ್.ಟಿ.ಮಂಜು ಹಾಗೂ ಕೆ.ವಿವೇಕಾನಂದ ಅವರು ನೀವು ಆದಷ್ಟು ಬೇಗ ನೂರು ಎಕರೆ ಭೂಮಿಯನ್ನು ಕೆಐಎಡಿಬಿಗೆ ಹಸ್ತಾಂತರ ಮಾಡಿಸಿ. ನಾವು ಕೇಂದ್ರ ಸಚಿವರ ಮೇಲೆ ಒತ್ತಡ ತಂದು ಕೈಗಾರಿಕೆ ತರುವ ಪ್ರಯತ್ನ ಮಾಡುವುದಾಗಿ ಹೇಳಿದರು.ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್- ವೇನಲ್ಲಿ ನಿಡಘಟ್ಟ ಬಳಿ ಇರುವ ಪ್ರವೇಶ ಮತ್ತು ನಿರ್ಗಮನ ಮಾರ್ಗವನ್ನು ಬದಲಾಯಿಸುವ ಪ್ರಕ್ರಿಯೆ ನಡೆಸಲಾಗಿದೆ. ಚನ್ನಪಟ್ಟಣಕ್ಕೆ ಸೇರಿದ ಚಾಮುಂಡೇಶ್ವರಿ ಆಸ್ಪತ್ರೆ ಬಳಿ ಪ್ರವೇಶ ಮತ್ತು ನಿರ್ಗಮನ ನೀಡಲು ಕಾಮಗಾರಿ ನಡೆಸಲು ಮುಂದಾಗಿದ್ದಾರೆ. ಈ ಬದಲಾವಣೆ ಏಕೆ. ಈಗಿರುವ ಸ್ಥಳದಲ್ಲಿ ಆಗುತ್ತಿರುವ ತೊಂದರೆಯಾದರೂ ಏನು ಎನ್ನುವುದಕ್ಕೆ ಉತ್ತರ ಸಿಕ್ಕಿಲ್ಲ. ಇದರ ಬಗ್ಗೆ ಕೇಂದ್ರ ಸಚಿವರ ಗಮನಸೆಳೆದು ಅದನ್ನು ಬದಲಾವಣೆ ಮಾಡದಂತೆ ಮನವೊಲಿಸಿ. ಇದರ ಜೊತೆಗೆ ಕೆಆರ್ಎಸ್ ಬಳಿ ಐಐಟಿ ಕಾಲೇಜು ತರುವುದಕ್ಕೂ ಅವಕಾಶವಿದೆ. ಅದರ ಬಗ್ಗೆಯೂ ಸಲಹೆ ಕೊಡುವಂತೆ ಜೆಡಿಎಸ್ ಶಾಸಕರಿಗೆ ಸಚಿವರು ಸಲಹೆ ನೀಡಿದರು.
ಸಭೆಯಲ್ಲಿ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಓ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ, ಶಾಸಕರಾದ ಪಿ.ರವಿಕುಮಾರ್, ಕೆ.ಎಂ.ಉದಯ್, ಎಚ್.ಟಿ.ಮಂಜು, ದಿನೇಶ್ಗೂಳಿಗೌಡ, ಮಧು ಜಿ.ಮಾದೇಗೌಡ, ಕೆ.ವಿವೇಕಾನಂದ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಇದ್ದರು.