ಸಾರಾಂಶ
ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅತೀವ ಮುಸ್ಲಿಂ ತುಷ್ಟೀಕರಣದಲ್ಲಿ ತೊಡಗಿರುವ ಸಿದ್ದರಾಮಯ್ಯ ಸರ್ಕಾರ ತಕ್ಷಣ ವಕ್ಫ್ ಸಚಿವ ಜಮೀರ್ ಅಹ್ಮದ್ ರಾಜೀನಾಮೆ ಪಡೆಯಬೇಕು ಎಂದು ಕಿಶೋರ್ ಕುಮಾರ್ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಮುಡಾ ಹಗರಣದಲ್ಲಿ ತನಿಖೆ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಜಮೀರ್ ಅಹ್ಮದ್‌ಗೆ ಕುಮ್ಮಕ್ಕು ನೀಡಿ ವಕ್ಫ್ ಬೋರ್ಡ್ ಮೂಲಕ ‘ಲ್ಯಾಂಡ್ ಜಿಹಾದ್’ ಷಡ್ಯಂತ್ರವನ್ನು ರಚಿಸಿ ರಾಜ್ಯದ ಜನತೆಯನ್ನು ರೊಚ್ಚಿಗೆಬ್ಬಿಸಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆರೋಪಿಸಿದ್ದಾರೆ.ಭ್ರಷ್ಟಾಚಾರ ಮತ್ತು ಹಗರಣಗಳ ಸರಮಾಲೆಯಿಂದ ರಾಜ್ಯದ ಆರ್ಥಿಕತೆಯು ಸಂಪೂರ್ಣ ಹಳಿತಪ್ಪಿ ದಿವಾಳಿತನದ ಅಂಚಿಗೆ ತಲುಪಿದ್ದರೂ, ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ 10 ಸಾವಿರ ಕೋಟಿ ರು. ಅನುದಾನ ನೀಡುತ್ತೇನೆ ಎಂದು ಪುಂಗಿ ಊದಿದ್ದ ಸಿದ್ದರಾಮಯ್ಯ, ಈಗ ವಕ್ಫ್ ಸಚಿವ ಜಮೀರ್ ಅಹ್ಮದ್ ಮೂಲಕ ವಕ್ಫ್ ಅದಾಲತ್ ನಡೆಸಿ, ರಾಜ್ಯಾದ್ಯಂತ ನೂರಾರು ವರ್ಷಗಳ ಇತಿಹಾಸವಿರುವ ಮಠ ಮಂದಿರ, ದೇವಸ್ಥಾನಗಳ ಸಹಿತ ರೈತರ ಸಿರಾಸ್ತಿಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರನ್ನು ಅನಧಿಕೃತವಾಗಿ ಸೇರ್ಪಡೆಗೊಳಿಸಿ ಮುಸ್ಲಿಂ ತುಷ್ಟೀಕರಣ ನೀತಿಯ ಪರಮಾವಧಿಯನ್ನು ಪ್ರದರ್ಶಿಸಿದ್ದಾರೆ ಎಂದವರು ತಿಳಿಸಿದ್ದಾರೆ.ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅತೀವ ಮುಸ್ಲಿಂ ತುಷ್ಟೀಕರಣದಲ್ಲಿ ತೊಡಗಿರುವ ಸಿದ್ದರಾಮಯ್ಯ ಸರ್ಕಾರ ತಕ್ಷಣ ವಕ್ಫ್ ಸಚಿವ ಜಮೀರ್ ಅಹ್ಮದ್ ರಾಜೀನಾಮೆಯನ್ನು ಪಡೆದು, ರಾಜ್ಯಾದ್ಯಂತ ಪಹಣಿ ಪತ್ರಗಳಲ್ಲಿ ಅನಧಿಕೃತವಾಗಿ ನಮೂದಿಸಲ್ಪಟ್ಟ ವಕ್ಫ್ ಹೆಸರನ್ನು ರದ್ದುಪಡಿಸಿ, ನೋಟಿಸ್ ಹಿಂಪಡೆಯುವ ಮಾದರಿಯಲ್ಲೇ 1974ರ ಗಜೆಟ್ ನೋಟಿಫಿಕೇಶನ್ ಕೂಡ ಹಿಂಪಡೆದು ರದ್ದುಗೊಳಿಸಬೇಕು. ತಪ್ಪಿದಲ್ಲಿ ತಾಲೂಕು, ಜಿಲ್ಲೆ ಸಹಿತ ಇಡೀ ರಾಜ್ಯದಲ್ಲಿ ಚಾಲನೆಗೊಂಡಿರುವ ಬಿಜೆಪಿ ಪ್ರತಿಭಟನೆ ಇನ್ನಷ್ಟು ತೀವ್ರ ಸ್ವರೂಪ ಪಡೆಯಲಿದೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.