ಹಿಂದೂ ರೈತ ಕುಟುಂಬಕ್ಕೆ ಸೇರಿದ ಜಮೀನು ಮುಸ್ಲಿಂ ಸ್ಮಶಾನ ಭೂಮಿಯಾಗಿ ಬಳಕೆ

ಕನ್ನಡಪ್ರಭ ವಾರ್ತೆ ಅಂಕೋಲಾಭೂನ್ಯಾಯ ಮಂಡಳಿಯಲ್ಲಿ ಪ್ರಕರಣ ಬಾಕಿ ಇರುವಾಗಲೇ ಹಿಂದೂ ರೈತ ಕುಟುಂಬಕ್ಕೆ ಸೇರಿರುವ ಐದು ಎಕರೆ ಭೂಮಿಯನ್ನು ಅಂಜುಮನ್ ಇಸ್ಲಾಂ ಸಂಸ್ಥೆ ದರ್ಪದಿಂದ ಮುಸ್ಲಿಂ ಸ್ಮಶಾನ ಭೂಮಿಯಾಗಿ ಬಳಸುತ್ತಿದ್ದು, ಲ್ಯಾಂಡ್ ಜಿಹಾದ್ ಮೂಲಕ ಭೂ ಕಬಳಿಕೆಯ ತಂತ್ರಗಾರಿಕೆ ನಡೆಸುತ್ತಿದ್ದಾರೆ ಎಂದು ಶ್ರೀರಾಮ ಸೇನೆಯ ಮುಖಂಡ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.ನಮ್ಮ ಆಸ್ತಿಯಾದ ವಿವಾದಿತ ಮುಸ್ಲಿಂ ಸ್ಮಶಾನ ಭೂಮಿಯನ್ನು ತಮಗೆ ಮರಳಿಸಿ ನ್ಯಾಯ ಕೊಡಿಸುವಂತೆ ಶಾಂತಾರಾಮ ನಾಯ್ಕ ಸೇರಿದಂತೆ ಹಲವರು ಮಾಡಿದ ಮನವಿಯಂತೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿಯ ವಾಸ್ತವತೆ ಪರಿಶೀಲಿಸಿ ಸುದ್ಧಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಪುರಸಭೆ ವ್ಯಾಪ್ತಿಯಲ್ಲಿರುವ ಬೊಬ್ರವಾಡದ 5 ಎಕರೆ ಜಮೀನನ್ನು ರೈತ ಕುಟುಂಬಕ್ಕೆ ಗೇಣಿ ನೀಡಿದ್ದ ಜಮೀನಿನ ಮಾಲಕ ಶಂಶುದ್ದಿನ್ ಎಂಬಾತನಿಂದ ಜಮೀನನ್ನು ಅಂದಿನ ರೈತರು ಕ್ರಯ ಪಡೆದು ಅವರ ಹೆಸರಿಗೆ ನೋಂದಣಿ ಮಾಡಿಕೊಂಡಿರುತ್ತಾರೆ. ಅದಲ್ಲದೆ ಅಲ್ಲಿಂದ ಇಲ್ಲಿಯವರೆಗೆ ಈ ಭೂಮಿ ನಾಯ್ಕ ಕುಟುಂಬದ ರೈತರ ಹೆಸರಿನಲ್ಲಿದ್ದು, ಈ ಮಧ್ಯೆ ಅಂಜುಮನ್ ಇಸ್ಲಾಂ ಸಂಸ್ಥೆ ಮತ್ತು ವಕ್ಫ್ ಬೋರ್ಡ್ ಇದು ತಮಗೆ ಸಂಬಂಧಿಸಿದ ಜಾಗ ಎಂದು ದಾವೆ ಹೂಡಿದ್ದರಿಂದ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಜಮೀನು ರೈತರ ಕುಟುಂಬಕ್ಕೆ ಸಂಬಂಧಿಸಿದೆ ಎಂದು ಆದೇಶ ಹೊರಡಿಸಿದೆ. ನ್ಯಾಯಾಲಯದ ತೀರ್ಪಿನ ಹೊರತಾಗಿಯೂ ಎರಡು ಎಕರೆ ಜಮೀನಿನ ಅತಿಕ್ರಮಣ ಮಾಡಲಾಗಿದ್ದು, ತಾಲೂಕಿನಲ್ಲಿ ಮುಸ್ಲಿಮರ ಸ್ಮಶಾನಕ್ಕಾಗಿಯೇ ಕೃಷ್ಣಾಪುರದಲ್ಲಿ ಐದು ಎಕರೆ ಭೂಮಿಯಿದೆ ಅದಲ್ಲದೆ ತಾಲೂಕಿನ ಈ ವ್ಯಾಪ್ತಿಯಲ್ಲಿ ಮೂರರಿಂದ ನಾಲ್ಕು ಕಡೆ ಅವರ ಖಬರಸ್ಥಾನ್ ಇದೆ. ಆದರೂ ಹಿಂದೂಗಳ ಜಮೀನನ್ನು ಕಬಳಿಸುವ ಉದ್ದೇಶದಿಂದಲೇ ಅತಿಕ್ರಮಿಸಿ ಲ್ಯಾಂಡ್ ಜಿಹಾದ್ ನಡೆಸುತ್ತಿದ್ದಾರೆ. ಆದ್ದರಿಂದ ಭೂ ಮಾಲೀಕರು ಅವರ ಜಮೀನಿನಲ್ಲಿ ಕಾಲಿಡದಂತ ಪರಿಸ್ಥಿತಿ ಎದುರಾಗಿದೆ ಎಂದು ವಿಷಾಧಿಸಿದರು.ಈ ಹಿಂದೆ ರೈತರಿಗಿದ್ದ ಈ ಐದು ಎಕರೆ ಜಮೀನಿನ ದಾಖಲೆ ಆಧಾರದಲ್ಲಿ 1976ರಲ್ಲಿ ಪಿ.ಎಲ್.ಡಿ ಬ್ಯಾಂಕ್ ಸಾಲ ಕೂಡ ನೀಡಲಾಗಿತ್ತು, ಇದೀಗ ಉದ್ದೇಶಪೂರ್ವಕವಾಗಿ ಜಮೀನು ಕಬಳಿಸಿ ತೊಂದರೆ ಕೊಡುವುದು ಸರಿಯಲ್ಲ. ಹಿಂದುಗಳ ಆಸ್ತಿಯನ್ನು ಕಬಳಿಸುವ ದಾದಾಗಿರಿಯ ಪೃವೃತ್ತಿ ವಿರುದ್ಧ ಶ್ರೀರಾಮ ಸೇನೆ ಹೋರಾಟ ನಡೆಸಲಿದೆ. ಅತಿಕ್ರಮಣ ಮಾಡಿದವರಿಗೆ ಒಂದು ಇಂಚು ಜಾಗ ಬಿಟ್ಟು ಕೊಡುವುದಿಲ್ಲ, ಈಗ ಇರುವ ಗೋರಿಗಳನ್ನು ಸಂಬಂಧಿಸಿದವರು ತೆರುವುಗೊಳಿಸುವ ಕೆಲಸ ಮಾಡಬೇಕು ಎಂದರು.ಜಮೀನು ರೈತರಿಗೆ ಸೇರಿದ್ದು ಎಂದು ಸಹಾಯಕ ಆಯುಕ್ತರು ಸ್ಪಷ್ಟ ಆದೇಶ ನೀಡಲಿ, ಪೊಲೀಸರ ರಕ್ಷಣೆಯಲ್ಲಿ ಐದು ಎಕರೆ ಜಮೀನಿಗೆ ಬೇಲಿ ಹಾಕುವ ಕೆಲಸ ಆಗಲಿ ಎಂದು ಒತ್ತಾಯಿಸಿದರು.

ಜಮೀನಿಗೆ ಸಂಬಂಧಿಸಿದ ರೈತ ಕುಟುಂಬದ ಹಿರಿಯ ಶಾಂತಾರಾಮ ಮರ್ತು ನಾಯ್ಕ, ವಿಷ್ಣು ಮರ್ತು ನಾಯ್ಕ, ಗಣಪತಿ ನಾಯ್ಕ, ಮಾದೇವ ನಾಯ್ಕ, ದತ್ತಾ ನಾಯ್ಕ, ಹಿಂದೂ ಸಂಘಟನೆಗಳ ಪ್ರಮುಖರಾದ ನಿತ್ಯಾನಂದ ಗಾಂವಕರ, ಚಂದ್ರಕಾಂತ ನಾಯ್ಕ, ಬಿಂದೇಶ ನಾಯ್ಕ, ಧೀರಜ್ ಖಾರ್ವಿ, ಪ್ರವೀಣ ನಾಯ್ಕ, ವಿ.ಎಸ್. ಭಟ್ಟ ಮತ್ತಿತರರು ಇದ್ದರು.ತಾಲೂಕಾಡಳಿತ ಮುಂಬರುವ 15 ದಿನಗಳ ಒಳಗೆ ಅತಿಕ್ರಮಣ ಮಾಡಲಾಗಿದ್ದ 2 ಎಕರೆ ಜಮೀನಲ್ಲಿರುವ ಗೋರಿಗಳನ್ನು ತೆರವುಗೊಳಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು. ಅದಲ್ಲದೆ ಕಬಳಿಕೆ ಮಾಡಿರುವ ಜಮೀನನಲ್ಲಿ ನಿರ್ಮಾಣ ಮಾಡಲಾಗಿರುವ ಎಲ್ಲವನ್ನೂ ನಾವೇ ಕಿತ್ತು ಬಿಸಾಡಬೇಕಾಗುತ್ತದೆ. ಹಾಗೆಯೇ ಕರಾವಳಿಯಾದ್ಯಂತ ಮತಾಂತರ ಪ್ರಕ್ರಿಯೆಗಳು ಎಲ್ಲಾ ಕಡೆಗಳಲ್ಲಿ ಹೆಚ್ಚುತ್ತಿದ್ದು, ಎಲ್ಲಾ ಹಿಂದೂ ಸಂಘಟನೆಗಳು ಒಟ್ಟಾಗಿ ಮತಾಂತರದ ವಿರುದ್ಧ ಸಹ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಸಿದರು.