ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ಆಡಳಿತ ಪಕ್ಷದ ಸದಸ್ಯರ ಜೊತೆಗೆ ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವರು ಸ್ವಾಗತಿಸಿದ್ದಾರೆ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ಆಡಳಿತ ಪಕ್ಷದ ಸದಸ್ಯರ ಜೊತೆಗೆ ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವರು ಸ್ವಾಗತಿಸಿದ್ದಾರೆ. ಕೊಡಗಿನ ಜಮ್ಮಾ ಹಿಡುವಳಿದಾರರು ಕೂಡಾ ಪಕ್ಷಾತೀತವಾಗಿ ಸ್ವಾಗತಿಸಿದ್ದಾರೆ. ಆದರೆ ಕೊಡಗಿನ ಮಾಜಿ ಶಾಸಕರು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿ, ಈ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಆದ್ದರಿಂದ ಬಹಿರಂಗ ಚರ್ಚೆಗೆ ಬರುವಂತೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮಾ ಹಿಡುವಳಿದಾರರು ಎದುರಿಸುತ್ತಿರುವ ಸಮಸ್ಯೆ ಇತ್ಯರ್ಥ ಪಡಿಸಲು ತಾವು ಮತ್ತು ಮಡಿಕೇರಿ ಶಾಸಕ ಡಾ ಮಂತರ್ ಗೌಡ, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಕಂದಾಯ ಸಚಿವರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲರ ನೆರವನ್ನು ಪಡೆದು ತಿದ್ದುಪಡಿ ವಿಧೇಯಕ ಮಂಡನೆಗೆ ಕಳೆದ ಒಂದೂ ವರೆ ವರ್ಷದಿಂದ ಕೆಲಸ ಮಾಡಿರುವುದಾಗಿ ತಿಳಿಸಿದರು.

ಕೊಡಗಿನ ಜಮ್ಮಾ ಬಾಣೆ ಸಮಸ್ಯೆ ಜಟಿಲವಾದ ಸಮಸ್ಯೆಯಾಗಿತ್ತು. 1889 ಕೂರ್ಗ್ ರೆಗ್ಯುಲೇಟ್ ಆಕ್ಟ್ ಗಿಂತ ಮೊದಲು ಮತ್ತು ನಂತರ,1964 ಕರ್ನಾಟಕ ಲ್ಯಾಂಡ್ ರೆವಿನ್ಯೂ ಆಕ್ಟ್ ಗಿಂತ ಮೊದಲು ಮತ್ತು ನಂತರ ಹೀಗೆ ಒಟ್ಟು ನಾಲ್ಕು ಹಂತದ ವಿವರಗಳನ್ನು ಕಲೆ ಹಾಕಿ ಚಕ್ಕೆರ ಪೂವಯ್ಯ v/s ಕರ್ನಾಟಕ ಸರ್ಕಾರ ಕೇಸಿನಲ್ಲಿ ಎ.ಕೆ.ಸುಬ್ಬಯ್ಯ ವಾದ ಮಂಡನೆ ಮಾಡಿದ ಪರಿಣಾಮ 1993 ರಲ್ಲಿ ಮಹತ್ವದ ತೀರ್ಪು ನೀಡಿತ್ತು. ಈ ತೀರ್ಪಿನ ಆಧಾರದಲ್ಲಿ ಜಮ್ಮಾ ಬಾಣೆ ಮಾಲೀಕತ್ವ ಸರ್ಕಾರದಲ್ಲಾ. ಹಿಡುವಳಿದಾರದ್ದೇ ಎಂದು ನೀಡಿದ ಆದೇಶದ ವಿವರಗಳನ್ನು ದಾಖಲೆಗಳನ್ನು ಪ್ರದರ್ಶನ ಮಾಡಿ ಎ.ಎಸ್.ಪೊನ್ನಣ್ಣ ವಿವರಿಸಿದರು.

ವಕೀಲರೂ ಆಗಿರುವ ಕೆ.ಜಿ.ಬೋಪಯ್ಯ ಅವರು ಚಕ್ಕೇರ ಪೂವಯ್ಯ ಅವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರಿಂದ ಪ್ರಯೋಜನ ಆಗಲಿಲ್ಲ ಎಂದು ಹೇಳಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಬಹುಶಃ ಆ ಪ್ರಕರಣದಲ್ಲಿ ವಾದ ಮಂಡಿಸಿದ್ದು ಎ.ಕೆ.ಸುಬ್ಬಯ್ಯ ಎಂದು ಅವರು ಹಾಗೆ ಹೇಳಿರಬಹುದು. ವಾಸ್ತವದಲ್ಲಿ ಚಕ್ಕೇರ ಪೂವಯ್ಯ ಅವರು ಪ್ರಕರಣ ದಾಖಲಿಸದಿದ್ದರೆ ಒಂದು ಇಂಚೂ ಜಮ್ಮಾಬಾಣೆ ಭೂಮಿ ಹಿಡುವಳಿದಾರರಿಗೆ ಸಿಗುತ್ತಿರಲಿಲ್ಲ ಎಂದು ತಿಳಿಸಿದರು.

ಇತ್ತೀಚೆಗೆ ಆದ ಜಮ್ಮಾ ತಿದ್ದುಪಡಿ ವಿಧೇಯಕವನ್ನು ಆಡಳಿತ ಪಕ್ಷದ ಸದಸ್ಯರ ಜೊತೆಗೆ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಡಾ. ಅಶ್ವಥ್ ನಾರಾಯಣ ಗೌಡ, ಅರವಿಂದ್ ಬೆಲ್ಲದ್, ಅರಗ ಜ್ಞಾನೇಂದ್ರ ಸೇರಿದಂತೆ ಅನೇಕರು ಬಹಿರಂಗವಾಗಿ ಸ್ವಾಗತಿಸಿದ್ದಾರೆ. ಆದರೆ ಆರಂಭದಲ್ಲಿ ಮೌನವಾಗಿದ್ದ ಮಾಜಿ ಶಾಸಕದ್ವಯರು ಈಗ ವಿರೋಧ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪೊನ್ನಣ್ಣ ಪ್ರಶ್ನೆ ಮಾಡಿದರು.

ಹಿಂದೆಯೇ ಎಲ್ಲಾ ಸರಿ ಮಾಡಿದ್ದೇವೆ ಎಂದು ಕೆ.ಜಿ.ಬೋಪಯ್ಯನವರು ಮತ್ತು ಅಪ್ಪಚ್ಚು ರಂಜನ್ ಹೇಳಿದ್ದಾರೆ. ಹಾಗಾದರೆ ಕೊಡಗಿನಲ್ಲಿ 22,941 ಏಕರೆ ಜಮ್ಮಾ ಬಾಣೆಗೆ ಇನ್ನೂ ಯಾಕೆ ಕಂದಾಯ ನಿಗದಿಯಾಗಿಲ್ಲ ಎಂದು ಪೊನ್ನಣ್ಣ ಪ್ರಶ್ನೆ ಮಾಡಿದರು.

ಪ್ರತಿಭಟನೆ ಮಾಡುತ್ತೇವೆ: ಮನರೇಗಾದಲ್ಲಿ ದೊಡ್ಡ ಅವ್ಯವಹಾರವಾಗಿದೆ. ಅದರ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂಬ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ವಿಚಾರ ಎಚ್ ಡಿ ಕುಮಾರಸ್ವಾಮಿಗೆ ಶಾಸಕ ಪೊನ್ನಣ್ಣ ತಿರುಗೇಟು ನೀಡಿದರು. ಚರ್ಚೆ ಈಗ ಮಾಡುವುದಲ್ಲ ತಿದ್ದುಪಡಿಗೂ ಮುನ್ನ ಚರ್ಚೆ ಆಗಬೇಕಾಗಿತ್ತು. ಮಹಾತ್ಮಗಾಂಧಿ ಅವರ ಇತಿಹಾಸದ ಕೊಡುಗೆಯನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಅದರ ಮತ್ತೊಂದು ಹೆಜ್ಜೆ ಇದು. ಅದಕ್ಕೆ ಕುಮಾರಸ್ವಾಮಿಯವರು ಸರ್ಕಾರ ಉತ್ತರ ಕೊಡಲಿ. ಈಗ ಆಗಿರುವ ತಿದ್ದುಪಡಿ ಉದ್ಯೋಗ ಗ್ಯಾರಂಟಿಗೆ ಮಾರಕ. ಫಂಡಿಂಗ್ 90-10 ಇತ್ತು. ಹಾಗೆ ಈಗ ಅಗತ್ಯ ಇದ್ದವರಿಗೆ ಉದ್ಯೋಗ ಅಂತ ಮಾಡಿದ್ದಾರೆ. ಆದ್ದರಿಂದ ಉದ್ಯೋಗ ಖಾತ್ರಿ ಗ್ಯಾರಂಟಿ ಇಲ್ಲದಂತೆ ಆಗಿದೆ. 125 ದಿನ ಉದ್ಯೋಗ ಕೊಟ್ಟಿದ್ದೇವೆ ಅಂತ ಹೇಳುತ್ತಿದ್ದಾರೆ. ಆದರೆ ಇದರಲ್ಲಿ 50 ದಿನವೂ ಕೆಲಸ ಇಲ್ಲದಂತೆ ಮಾಡಿದ್ದಾರೆ. ಹಾಗೆಯೇ ವ್ಯವಸಾಯದ ಸಮಯದಲ್ಲಿ ಬ್ಲಾಕ್ ಪಿರೇಡ್ ಅಂತ ಮಾಡಿದ್ದಾರೆ. ಅಂದರೆ ವ್ಯವಸಾಯದ ಸಮಯದಲ್ಲಿ ಯಾರು ಕೆಲಸ ಮಾಡುವಂತಿಲ್ಲ. ಹಾಗಾದರೆ ಎಲ್ಲರೂ ಭೂಮಿ ಹೊಂದಿ ವ್ಯವಸಾಯ ಮಾಡುತ್ತಿದ್ದಾರೆ.ಹೀಗಾಗಿ ನಾವು ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತೇವೆ. ಚರ್ಚೆಗೆ ಕೇಂದ್ರ ಸಚಿವರು ರೆಡಿ ಇದ್ದರೆ ಸ್ವಾಗತಾರ್ಹ ಎಂದರು. ದ್ವೇಷ ಭಾಷಣ ಮಸೂದೆಗೆ ಅಂಕಿತ ಹಾಕದಂತೆ ವಿಪಕ್ಷಗಳು ರಾಜ್ಯಪಾಲರಿಗೆ ಮನವಿ ಮಾಡುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ದ್ವೇಷ ಭಾಷಣ ಮಸೂದೆಯನ್ನು ವಿರೋಧ ಪಕ್ಷಗಳು ಯಾಕೆ ವಿರೋಧಿಸುತ್ತಿವೆ. ಅಂದರೆ ದ್ವೇಷ ಭಾಷಣ ಮಾಡಬೇಕು ಅಂತಲೇ. ರಾಜ್ಯಪಾಲರು ಅದಕ್ಕೆ ಇನ್ನೂ ಅಂಗೀಕಾರ ಮಾಡಿಲ್ಲ. ಅದಕ್ಕಾಗಿ ನಾವು ಕಾಯುತ್ತಿದ್ದೇವೆ. ದ್ವೇಷ ಭಾಷಣ ಮಸೂದೆ ಅಧಿವೇಶನದಲ್ಲಿ ಚರ್ಚೆ ಆಯ್ತು. ಆದರೆ ವಿಪಕ್ಷಗಳ ಕೆಲವು ಸದಸ್ಯರು ಸದನದ ಬಾವಿಗೆ ಬಂದರು. ಇನ್ನು ಕೆಲವರು ಹೊರಗೆ ಹೋದರು. ಅಂದರೆ ವಿರೋಧ ಪಕ್ಷದವರು ವಿರೋಧ ಪಕ್ಷವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಏನೇ ವಿರೋಧ ಇದ್ದರೂ ವಿಧಾನಸಭೆ ಒಳಗೆ ಚರ್ಚೆ ಆಗಬೇಕಾಗಿತ್ತು. ಇವರು ಯಾಕೆ ಸರಿಯಾಗಿ ಚರ್ಚೆ ಮಾಡಲಿಲ್ಲ. ವಿರೋಧ ಪಕ್ಷದಲ್ಲಿ ನಾಲ್ಕೈದು ಗುಂಪುಗಳಾಗಿದೆ. ಅವರವರಲ್ಲಿಯೇ ತೀರ್ಮಾನ ಆಗುತ್ತವೆ.ಗೋಷ್ಠಿಯಲ್ಲಿ ಕರ್ನಾಟಕ ಕ್ರೀಡಾ ಪ್ರಾಧೀಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಕೆಪಿಸಿಸಿ ವಕ್ತಾರ ಹೆಚ್.ಎಸ್.ಚಂದ್ರಮೌಳಿ, ಮಾಜಿ ಎಂ.ಎಲ್.ಸಿ ವೀಣಾ ಅಚ್ಚಯ್ಯ, ಡಿಸಿಸಿ ಉಪಾಧ್ಯಕ್ಷರಾದ ಕೆ.ಎಂ.ಲೋಕೇಶ್ ಮತ್ತಿತರರು ಇದ್ದರು. -------------ಬಾಕ್ಸ್1------------------

ಅದಾಲತ್ ನಡೆಯಲಿದೆ

ಪಟ್ಟಿದಾರ ಸಮಸ್ಯೆ ಬಗೆಯರಿಸಲೇಬೇಕು. ಈ ತಿಪ್ಪುಪಡಿ ಮೂಲಕ ಅಧಿಕಾರವನ್ನು ತಹಸೀಲ್ದಾರರಿಗೆ ನೀಡಿದ್ದೇವೆ. ಪಟ್ಟೆದಾರ ಹೆಸರು ಡಿಲೀಟ್ ಮಾಡಲು ಅಧಿಕಾರ ನೀಡಲಾಗಿದೆ. ಈ ತಿಪ್ಪುಪಡಿ ನಿಯಮಗಳು ಜಾರಿಯಾದ ನಂತರ ಅದಾಲತ್ ಗಳನ್ನು ಮಾಡಲಿದ್ದೇವೆ. ನಾವೇ ಜನರೊಂದಿಗೆ ತೆರಳಿ ಪರಿಹಾರ ಮಾಡುತ್ತೇವೆ ಎಂದು ಪೊನ್ನಣ್ಣ ತಿಳಿಸಿದರು. ------------------ಬಾಕ್ಸ್2-----------------------

ಸಲಹೆ ಕೊಡಲು ಮಂತರ್ ಗೌಡ ಕಿವಿಮಾತು

ಮಡಿಕೇರಿ ಶಾಸಕ ದ ಡಾ ಮಂತರ್ ಗೌಡ ಮಾತನಾಡಿ ಹಲವಾರು ಸಾರ್ವಜನಿಕರು ಜಮೀನು ದಾಖಲೆ ಆಗಿಲ್ಲ. ಜಮ್ಮಾ ಬಾಣೆ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡುತ್ತಿದ್ದು ತಾವು ಹಾಗೂ ಪೊನ್ನಣ್ಣ ನವರು ಈ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂಬ ಧ್ಯೇಯದಿಂದ ಸರ್ಕಾರಕ್ಕೆ ಒತ್ತಡ ತಂದಿದ್ದೇವೆ. ಅಭಿವೃದ್ಧಿ ಕೆಲಸಗಳನ್ನು ಜನರ ಅಪೇಕ್ಷೆಯಂತೆ ಮಾಡುತ್ತಿದ್ದೇವೆ. ಆದರೆ ಮಾಜಿ ಶಾಸಕರು ಅದು ನಾವು ತಂದಿದ್ದು ಎಂದು ಹೇಳಿ ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ. ಅವರಿಗೆ ಅವಕಾಶ ಇದ್ದಾಗ ಬಗೆಯರಿಸಲು ಸಾಧ್ಯವಾಗಿಲ್ಲ ಎಂದರು. ಮಾಜಿ ಶಾಸಕರು ಹಿರಿಯರು, ಅನುಭವಿಗಳು ಆಗಿದ್ದಾರೆ. ಅಪಪ್ರಚಾರ ಮಾಡುವ ಬದಲಿಗೆ ಸಲಹೆ, ಮಾರ್ಗದರ್ಶನ ನೀಡಲಿ ಎಂದು ಹೇಳಿದರು.

ಜಮ್ಮಾ ಬಾಣೆ ಸಮಸ್ಯೆಯ ಪರಿಹಾರದ ರೀತಿಯಲ್ಲಿ ಸಿ.ಅಂಡ್ ಡಿ ಜಮೀನಿನ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.