ಸಾರಾಂಶ
ಬ್ಯಾಡಗಿ: ರಾಜ್ಯದ ಒಟ್ಟು 1.47 ಲಕ್ಷ ಬಡ ಕುಟುಂಬಗಳಿಗೆ ನಿವೇಶನದ ಹಕ್ಕು ಪತ್ರ ಕೊಡಲು ಸಿದ್ಧತೆ ನಡೆದಿದೆ. ಆದರೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ ಎಂದು ಬೊಬ್ಬೆ ಹೊಡೆಯುತ್ತಿರುವ ಬಿಜೆಪಿ ನಾಯಕರಿಗೆ ರಾಜ್ಯದಲ್ಲಿ ನಡೆಯುತ್ತಿರುವ ನಮ್ಮ ಅಭಿವೃದ್ಧಿ ಕಾರ್ಯಗಳು ನಿದ್ದೆಗೆಡಿಸಿವೆ ಎಂದು ವಸತಿ ಸಚಿವ ಬಿ.ಝಡ್. ಜಮೀರ ಅಹ್ಮದ ಖಾನ್ ಲೇವಡಿ ಮಾಡಿದರು.
ಪಟ್ಟಣದ ಎನ್.ಬಿ.ಬಿ.ಲಯನ್ಸ್ ಪ್ರೌಢಶಾಲೆ ಆವರಣದಲ್ಲಿ 419 ಅರ್ಹ ಫಲಾನುಭವಿಗಳಿಗೆ ಆಶ್ರಯ ಯೋಜನೆಯಡಿ ನಿವೇಶನ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು. ಕಳೆದ ಬಾರಿ ಕಾಂಗ್ರೆಸ್ ಅವಧಿಯಲ್ಲಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಕೊಳಚೆ ನಿರ್ಮೂಲನಾ ಮಂಡಳಿ ಹಾಗೂ ರಾಜೀವ ಗಾಂಧಿ ನಿಗಮದ ವಸತಿ ಯೋಜನೆಯಡಿಯಲ್ಲಿ ಒಟ್ಟು 2.60 ಲಕ್ಷ ಮನೆಗಳನ್ನು ಬಡವರಿಗೆ ವಿತರಿಸಿದ್ದು ಬಿಟ್ಟರೆ ಕಳೆದ ಬಿಜೆಪಿ ಸರ್ಕಾರ ಬಡವರಿಗೆ ಒಂದೇ ಒಂದು ಮನೆ ನೀಡದೇ ಮೋಸ ಮಾಡಿದೆ. ಇದು ಬಿಜೆಪಿಗೆ ಬಡವರ ಮೇಲಿನ ಪ್ರೀತಿ ಎಂದು ದೂರಿದರು.ಅಲ್ಪಸಂಖ್ಯಾತರಿಗೆ 5 ಕೋಟಿ: ಬ್ಯಾಡಗಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಬಸವರಾಜ ಶಿವಣ್ಣನವರ ಹಲವು ಬಾರಿ ನನ್ನ ಭೇಟಿಯಾಗಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದು, ಆದೇಶ ಪ್ರತಿಯೊಂದಿಗೆ ಬ್ಯಾಡಗಿಗೆ ಬರುವಂತೆ ಪಟ್ಟು ಹಿಡಿದಿದ್ದರು. ಅವರ ಬೇಡಿಕೆಯಂತೆ ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿಗೆ ₹ 5 ಕೋಟಿ ಹಾಗೂ 43ಕ್ಕೂ ಹೆಚ್ಚು ಮಸೀದಿ ಅಭಿವೃದ್ಧಿಗೆ ₹ 3.5 ಕೋಟಿ ಹಾಗೂ ಜೈನ್ ಸಮುದಾಯಕ್ಕೆ ₹ 20 ಲಕ್ಷ ಅನುದಾನ ಬಿಡುಗಡೆ ಮಾಡಿದ ಆದೇಶ ಪ್ರತಿ ತಂದಿರುವುದಾಗಿ ತಿಳಿಸಿದರು.ಸರ್ವರಿಗೂ ಸೂರು:ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ದೇಶದಲ್ಲಿ ಆಹಾರ ಭದ್ರತೆ, ಸೇರಿದಂತೆ ಉಳುವವನೇ ಭೂಮಿ ಒಡೆಯ, ಕಡ್ಡಾಯ ಶಿಕ್ಷಣ, ರಾಜೀವ ಗಾಂಧಿ ವಸತಿ ನಿಗಮದ ಮೂಲಕ ನಿರಾಶ್ರಿತರಿಗೆ ಮನೆ ಇನ್ನಿತರ ಕ್ರಾಂತಿಕಾರಿ ಯೋಜನೆ ಅನುಷ್ಠಾನ ತಂದಿದ್ದೇ ಕಾಂಗ್ರೆಸ್ ಪಕ್ಷ ಎಂಬುದು ಹೆಮ್ಮೆಯ ವಿಷಯ. ಅದೇ ರೀತಿ ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರ ಆಶಯದಂತೆ ಸೂರಿಲ್ಲದವರಿಗೆ ಸೂರು ಒದಗಿಸುವ ಯೋಜನೆಯನ್ನು ಕಾಂಗ್ರೆಸ್ ಸರಕಾರ ಮುಂದುವರಿಸಿಕೊಂಡು ಹೋಗುತ್ತಿದೆ ಎಂದರು.
ಪ್ರಾಮಾಣಿಕ ಕೆಲಸ: ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಪಟ್ಟಣದಲ್ಲಿನ ಬಡವರ ಕನಸು ಸಾಕಾರವಾಗಲೂ ವಸತಿ ಸಚಿವರು ಹಾಗೂ ಆಶ್ರಯ ಸಮಿತಿ ಸದಸ್ಯರ ಕೊಡುಗೆ ಅಪಾರವಾಗಿದೆ. ರಾಜಕೀಯ ಹಿತಾಸಕ್ತಿಯನ್ನು ಬದಿಗಿಟ್ಟು ಬಡವರಿಗೆ ನಿವೇಶನ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ, ನಿವೇಶನ ದೊರೆಯದವರು ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಅವರಿಗೂ ಸಹ ಮುಂದಿನ ದಿನಗಳಲ್ಲಿ ನಿವೇಶನ ಕೊಡಿಸುವುದಾಗಿ ಭರವಸೆ ನೀಡಿದರು.ವೇದಿಕೆಯಲ್ಲಿ ಶಿಗ್ಗಾಂವಿ ಶಾಸಕ ಯಾಸೀರ್ ಖಾನ್ ಪಠಾಣ, ಹೆಸ್ಕಾಂ ಅಧ್ಯಕ್ಷ ಸೈಯ್ಯದ ಅಜ್ಜಂಪೀರ ಖಾದ್ರಿ, ಮಾಜಿ ಶಾಸಕ ಸುರೇಶಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ, ಸದಸ್ಯರಾದ ಫಕ್ಕೀರಮ್ಮ ಛಲವಾದಿ, ರಾಮಣ್ಣ ಕೋಡಿಹಳ್ಳಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ, ಎಸ್.ಪಿ. ಯಶೋದಾ ವಂಟಗೋಡಿ, ಸಂಜೀವ ನೀರಲಗಿ, ದಾನಪ್ಪ ಚೂರಿ, ಶಂಭನಗೌಡ ಪಾಟೀಲ, ರಮೇಶ ಸುತ್ತಕೋಟಿ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೇಶಿಮಿ, ಸದಸ್ಯ ಗಿರೀಶ ಇಂಡಿಮಠ, ಮಜೀದ್ ಮುಲ್ಲಾ, ದುರ್ಗೇಶ ಗೋಣೆಮ್ಮನವರ, ಲಕ್ಷ್ಮೀ ಬೊಮ್ಮಲಾಪುರ, ಡಾ.ಎ.ಎಂ .ಸೌದಾಗರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.ಭೂಮಿ ಪೂಜೆ ಮಾಡುವೆ: ಶಾಸಕ ಶಿವಣ್ಣನವರ ಬಡವರ ಮೇಲಿನ ಕಾಳಜಿಯಿಂದ ಇಂದು ಪಟ್ಟಣದಲ್ಲಿನ 419 ಜನರಿಗೆ ನಿವೇಶನ ದೊರೆತಿದೆ, ನಿವೇಶನ ಪಡೆದ ಬಡವರಿಗೆ ಮನೆಯನ್ನು ಕಟ್ಟಿಸಿ ಕೊಡಲು ಮನವಿ ಮಾಡಿದ್ದು, ಬರುವ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ನಾನೇ ಸ್ವತಃ ಬಂದು ಭೂಮಿಪೂಜೆ ಮಾಡುವೆ ಎಂದು ವಸತಿ ಸಚಿವ ಬಿ.ಝಡ್.ಜಮೀರ ಅಹಮ್ಮದ ಖಾನ ಹೇಳಿದರು.
;Resize=(128,128))
;Resize=(128,128))