ರೈತರು ಕಳೆದ 30-40 ವರ್ಷಗಳಿಂದ ಜೀವನೋಪಾಯಕ್ಕಾಗಿ ಸರ್ಕಾರಿ ಭೂಮಿ ನಂಬಿಕೊಂಡು ಸಾಗುವಳಿ ಮಾಡುತ್ತಿದ್ದಾರೆ. ಭೂಮಿಯ ಹಕ್ಕು ಕೋರಿ ನಮೂನೆ 50, 53 ಮತ್ತು 57 ರ ಅಡಿ ಅರ್ಜಿ ಸಲ್ಲಿಸಿದ್ದರೂ, ಸರ್ಕಾರ ವರ್ಷಗಳಿಂದ ಅವುಗಳನ್ನು ಇತ್ಯರ್ಥಪಡಿಸದೆ ನೆನಗುದಿಗೆ ಇಟ್ಟಿದೆ.
ಗುಡಿಬಂಡೆ: ಸುಮಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ರೈತರಿಗೆ ಮಂಜೂರು ಮಾಡುವಂತೆ ಆಗ್ರಹಿಸಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಸಾರಥ್ಯದಲ್ಲಿ ಬಗರ್ ಹುಕುಂ ಸಾಗುವಳಿದಾರರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ರೈತರು ಕಳೆದ 30-40 ವರ್ಷಗಳಿಂದ ಜೀವನೋಪಾಯಕ್ಕಾಗಿ ಸರ್ಕಾರಿ ಭೂಮಿ ನಂಬಿಕೊಂಡು ಸಾಗುವಳಿ ಮಾಡುತ್ತಿದ್ದಾರೆ. ಭೂಮಿಯ ಹಕ್ಕು ಕೋರಿ ನಮೂನೆ 50, 53 ಮತ್ತು 57 ರ ಅಡಿ ಅರ್ಜಿ ಸಲ್ಲಿಸಿದ್ದರೂ, ಸರ್ಕಾರ ವರ್ಷಗಳಿಂದ ಅವುಗಳನ್ನು ಇತ್ಯರ್ಥಪಡಿಸದೆ ನೆನಗುದಿಗೆ ಇಟ್ಟಿದೆ. ನಮೂನೆ 57 ರ ಅಡಿ ಅರ್ಜಿಗಳನ್ನು ಪಡೆದ ನಂತರ ಸಂಬಂಧಪಟ್ಟ ಇಲಾಖೆಯು ಯಾವುದೇ ಸಭೆಗಳನ್ನು ನಡೆಸುತ್ತಿಲ್ಲ. ಅಧಿಕಾರಿಗಳು ರೈತರ ಪರವಾಗಿ ನಿಲ್ಲುತ್ತಿಲ್ಲ ಎಂದು ಆರೋಪಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರಿಂದ ಮನವಿ ಸ್ವೀಕರಿಸಿದ ತಹಸೀಲ್ದಾರ್ ಮಾತನಾಡಿ, ನಮೂನೆ 53 ರ ಅಡಿ ನಿಯಮಾನುಸಾರ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಈಗಾಗಲೇ 37 ಅರ್ಜಿಗಳು ಸಿದ್ಧವಾಗಿವೆ. ಕೇವಲ ಎರಡು ತಿಂಗಳ ಒಳಗಾಗಿ ಇವುಗಳನ್ನು ಸಂಪೂರ್ಣವಾಗಿ ಇತ್ಯರ್ಥಪಡಿಸಲಾಗುವುದು. ಬಳಿಕ ನಮೂನೆ 57 ರ ಅಡಿಯಲ್ಲಿ ಬಂದಿರುವ ಅರ್ಜಿಗಳನ್ನು ಹಂತ ಹಂತವಾಗಿ ಪರಿಶೀಲಿಸಿ ಪ್ರಕ್ರಿಯೆ ಮುಗಿಸಲಾಗುವುದು ಎಂದು ಭರವಸೆ ನೀಡಿದರು.
21ಜಿಯುಡಿ2: ಸುಮಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ರೈತರಿಗೆ ಮಂಜೂರು ಮಾಡುವಂತೆ ಆಗ್ರಹಿಸಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ ತಹಸೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.