ಕನ್ನಡಪ್ರಭ ವಾರ್ತೆ ಸಾಗರ
ಕಾಗೋಡು ಸತ್ಯಾಗ್ರಹ ನಡೆದಿರುವುದರಿಂದಲೇ ಗೇಣಿ ರೈತರಿಗೆ ಭೂಮಿಯ ಹಕ್ಕು ಸಿಗುವಂತಾಯಿತು. ಹಾಗಾಗಿ ಕಾಗೋಡು ಚಳವಳಿಯನ್ನು ನಾವು ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ಮಾಜಿ ಶಾಸಕ ಬಿ.ಸ್ವಾಮಿರಾವ್ ಹೇಳಿದರು.ಡಾ.ಎಚ್.ಗಣಪತಿಯಪ್ಪ ಸೇವಾ ಟ್ರಸ್ಟ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾಗೋಡು ಸತ್ಯಾಗ್ರಹ ನೆನಪು ಕಾರ್ಯಕ್ರಮದಲ್ಲಿ ಡಾ.ಎಚ್.ಗಣಪತಿಯಪ್ಪ ನೇಗಿಲಯೋಗಿ ರಾಜ್ಯಮಟ್ಟದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಕಾಗೋಡು ಸತ್ಯಾಗ್ರಹ ಸಹಸ್ರಾರು ಕುಟುಂಬಗಳಿಗೆ ಭೂಮಿಹಕ್ಕು ನೀಡಿದೆ. ಹೋರಾಟದಿಂದ ಉಪಕೃತರಾದವರು ಅದನ್ನು ಸದಾ ನೆನಪಿಸಿಕೊಳ್ಳಬೇಕು ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಜಿಪಂ ಮಾಜಿ ಸದಸ್ಯ ಬಿ.ಆರ್.ಜಯಂತ್, ಕಾಗೋಡು ಚಳವಳಿ ಅನಕ್ಷರಸ್ಥರು ಭೂಮಿಯ ಹಕ್ಕನ್ನು ದಕ್ಕಿಸಿಕೊಳ್ಳಲು ನಡೆಸಿದ ಹೋರಾಟವಾಗಿದೆ. ಈ ಭಾಗದ ಶೇ. ೯೦ಕ್ಕೂ ಹೆಚ್ಚು ಈಡಿಗ ಸಮುದಾಯದವರು ಕಾಗೋಡು ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ಸಿನಲ್ಲಿ ಪಾಲುದಾರರಾಗಿದ್ದಾರೆ. ಇಂತಹ ಕಾಗೋಡು ಚಳವಳಿಯ ಮೂಲಶಕ್ತಿ ಗಣಪತಿಯಪ್ಪ ಎಂದರು.ರಾಜ್ಯದಲ್ಲಿಯೇ ಮೊಟ್ಟಮೊದಲ ರೈತ ಸಂಘವನ್ನು ಸ್ಥಾಪಿಸಿದ್ದು ಡಾ.ಎಚ್.ಗಣಪತಿಯಪ್ಪ ಎಂದು ನೆನಪಿಸಿಕೊಂಡ ಜಯಂತ್, ರೈತ ಸಂಘದ ಸಭೆಯಲ್ಲಿ ಗೇಣಿ ರೈತರಿಗೆ ಭೂಮಿಹಕ್ಕು ಕೊಡಬೇಕು ಎಂಬ ನಿರ್ಣಯ ಮಾಡಿ ೧೯೫೧ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಗಣಪತಿಯಪ್ಪ ಅವರ ಹೋರಾಟವನ್ನು ಹತ್ತಿಕ್ಕಲು ಅವರನ್ನು ಜೈಲಿಗೆ ಕಳಿಸಲಾಗಿತ್ತು. ಈ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ ಅವರು ಸಾಗರ ಸಬ್ ಜೈಲ್‌ಗೆ ಭೇಟಿ ನೀಡಿ ಶುಭಕಾಮನೆ ಸಲ್ಲಿಸಿದ್ದರು. ಕಾಗೋಡು ಚಳವಳಿಯನ್ನು ಸಮಾಜವಾದಿ ಪಕ್ಷ ಹಾಗೂ ಶಾಂತಾವೇರಿ ಗೋಪಾಲಗೌಡರು ಕೈಗೆತ್ತಿಕೊಂಡರು. ಡಾ. ರಾಮ ಮನೋಹರ ಲೋಹಿಯಾ ಸಾಗರಕ್ಕೆ ಬಂದು ಬಂಧಿಯಾದರು. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ದೊಡ್ಡ ಸುದ್ದಿಯಾಗಿತ್ತು ಎಂದು ಕಾಗೋಡು ಚಳವಳಿಯ ದಿನಗಳನ್ನು ಮೆಲುಕು ಹಾಕಿದರು.
೧೯೫೧-೫೨ರಲ್ಲಿ ನಡೆದ ಹೋರಾಟಕ್ಕೆ ೧೯೭೪ರಲ್ಲಿ ಫಲ ಸಿಕ್ಕಿತು. ದೇವರಾಜ ಅರಸು ಮುಖ್ಯಮಂತ್ರಿಗಳಾಗಿ ಕಾಗೋಡು ತಿಮ್ಮಪ್ಪನವರು ಶಾಸಕರಾದ ಮೇಲೆ ಭೂಸುಧಾರಣಾ ಕಾಯ್ದೆ ಜಾರಿಗೆ ಬಂದಿತು. ಗೇಣಿ ರೈತರಿಗೆ ಭೂಮಿ ಹಕ್ಕು ಕೊಡಿಸಲು ಸಾಗರ ತಾಲೂಕಿನಲ್ಲಿ ಕಾಗೋಡು ತಿಮ್ಮಪ್ಪ, ಹೊಸನಗರ ತಾಲೂಕಿನಲ್ಲಿ ಬಿ.ಸ್ವಾಮಿರಾವ್ ಅವಿರತವಾಗಿ ಶ್ರಮಿಸಿದವರು. ಅಂದು ಒಂದು ರೀತಿಯ ನೆಮ್ಮದಿ ಇತ್ತು. ಇಂದು ಗೊಂದಲದ ವಾತಾವರಣವಿದೆ. ಇದೆಲ್ಲದರ ನಡುವೆ ಸ್ವಾಮಿರಾಯರ ಸುದೀರ್ಘ ಹೋರಾಟ, ರಾಜಕೀಯ ಜೀವನ ಗುರುತಿಸಿ ನೇಗಿಲಯೋಗಿ ಪ್ರಶಸ್ತಿ ನೀಡಿರುವುದು ಅಭಿನಂದನಾರ್ಹ ಎಂದು ಹೇಳಿದರು.
ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ಧರ್ಮದರ್ಶಿ ಅಶ್ವಿನಿಕುಮಾರ್, ಪತ್ರಕರ್ತ ಜಿ.ನಾಗೇಶ್, ಟಿ.ವಿ.ಪಾಂಡುರಂಗ, ತೀ.ನ.ಶ್ರೀನಿವಾಸ್ ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿರಣ ಕುಮಾರ್ ವಂದಿಸಿದರು. ಎಚ್.ಜಿ.ಸುಬ್ರಹ್ಮಣ್ಯ ಭಟ್ ನಿರೂಪಿಸಿದರು.