ನಿಯಮ ಪ್ರಕಾರವೇ ಜಿಂದಾಲ್‌ಗೆ ಜಮೀನು ಮಾರಾಟ: ಕೆ.ಸಿ. ಕೊಂಡಯ್ಯ

| Published : Aug 28 2024, 12:48 AM IST

ನಿಯಮ ಪ್ರಕಾರವೇ ಜಿಂದಾಲ್‌ಗೆ ಜಮೀನು ಮಾರಾಟ: ಕೆ.ಸಿ. ಕೊಂಡಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಗೃಹ ಮಂಡಳಿ ಮತ್ತಿತರ ಸಂಸ್ಥೆಗಳಿಗೆ ಸರ್ಕಾರ ಭೂಮಿ ನೀಡಿದಾಗ ಪ್ರಾರಂಭದಲ್ಲಿ ಲೀಸ್ ಕಂ ಸೇಲ್ ಡೀಡ್ ಮಾಡಿಕೊಡುತ್ತದೆ.

ಬಳ್ಳಾರಿ: ಜಿಂದಾಲ್ ಉಕ್ಕು ಕಾರ್ಖಾನೆಗೆ ರಾಜ್ಯ ಸರ್ಕಾರ 3677 ಎಕರೆ ಜಮೀನು ಮಾರಾಟ ಮಾಡಿರುವ ಕ್ರಮವನ್ನು ಸ್ವಾಗತಿಸಿರುವ ಮಾಜಿ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಸಿ. ಕೊಂಡಯ್ಯ, ಈ ವಿಚಾರದಲ್ಲಿ ವಾಸ್ತವಾಂಶ ಅರಿಯದ ಕೆಲ ಪ್ರತಿಪಕ್ಷ ನಾಯಕರು ಆಧಾರ ರಹಿತ ಹೇಳಿಕೆ ನೀಡುತ್ತಿದ್ದಾರೆ ಎಂದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕರ್ನಾಟಕ ಗೃಹ ಮಂಡಳಿ ಮತ್ತಿತರ ಸಂಸ್ಥೆಗಳಿಗೆ ಸರ್ಕಾರ ಭೂಮಿ ನೀಡಿದಾಗ ಪ್ರಾರಂಭದಲ್ಲಿ ಲೀಸ್ ಕಂ ಸೇಲ್ ಡೀಡ್ ಮಾಡಿಕೊಡುತ್ತದೆ. ಗುತ್ತಿಗೆ ಅವಧಿ ಮುಗಿದ ಬಳಿಕ ನಿಯಮಾನುಸಾರ ಅಬ್ಸಲ್ಯೂಟ್ ಸೇಲ್ ಮಾಡಿಕೊಡುತ್ತದೆ. ಅಂತೆಯೇ ಜಿಂದಾಲ್ ವಿಚಾರದಲ್ಲೂ ಸರ್ಕಾರ ನಿಯಮಾನುಸಾರ ಕ್ರಮ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.

ಜಿಂದಾಲ್‌ಗೆ ಲೀಸ್‌ ಕಮ್ ಸೇಲ್ ಆಧಾರದಲ್ಲಿ ಈ ಮೊದಲು ಭೂಮಿ ನೀಡಲಾಗಿತ್ತು. ಜಿಂದಾಲ್ ಸಂಸ್ಥೆ ಸಹ ಗುತ್ತಿಗೆ ಪಡೆದ ಭೂಮಿಯನ್ನು ಅದೇ ಉದ್ದೇಶಕ್ಕಾಗಿಯೇ ಬಳಸಿದೆ. ಗುತ್ತಿಗೆ ಅವಧಿ ನಂತರ ನೇರ ಮಾರಾಟ ಮಾಡುವ ಅಧಿಕಾರ ಸರ್ಕಾರಕ್ಕೆ ಇರುತ್ತದೆ. ಅಂತೆಯೇ ಜಮೀನು ನೀಡಿಕೆ ವಿಚಾರದಲ್ಲಿ ಸರ್ಕಾರ ಪೂರಕ ನಿಯಮ ಅನುಸರಿಸಿದೆಯೇ ಹೊರತು ಯಾರಿಗೂ ಅನ್ಯಾಯ ಮಾಡಿಲ್ಲ. ಈ ಬಗ್ಗೆ ಸರಿಯಾಗಿ ತಿಳಿಯದೇ ಪ್ರತಿಪಕ್ಷಗಳ ನಾಯಕರು ತಮಗೆ ತಿಳಿದಂತೆ ಮಾತನಾಡುವುದು ಸರಿಯಲ್ಲ ಎಂದರು.

ಜಿಂದಾಲ್ ಕಾರ್ಖಾನೆ ಸ್ಥಾಪನೆಯಿಂದಾಗಿಯೇ ಈ ಭಾಗ ಅಭಿವೃದ್ಧಿ ಕಂಡಿದೆ. 1997-98ರಲ್ಲಿ ಉತ್ಪಾದನೆ ಆರಂಭಿಸಿದ ಜಿಂದಾಲ್ ಕಂಪನಿ 2018ನೇ ಸಾಲಿನವರೆಗೆ ಒಟ್ಟು ₹80 ಸಾವಿರ ಕೋಟಿ ತೆರಿಗೆ ಪಾವತಿಸಿದೆ. ಜಿಂದಾಲ್‌ ಸ್ಥಾಪನೆಯಿಂದಾಗಿಯೇ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿದೆ. ನೇರವಾಗಿ 25 ಸಾವಿರ ಹಾಗೂ ಪರೋಕ್ಷವಾಗಿ 2 ಲಕ್ಷ ಜನರಿಗೆ ಉದ್ಯೋಗಾವಕಾಶ ಲಭಿಸಿದೆ. ಸರೋಜಿನಿ ಮಹಿಷಿ ವರದಿಯಂತೆ ಕನ್ನಡಿಗರಿಗೆ ಉದ್ಯೋಗ ನೀಡಲಾಗಿದೆ. ಜಿಂದಾಲ್‌ಗೆ ಕೆಎಐಡಿಬಿ ಮೂಲಕ ಭೂಮಿ ಖರೀದಿಸಿದ್ದರೂ ಭೂಮಿ ಕಳೆದುಕೊಂಡಿರುವ ರೈತ ಕುಟುಂಬದ ಒಬ್ಬರಿಗೆ ಕಾರ್ಖಾನೆಯಲ್ಲಿ ಉದ್ಯೋಗ ನೀಡಲಾಗಿದೆ. ಭೂಮಿ ನೋಂದಣಿಗೆ ರಿಜಿಸ್ಟ್ರೇಷನ್ ವೆಚ್ಚದಿಂದ ವಿನಾಯಿತಿ ಇದ್ದಾಗ್ಯೂ ಸರ್ಕಾರಕ್ಕೆ ನೋಂದಣಿ ಶುಲ್ಕ ಪಾವತಿ ಮಾಡಿತು. ಇದರಿಂದ ಸರ್ಕಾರಕ್ಕೆ ಇನ್ನು ಹೆಚ್ಚಿನ ಆದಾಯ ಬಂತು ಎಂದು ತಿಳಿಸಿದರು.

1997-98ರಲ್ಲಿ 1.5 ಲಕ್ಷ ಟನ್ ಉಕ್ಕು ಉತ್ಪಾದಿಸುತ್ತಿದ್ದ ಜಿಂದಾಲ್ ಕಾರ್ಖಾನೆ ಬಳಿಕ 11 ಮಿಲಿಯನ್ ಟನ್ ಉಕ್ಕು ಉತ್ಪಾದನೆ ಮಾಡಿತು. ಇದೀಗ 18 ಮಿಲಿಯನ್ ಟನ್ ಗುರಿ ತಲುಪಿದ್ದು, ಇನ್ನು 27 ಮಿಲಿಯನ್ ಟನ್ ಹೆಚ್ಚಿಸುವ ಗುರಿ ಇಟ್ಟುಕೊಂಡಿದೆ. 1994ರಿಂದ ಜಿಂದಾಲ್ ಕಾರ್ಖಾನೆಯ ಬೆಳವಣಿಗೆ ಕಂಡಿದ್ದೇನೆ. ಜಿಲ್ಲೆಯ ಅಭಿವೃದ್ಧಿ ನೆಲೆಯಲ್ಲಿ ಕೃಷಿಯಂತೆಯೇ ಕೈಗಾರಿಕೆ ಬೆಳವಣಿಗೆ ಸಹ ಮುಖ್ಯ. ಹೊರ ಜಿಲ್ಲೆಗಳ ನಾಯಕರು ನಮ್ಮ ಬಳ್ಳಾರಿ ಜಿಲ್ಲೆಯ ಕೈಗಾರಿಕೆಗಳ ಕುರಿತು ಏನೇನೋ ಹೇಳಿಕೆ ನೀಡಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಕೆ.ಸಿ.ಕೊಂಡಯ್ಯ ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡರಾದ ಪಿ.ಗಾದೆಪ್ಪ, ಅಯಾಜ್ ಹಾಗೂ ಅವರು ಸುದ್ದಿಗೋಷ್ಠಿಯಲ್ಲಿದ್ದರು.

ಬಳ್ಳಾರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ಮಾತನಾಡಿದರು.