ಮಂಗಳೂರಿನ ನಾಗುರಿಯಲ್ಲಿ ಗುಡ್ಡ ಕುಸಿತ ದುರಂತ ಸಂಭವಿಸಿದ ಮಾದರಿಯೇ 2025ರ ಮೇ 30ರಂದು ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಕೊಪ್ಪಳ ಉರುಮನೆ ಕೋಡಿ ಎಂಬಲ್ಲಿ ಗುಡ್ಡ ಕುಸಿದು ಮೂವರು ಮೃತಪಟ್ಟಿದ್ದು, ಈ ಪ್ರಕರಣದ ಕಹಿ ನೆನಪು ಇನ್ನೂ ಹಸಿಯಾಗಿಯೇ ಇದೆ.

ಉಳ್ಳಾಲ: ಮಂಗಳೂರಿನ ನಾಗುರಿಯಲ್ಲಿ ಗುಡ್ಡ ಕುಸಿತ ದುರಂತ ಸಂಭವಿಸಿದ ಮಾದರಿಯೇ 2025ರ ಮೇ 30ರಂದು ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಕೊಪ್ಪಳ ಉರುಮನೆ ಕೋಡಿ ಎಂಬಲ್ಲಿ ಗುಡ್ಡ ಕುಸಿದು ಮೂವರು ಮೃತಪಟ್ಟಿದ್ದು, ಈ ಪ್ರಕರಣದ ಕಹಿ ನೆನಪು ಇನ್ನೂ ಹಸಿಯಾಗಿಯೇ ಇದೆ. ಈ ದುರ್ಘಟನೆಯಲ್ಲಿ ಸಂತ್ರಸ್ತ ಮಹಿಳೆ ಅಶ್ವಿನಿಯ 3 ವರ್ಷದ ಪುತ್ರ ಆರ್ಯನ್, 6 ತಿಂಗಳ ಆರುಷ್ ಹಾಗೂ ಅತ್ತೆ ಪ್ರೇಮ ಪೂಜಾರಿ ಮೃತಪಟ್ಟಿದ್ದರು. ಅಶ್ವಿನಿ ಗಂಭೀರವಾಗಿ ಗಾಯಗೊಂಡು ತನ್ನೆರಡೂ ಕಾಲುಗಳನ್ನು ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಮಣ್ಣಿನಡಿ ಸಿಲುಕಿದ ಮಕ್ಕಳನ್ನು ರಕ್ಷಿಸಲು ತಾಯಿ ನಡೆಸಿದ ಹೋರಾಟದ ದೃಶ್ಯ ಇಡಿ ರಾಜ್ಯದ ಜನರನ್ನು ಕಣ್ಣೀರಿನಲ್ಲಿ ಮುಳುಗಿಸಿತ್ತು. ಆರಂಭದಲ್ಲಿ ಪ್ರಾಕೃತಿಕ ವಿಕೋಪವೆಂದು ಹೇಳಿದ್ದ ಜಿಲ್ಲಾಡಳಿತದ ನಿಲುವಿಗೆ ವಿರುದ್ಧವಾಗಿ, ಮಾನವ ನಿರ್ಲಕ್ಷ್ಯವೇ ಅವಘಡಕ್ಕೆ ಪ್ರಮುಖ ಕಾರಣ ಎಂಬುದನ್ನು ಎನ್ಐಟಿಕೆ ತಜ್ಞರ ವರದಿ ಬಹಿರಂಗಪಡಿಸಿದೆ.

ಪರಿಹಾರ ಜಮಾ: ಸಚಿವ ದಿನೇಶ್ ಗುಂಡೂರಾವ್ ಈ ಕುಟುಂಬದ ಸಾವನ್ನಪ್ಪಿದವರಿಗೆ ತಲಾ ಐದು ಲಕ್ಷ ರೂ. ಚೆಕ್ ವಿತರಿಸಿದ್ದು ಅದಾಗಲೇ 7.5ಲಕ್ಷ ರೂ. ಕಾಂತಪ್ಪ ಪೂಜಾರಿ ಅವರ ಖಾತೆಗೆ ಜಮಾ ಆಗಿದೆ.

23 ಲಕ್ಷ ರು. ನೆರವು: ಮಂಜನಾಡಿ ಗುಡ್ಡ ಕುಸಿತ ದುರಂತದಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಅವರಿಗೆ ಕೃತಕ ಕಾಲು ಅಳವಡಿಸಲು ಮಹಾರಾಷ್ಟ್ರದ ಲೋಧಾ ಚಾರಿಟೆಬಲ್ ಟ್ರಸ್ಟ್ ₹23 ಲಕ್ಷ ನೆರವು ಒದಗಿಸಿದೆ. ಈ ಮೂಲಕ ಅಶ್ವಿನಿಗೆ ಕೃತಕ ಕಾಲು ಶೀಘ್ರ ಅಳವಡಿಕೆಯಾಗಿ ತರಬೇತಿ ಬಳಿಕ ಆಕೆ ನಡೆದಾಡುವ ಭರವಸೆ ಮೂಡಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಮನವಿ ಮೇರೆಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಹಾರಾಷ್ಟ್ರದ ಸಚಿವ ಮಂಗಲ್ ಪ್ರಭಾತ್ ಲೋಧಾ ಅವರ ನೇತೃತ್ವದ ಟ್ರಸ್ಟ್‌ಗೆ ಮನವಿ ಸಲ್ಲಿಸಿದ್ದು, ಟ್ರಸ್ಟ್ ಕೃತಕ ಕಾಲುಗಳಿಗಾಗಿ ₹23 ಲಕ್ಷವನ್ನು ಎಂಡೋಲೈಟ್ ಕಂಪನಿಗೆ ಪಾವತಿಸಿದೆ.ಮಂಗಳವಾರ ಅಶ್ವಿನಿ ಅವರ ನಿವಾಸಕ್ಕೆ ಭೇಟಿ ನೀಡಿದ ನಳಿನ್ ಕುಮಾರ್ ಕಟೀಲ್ ಅವರು ನೆರವಿನ ಬಗ್ಗೆ ಮಾಹಿತಿ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಸೇರಿದಂತೆ ಬಿಜೆಪಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್‌ ರಾಜ್ ಕೆ. ಆರ್.. ದಯಾನಂದ ತೊಕ್ಕೊಟ್ಟು ಮಂಡಲ ಕೋಶಾಧಿಕಾರಿ ಸುಮಲತಾ ಕೊಣಾಜೆ, ಚಂದ್ರಶೇಖರ್ ಶೆಟ್ಟಿ ಮರಿಕ್ಕಳ, ಸೇವಾ ಭಾರತಿ, ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಉದಯಶಂಕರ್ ಶೆಟ್ಟಿ ಬಲೆತ್ತೋಡು, ಯುವ ಮೋರ್ಚಾ ಅಧ್ಯಕ್ಷ ಮುರಳಿ ಕೊಣಾಜೆ, ಶಕ್ತಿ ಕೇಂದ್ರ ಅಧ್ಯಕ್ಷ ಸುಧಾಕರ ಗಟ್ಟಿ ಹಾಗೂ ರಮೇಶ್ ಬೆದ್ರೋಳಿಕೆ ಉಪಸ್ಥಿತರಿದ್ದರು.