ಸತ್ತ ವ್ಯಕ್ತಿ ಹೆಸರಲ್ಲಿ ಜಮೀನು ಮಾರಾಟ: ಆರೋಪಿ ಸೆರೆ

| Published : May 08 2025, 12:37 AM IST

ಸಾರಾಂಶ

ನಾಲ್ಕು ದಶಕಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿದ್ದ ಜಮೀನನ್ನು ಮಾರಾಟ ಮಾಡಿದ ಪ್ರಕರಣ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಅಥಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಕಾಗವಾಡ

ನಾಲ್ಕು ದಶಕಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿದ್ದ ಜಮೀನನ್ನು ಮಾರಾಟ ಮಾಡಿದ ಪ್ರಕರಣ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಅಥಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತಾರದಲ್ಲಿ ಮೂಲ ಮಾಲೀಕರ ಹೆಸರು ದಾಖಲಾಗುವ ಮೂಲಕ ಪ್ರಕರಣ ಇತ್ಯರ್ಥ ಹಂತಕ್ಕೆ ಬಂದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಶಿವಪ್ಪ ರಾಯಪ್ಪ ಚಿನಿವಾರ ನಾನೇ ಅಂತಾ ಹೇಳಿ ಮಹಾರಾಷ್ಟ್ರದ ಬೂದಗಾಂವ ಗ್ರಾಮದ ಸುಧಾಮ ಬಂಡಗರ ಎಂಬಾತ ತಪ್ಪೊಪ್ಪಿಕೊಂಡಿದ್ದು, ಈತನನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.

ಸತ್ತ ವ್ಯಕ್ತಿಯ ಹೆಸರಿನಲ್ಲಿ 13 ಎಕರೆ ಜಮೀನು ಮಾರಾಟ ಎಂಬ ಶಿರ್ಷಿಕೆಯಡಿ ಕನ್ನಡಫ್ರಭ ದಿನಪತ್ರಿಕೆಯಲ್ಲಿ ಜ.27ರಂದು ಈ ಕುರಿತು ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ್ದ ಪೊಲೀಸ್ ಅಧಿಕಾರಿಗಳು ತನಿಖೆಗೆ ಇಳಿದು, ಪ್ರಕರಣದ ಸತ್ಯಾಸತ್ಯತೆ ಹೊರಗೆ ತಂದಿದ್ದಾರೆ.

ಘಟನೆ ಹಿನ್ನೆಲೆ:

ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಅನಂತಪೂರ ಗ್ರಾಮದ ಶಿವಪ್ಪ ರಾಯಪ್ಪ ಚಿನಿವಾರ ಎಂಬಾತ 1980 ಜನವರಿ 30ರಂದು ಮೃತಪಟ್ಟಿದ್ದು, ಆದರೆ, ಈತ ಬದುಕಿದ್ದಾನೆ ಎಂಬಂತೆ ನಕಲಿ ವ್ಯಕ್ತಿ, ದಾಖಲೆ ಸೃಷ್ಟಿಸಿ ಮೃತನ ಹೆಸರಿಗಿದ್ದ 13 ಎಕರೆ 30 ಗುಂಟೆ ಜಮೀನನ್ನು ಮಹಾರಾಷ್ಟ್ರದ ವ್ಯಕ್ತಿಗೆ ಮಾರಾಟ ಮಾಡಲಾಗಿತ್ತು. ಹೀಗಾಗಿ, ಶಿವಪ್ಪ ಚಿನಿವಾರ ಅವರ ಮೊಮ್ಮಗ ಅಥಣಿ ಪೊಲೀಸ್ ಠಾಣೆ ಮೊರೆ ಹೋಗಿದ್ದರು.

ಅನಂತಪೂರ ಗ್ರಾಮದ ಕೆಲ ಏಜೆಂಟರು ನಕಲಿ ದಾಖಲೆಗಳೊಂದಿಗೆ ಶಿವಪ್ಪನ ಜಮೀನು ಲಪಟಾಯಿಸಿ, ಅದನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಾಸಗಾಂವ ತಾಲೂಕಿನ ಡೊಂಗರಸೋನೆ ಗ್ರಾಮದ ಅಶೋಕ ರಾಣಪ್ಪ ಮಾನೆ ಎಂಬುವರಿಗೆ ಮಾರಾಟ ಮಾಡಿದ್ದರು. ನಕಲಿ ದಾಖಲೆ, ವ್ಯಕ್ತಿ, ಸಾಕ್ಷಿದಾರರ ಸಹಿಯೊಂದಿಗೆ ಅಥಣಿಯ ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಖರೀದಿ ನೋಂದಣಿ ಮಾಡಿ ಕಾನೂನಿನ ಕಣ್ಣಿಗೆ ಮಣ್ಣೆರಿಚಿದ್ದರು. ಕಕಮರಿ ಗ್ರಾಮದ ಕಲ್ಮೇಶ ಗಿರಿಮಲ್ಲಪ್ಪ ಬಾಳಿಕಾಯಿ ದಸ್ತು ಬರಹಗಾರ ಮತ್ತು ಕೆಲ ಏಜಂಟರು ಶಾಮಿಲಾಗಿದ್ದಾರೆ ಎಂಬ ಆರೋಪವು ಕೇಳಿ ಬಂದಿತ್ತು.

ಸರಿಯಾದ ದಾಖಲೆಗಳು:

ಖೊಟ್ಟಿ ಖರೀದಿ ಪತ್ರ ಮಾಡಿಕೊಂಡು ಪಹಣಿ ಪತ್ರದಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದ ಡೊಂಗರಸೂನೆ ಗ್ರಾಮದ ಅಶೋಕ ರಾಯಪ್ಪ ಮಾನೆಯ ಹೆಸರು ಕಡಿಮೆ ಮಾಡಿ, ಗ್ರಾಮ ಆಡಳಿತಾಧಿಕಾರಿಗಳು, ಅಥಣಿಯ ತಹಸೀಲ್ದಾರ್‌ ವರದಿಯ ಆಧಾರದ ಮೇಲೆ ಉಪ ವಿಭಾಗಾಧಿಕಾರಿಗಳು ಮಾಲೀಕನ ಹೆಸರು ದಾಖಲಿಸಲು ಆದೇಶಿಸಿದ್ದರಿಂದ ಉತಾರದಲ್ಲಿ ವಾರಸಾ ಮಾಡಿಕೊಂಡಿದ್ದು ದಾಖಲೆಗಳು ಮೊದಲಿನಂತೆ ಸರಿಯಾಗಿವೆ. ಪ್ರಕರಣದ ಗಂಭೀರತೆ ಅರಿತು ಶೀಘ್ರವೇ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಲ್ಲಿ ಆರೋಪಿಗಳಿಗೆ ತಕ್ಕ ಶಾಸ್ತಿಯಾಗುತ್ತದೆ. ನಮಗೆ ಆದ ಅನ್ಯಾಯ ಇನ್ನೊಬ್ಬರಿಗೆ ಆಗಬಾರದೆಂದು ಸಂತೋಷ ಚಿನಿವಾರ ಒತ್ತಾಯಿಸಿದ್ದಾರೆ.