ಭೂ ಮಾಫಿಯಾದ ಹೊಸ ತಂತ್ರ ಬಯಲು

ದಾಖಲೆಯಲ್ಲಿ ‘ಜೀವಂತ’ರಾದ ಮೃತ ಮಾಲೀಕರು

ಅಂಕೋಲಾದಲ್ಲಿ ಕೋಟ್ಯಂತರ ಮೌಲ್ಯದ ಭೂಮಿ ಮಾರಾಟ!ರಾಘು ಕಾಕರಮಠಕನ್ನಡಪ್ರಭ ವಾರ್ತೆ ಅಂಕೋಲಾನಾಲ್ಕು ದಶಕಗಳ ಹಿಂದೆಯೇ ಮೃತಪಟ್ಟ ವ್ಯಕ್ತಿ ಬದುಕಿದ್ದಾನೆಂದು ದಾಖಲೆಗಳನ್ನು ತಿದ್ದುಪಡಿ ಮಾಡಿ ಕೋಟ್ಯಂತರ ಮೌಲ್ಯದ ಆತನ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿರುವ ಆತಂಕಕಾರಿ ವಿದ್ಯಮಾನ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.2026ರ ಫೆಬ್ರವರಿ 26ರಂದು ಅಂಕೋಲಾ ಉಪ ನೋಂದಣಿ ಕಚೇರಿಯಲ್ಲಿ ನಡೆದ ಜಮೀನು ನೋಂದಣಿ ಪ್ರಕ್ರಿಯೆಯೆ ಈ ರಾದ್ಧಾಂತಕ್ಕೆ ಸಾಕ್ಷಿಯಾಗಿದ್ದು, ತಾಲೂಕಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಜಿಲ್ಲಾಡಳಿತಕ್ಕೆ ವರದಿ ರವಾನಿಸಿದೆ.

ತಾಲೂಕಿನ ಬೊಗ್ರಿಬೈಲ್ ಗ್ರಾಮದ ಸರ್ವೇ ನಂಬರ್ 25, ಹಿಸ್ಸಾ ನಂ.1ರಲ್ಲಿರುವ 7 ಎಕರೆ 26 ಗುಂಟೆ ಜಮೀನನ್ನು ಶಿವಮೊಗ್ಗ ಮೂಲದ ಶಿವಕುಮಾರ ಮುರಗೇಶ ರಾಮಸ್ವಾಮಿ ಎಂಬವರಿಗೆ ಮಾರಾಟ ಮಾಡಲಾಗಿದೆ. ಜಮೀನು ಪರಭಾರೆಗಾಗಿ ತಹಸೀಲ್ದಾರ್‌ ಕಚೇರಿಗೆ ಬಂದಾಗ ಕಂದಾಯ ನಿರೀಕ್ಷಕರು ಅನುಮಾನಗೊಂಡು ದಾಖಲೆಗಳ ಪರಿಶೀಲನೆ ನಡೆಸಡಿದಾಗ ಈ ಅಕ್ರಮದ ಸಂಗತಿ ಹೊರ ಬಿದ್ದಿದೆ.ಮೃತರೇ ಮಾರಾಟಗಾರರು:

ಜಮೀನಿನ ಮೂಲ ಮಾಲೀಕರಾಗಿದ್ದ 9 ಮಂದಿಯ ಹೆಸರಿನಲ್ಲಿ ಮಾರಾಟ ದಾಖಲೆ ಸಿದ್ಧಪಡಿಸಲಾಗಿದೆ. ಆದರೆ ಈ ಪೈಕಿ ಹಲವರು ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಕುಟುಂಬಸ್ಥರಿಂದ ಬಹಿರಂಗವಾಗಿದೆ. ಮೃತ ವ್ಯಕ್ತಿಗಳ ಹೆಸರಿನಲ್ಲಿ ಆಧಾರ್‌ ಗುರುತಿನ ದಾಖಲೆಗಳು ಸೃಷ್ಟಿಸಿ, ಅವರ ಹೆಸರಿನಲ್ಲಿ ನಕಲಿ ವ್ಯಕ್ತಿಗಳನ್ನು ಸಿದ್ಧಪಡಿಸಿ ನೋಂದಣಿ ಕಚೇರಿಗೆ ಹಾಜರುಪಡಿಸಲಾಗಿದೆ.ಈ ಪ್ರಕರಣದಲ್ಲಿ ಮುಕುಂದ ನಾರಾಯಣ ಪ್ರಭು, ಹರಿ ಅನಂತ ಪೈ, ರಾಧಾಕೃಷ್ಣ ಮಂಜುನಾಥ ಪೈ ಸೇರಿ 9 ಮಂದಿಯ ಹೆಸರನ್ನು ಬಳಸಲಾಗಿದೆ. ಇವರಲ್ಲಿ ಕೆಲವರು ಜೀವಂತವಾಗಿದ್ದರೂ, ಕೆಲವರು ಮೃತಪಟ್ಟಿದ್ದಾರೆ. ನಿಜವಾದ ಮಾಲೀಕರು ಯಾರು? ದಾಖಲೆಗಳಲ್ಲಿ ಕಾಣಿಸಿಕೊಂಡವರು ಯಾರು? ಎಂಬ ಪ್ರಶ್ನೆ ತಾಲೂಕಾಡಳಿತಕ್ಕೆ ಎದುರಾಗಿದೆ.


ಅಂಕೋಲಾದವರು ವಿಜಯಪುರದವರಾದರೇ?:ಪ್ರಕರಣದ ಮತ್ತೊಂದು ಅಚ್ಚರಿಯ ಅಂಶವೆಂದರೆ, ದಾಖಲೆಗಳಲ್ಲಿ ಕಾಣಿಸಿಕೊಂಡ ವ್ಯಕ್ತಿಗಳು ವಿಜಯಪುರ ಜಿಲ್ಲೆಯ ವಿಳಾಸ ಹೊಂದಿರುವುದು. ಮೂಲತಃ ಅಂಕೋಲಾ ಭಾಗದ ಜಮೀನು ಮಾಲೀಕರು ಏಕಾಏಕಿ ಬೇರೆ ಜಿಲ್ಲೆಯ ನಿವಾಸಿಗಳಾಗಿ ದಾಖಲಾಗಿರುವುದು ಅಧಿಕಾರಿಗಳ ಪರಿಶೀಲನೆಗೆ ಒಳಪಡದೆ ಹೇಗೆ ನೋಂದಣಿಯಾಯಿತು ಎಂಬ ಪ್ರಶ್ನೆ ಎದುರಾಗಿದೆ.

ಭಾರಿ ಜಾಲದ ಶಂಕೆ:ಈ ಪ್ರಕರಣದಲ್ಲಿ ಆಧಾರ್ ಸೇರಿದಂತೆ ಗುರುತಿನ ದಾಖಲೆಗಳನ್ನು ವ್ಯವಸ್ಥಿತ ಮಾಡಲಾಗಿದೆ. ದಾಖಲೆ ಸೃಷ್ಟಿಯಲ್ಲದೆ, ಆ ದಾಖಲೆಗಳಿಗೆ ಹೊಂದುವಂತೆ ವ್ಯಕ್ತಿಗಳನ್ನು ಸಿದ್ಧಪಡಿಸಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿರುವ ಅಕ್ರಮದ ಹಿಂದೆ ಭಾರಿ ಜಾಲವಿರುವ ಶಂಕೆಯಿದೆ.

ಹೀಗೆ ಮಾಲೀಕರ ಪರಿಚಯವಿದೆ ಎಂದು ಪ್ರಮಾಣೀಕರಿಸುವ ಕಾಲಂನಲ್ಲಿ ಮಾರುತಿ ಬೆಚ್ಚುಗೌಡ ಹಾಗೂ ಸಂತೋಷ ಬುದ್ದು ಗೌಡ ಎಂಬವರು ಸಹಿ ಹಾಕಿದ್ದಾರೆ. ನಿಜವಾದ ಮಾಲೀಕರನ್ನು ಗುರುತಿಸಿ ಸಹಿ ಹಾಕಿದರೇ? ಅಥವಾ ತಪ್ಪು ಮಾಹಿತಿ ಆಧರಿಸಿ ಸಹಿ ಮಾಡಿದ್ದಾರೇ? ಎಂಬುದು ತನಿಖೆಯಿಂದ ಹೊರಬರಬೇಕಿದೆ.

ಈ ಪ್ರಕರಣದ ಹಿಂದೆ ಯಾರಿದ್ದಾರೆ? ನಕಲಿ ದಾಖಲೆ ಸೃಷ್ಟಿಸಿದವರು ಯಾರು? ಸರ್ಕಾರಿ ವ್ಯವಸ್ಥೆಯಲ್ಲಿನ ಯಾವ ಹಂತದಲ್ಲಿ ಲೋಪವಾಗಿದೆ? ಎಂಬುದಕ್ಕೆ ತನಿಖೆಯೇ ಉತ್ತರ ನೀಡಬೇಕಿದೆ. ಅಂಕೋಲಾದಲ್ಲಿ ಬೆಳಕಿಗೆ ಬಂದಿರುವ ಈ ಪ್ರಕರಣ ಭೂ ದಾಖಲೆಗಳ ಭದ್ರತೆಯನ್ನೇ ಪ್ರಶ್ನಿಸುವಂತಿದ್ದು, ತನಿಖೆ ಮುಂದುವರಿದಂತೆ ಇನ್ನಷ್ಟು ಸತ್ಯಗಳು ಹೊರಬರುವ ಸಾಧ್ಯತೆಯಿದೆ.ಈ ಜಮೀನು ನೋಂದಣಿ ಪ್ರಕರಣ ನಮ್ಮ ಗಮನಕ್ಕೆ ಬಂದ ತಕ್ಷಣವೇ ನೋಂದಣಿ ತಡೆಹಿಡಿಯಲಾಗಿದೆ. ಹಾಗೆ ಜಿಲ್ಲಾಧಿಕಾರಿಯವರಿಗೆ ವರದಿ ಕಳುಹಿಸಲಾಗಿದೆ. ಜಿಲ್ಲಾಧಿಕಾರಿಗಳಿಂದ ಮಾರ್ಗದರ್ಶನ ಬಂದ ಕೂಡಲೇ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎನ್ನುತ್ತಾರೆ ತಹಸೀಲ್ದಾರ್‌ ನಿಶ್ಚಲ ನೊರೋನಾ.