ಭೂ ಒತ್ತುವರಿದಾರರು ಆತಂಕ ಪಡುವ ಅಗತ್ಯವಿಲ್ಲ : ಟಿ.ಡಿ. ರಾಜೇಗೌಡ

| Published : Aug 27 2024, 01:35 AM IST

ಭೂ ಒತ್ತುವರಿದಾರರು ಆತಂಕ ಪಡುವ ಅಗತ್ಯವಿಲ್ಲ : ಟಿ.ಡಿ. ರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಸ್ಥಳ ಪರಿಶೀಲಿಸದೆ ಡೀಮ್ಡ್ ಫಾರೆಸ್ಟ್ ಮಾಡಿರುವುದರಿಂದ ಭೂ ಒತ್ತುವರಿದಾರರಿಗೆ ಗೊಂದಲ ಸೃಷ್ಟಿಯಾಗಿದೆ. ಇದರಿಂದ ಜೀವನೋಪಾಯಕ್ಕೆ ಭೂ ಒತ್ತುವರಿ ಮಾಡಿರುವವರು ಆತಂಕ ಪಡುವ ಅಗತ್ಯ ಇಲ್ಲ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಸ್ಥಳ ಪರಿಶೀಲಿಸದೆ ಡೀಮ್ಡ್ ಫಾರೆಸ್ಟ್ ಮಾಡಿರುವುದರಿಂದ ಭೂ ಒತ್ತುವರಿದಾರರಿಗೆ ಗೊಂದಲ ಸೃಷ್ಟಿಯಾಗಿದೆ. ಇದರಿಂದ ಜೀವನೋಪಾಯಕ್ಕೆ ಭೂ ಒತ್ತುವರಿ ಮಾಡಿರುವವರು ಆತಂಕ ಪಡುವ ಅಗತ್ಯ ಇಲ್ಲ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.

ಬಹಳಷ್ಟು ಉಹಾಪೋಹಗಳು ಭೂ ಒತ್ತುವರಿ ಬಗ್ಗೆ ಹರಿದಾಡುತ್ತಿದ್ದು, ಕೆಲವರು ರಾಜಕೀಯ ದುರುದ್ದೇಶದಿಂದ ಸುಳ್ಳು ಅಪಪ್ರಚಾರ ಮಾಡುತ್ತಾ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಈಗಾಗಲೇ ಸರ್ಕಾರ ಒತ್ತುವರಿ ತೆರವು ಕಾರ್ಯ ಸ್ಥಗಿತಗೊಳಿಸಿ ಆದೇಶಿಸಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಒತ್ತುವರಿ ಸಮಸ್ಯೆ ಸಂಬಂಧ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಮಾಜಿ ಸಂಸದ ಜಯ ಪ್ರಕಾಶ್ ಹೆಗ್ಡೆ, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಹಾಗೂ ತಾವೂ, ಜಿಲ್ಲೆಯ ಎಲ್ಲಾ ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ಸಮಸ್ಯೆ ಮನವರಿಕೆ ಮಾಡಿದ್ದೇವೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಅರಣ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಜತೆಗೆ ಕಾನೂನಿನ ಚೌಕಟ್ಟಿನಡಿ ಅರ್ಹ ಪ್ರಕರಣಗಳಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಒತ್ತುವರಿ ಸಮಸ್ಯೆ ಬಹಳಷ್ಟು ವರ್ಷಗಳ ಸಮಸ್ಯೆ. ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ಜನಸಂಖ್ಯೆಯಲ್ಲಿ ಭಾರೀ ಪ್ರಮಾಣದ ಬದಲಾವಣೆ ಯಾಗಿದೆ. ಇದರಿಂದ ಜೀವನೋಪಾಯಕ್ಕೆ ಒತ್ತುವರಿಯೂ ನಡೆದಿದೆ ಅರಣ್ಯವೂ ಕ್ಷೀಣಿಸಿದೆ ಎಂದು ತಿಳಿಸಿದರು.

ಹಿಂದೆ ಜಿಲ್ಲಾಧಿಕಾರಿ ಘೋಷಿಸಿದ ಮೀಸಲು ಅರಣ್ಯ ಸಂಬಂಧ ರಚನೆಯಾಗಿದ್ದ ಟಾಸ್ಕ್‌ಫೋರ್ಸ್ ಸಮಿತಿ ಯಾವುದೇ ವಾಸ್ತಾವಂಶ ಪರಿಗಣಿಸದೇ ಇರುವುದರಿಂದ ಪುನಃ ಟಾಸ್ಕ್‌ಫೋರ್ಸ್ ಸಮಿತಿ ರಚಿಸಿ ಒತ್ತುವರಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಅರಣ್ಯ ಮತ್ತು ಅರಣ್ಯೇತರ ಒತ್ತುವರಿ ವಿಂಗಡಿಸಿ ನೈಜ್ಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಅರಣ್ಯ ಇಲಾಖೆಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಹೇಳಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಪರಿಶಿಷ್ಟ ಪಂಗಡಗಳಿಗೆ ಅನ್ವಯವಾಗುವ ಮಾನದಂಡಗಳಂತೆ ಇತರೆ ಪಾರಂಪರಿಕ ಅರಣ್ಯ ವಾಸಿಗಳಿಗೆ ಭೂ ಮಂಜೂರು ಮಾಡಲು 75 ವರ್ಷಗಳ ದಾಖಲಾತಿ ಬದಲಾಗಿ 25 ವರ್ಷಗಳ ದಾಖಲಾತಿ ಒದಗಿಸಿ ಭೂ ಮಂಜೂರಾತಿಗೆ ನಿಯಮಗಳ ತಿದ್ದುಪಡಿ ಮಾಡಲು ಅಧಿವೇಶನದಲ್ಲಿ ಅರಣ್ಯ ಸಚಿವರು ಮಂಡಿಸಿದ್ದು, ಸರ್ವಾನುಮತದಿಂದ ನಿರ್ಣಯಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದರು.

ಡೀಮ್ಡ್ ಅರಣ್ಯ ಪುನರ್ ಪರಿಶೀಲನೆ ಮಾಡಿ ನೈಜ್ಯ ವರದಿ ನೀಡಲು ಅರಣ್ಯ ಇಲಾಖೆಗೆ ಸಿಎಂ ನಿರ್ದೇಶನ ನೀಡಿದ್ದಾರೆ. ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಈ ಹಿಂದೆ 5 ಬಾರಿ ಕರಡು ಅಧಿಸೂಚನೆ ತಿರಸ್ಕರಿಸಿದ್ದು, ಈ ಬಾರಿಯೂ ಅಧಿವೇಶನದಲ್ಲಿ ತಿರಸ್ಕರಿಸಲು ಸಮ್ಮತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೀಸಲು ಅರಣ್ಯ ಪ್ರದೇಶದಲ್ಲಿ ಒತ್ತುವರಿಯಾಗಿದ್ದು ಎಸಿಎಫ್, ಸಿಸಿಎಫ್ ಹಾಗೂ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನಲೆಯಲ್ಲಿ ಒತ್ತುವರಿ ತೆರವುಗೊಳಿಸಲಾಗುತ್ತಿದೆ. ಅರ್ಜಿಗಳು ಇತ್ಯರ್ಥಗೊಳ್ಳುವರೆಗೂ ತೆರವುಗೊಳಿಸಬಾರದು ಎಂದು ಸರ್ಕಾರ ಅರಣ್ಯ ಇಲಾಖೆಗೆ ನಿರ್ದೇಶನ ನೀಡಿದೆ. ಅರಣ್ಯ ಮತ್ತು ಕಂದಾಯ ಭೂಮಿ ಸರ್ವೇ ಕಾರ್ಯ ಈಗಾಗಲೇ ನಡೆಯುತ್ತಿದೆ ಎಂದು ತಿಳಿಸಿದರು.ಭೂ ಒತ್ತುವರಿ ತೆರವು ಸಂಬಂಧ ಅನೇಕ ಊಹಪೋಹಗಳು, ವದಂತಿಗಳು, ಸುಳ್ಳು ಅಪಪ್ರಚಾರ ಮಾಡಲಾಗುತ್ತಿದೆ. ಇದರಿಂದ ಜನ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬಿನ್ ಮೊಸೆಸ್ ಉಪಸ್ಥಿತರಿದ್ದರು.

ಪೋಟೋ ಫೈಲ್‌ ನೇಮ್‌ 26 ಕೆಸಿಕೆಎಂ 3