ಸಾರಾಂಶ
ತಾಲೂಕು ಕಚೇರಿ ಸಭಾಂಗಣದಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿಕರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕಾನೂನಿನ ಚೌಕಟ್ಟಿನಡಿ ಅರ್ಹಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅರಣ್ಯ ಇಲಾಖೆ ಒಪ್ಪಿಗೆ ಪಡೆದು ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಗುರುವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ 94 ಸಿ ಅಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು. ಕಳೆದ ವರ್ಷ ನವೆಂಬರ್ ನಲ್ಲಿ 49 ಫಲಾನುಭವಿಗಳಿಗೆ ಹಾಗೂ ಇಂದು 32 ಫಲಾನುಭವಿಗಳಿಗೆ 94 ಸಿ ಅಡಿ ಹಕ್ಕುಪತ್ರ ವಿತರಿಸಲಾಗಿದೆ. ಅರಣ್ಯ ಮತ್ತು ಕಂದಾಯ ಜಮೀನಿನ ಬಗ್ಗೆ ಜಂಟಿ ಸಮೀಕ್ಷೆ ಪೂರ್ಣಗೊಂಡ ಬಳಿಕ ಬಡವರು, ಕೂಲಿಕಾರ್ಮಿಕರು, ಸಣ್ಣ,ಮಧ್ಯಮ ರೈತರು, ಭೂ ರಹಿತ ಕೃಷಿ ಕಾರ್ಮಿಕರಿಗೆ ಕಾನೂನಿನಲ್ಲಿ ತಿದ್ದುಪಡಿ ತಂದು ಭೂಮಿ ಹಕ್ಕು ಕೊಡುವ ಬಗ್ಗೆ ಸರ್ಕಾರ ತೀರ್ಮಾನಿಸಿದೆ ಎಂದರು.
ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಿ.ಬಿ.ಚಂದ್ರೇಗೌಡರು ಸಚಿವರಾಗಿದ್ದಾಗ ನಮೂನೆ 50 ರಲ್ಲಿ ಅರ್ಜಿ ಸಲ್ಲಿಸಿದ್ದ 4,750 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಫಾರಂ ನಂ 53 ಅಡಿ ಅರ್ಜಿ ಸಲ್ಲಿಸಿದವರಿಗೂ ಹಕ್ಕು ಪತ್ರ ನೀಡಲಾಗಿದೆ. ಹಕ್ಕು ಪತ್ರ ಪಡೆದವರು ಗ್ರಾಪಂನಲ್ಲಿ ಈ ಸ್ವತ್ತು ಮಾಡಿಸಿಕೊಳ್ಳಬೇಕು. ಮನೆಯಿಲ್ಲದವರಿಗೆ ಮುಂದಿನ ದಿನಗಳಲ್ಲಿ ಮನೆ ಮಂಜೂರು ಮಾಡಿಕೊಡ ಲಾಗುವುದು ಎಂದರು.ಕಳೆದ ಅವಧಿಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ 94ಸಿ, 94 ಸಿಸಿ, ಫಾರಂ ನಂ 50,53 ಮತ್ತು 57 ಅಡಿಹಕ್ಕು ಪತ್ರ ನೀಡಲು ಅರಣ್ಯ ಇಲಾಖೆ ಒಪ್ಪಿಗೆ ಪಡೆದು ನೀಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಆದೇಶ ಹೊರಡಿಸಿದ್ದರಿಂದ ಹಕ್ಕುಪತ್ರ ನೀಡಲು ಸಾಧ್ಯವಾಗಿರಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾಲೂಕಿನಲ್ಲಿ ಕಂದಾಯ ಇಲಾಖೆಯಲ್ಲಿನ ದಾಖಲೆಗಳನ್ನು ತಿದ್ದಿದ ಬಗ್ಗೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿರುವುದು ಸಹ ಹಕ್ಕುಪತ್ರ ವಿತರಣೆಗೆ ಸಮಸ್ಯೆಯಾಯಿತು. ಅಲ್ಲದೆ ಅವೈಜ್ಞಾನಿಕವಾಗಿ ಗೋಮಾಳ, ದಟ್ಟಾರಣ್ಯ, ಕಂದಾಯ ಭೂಮಿಯನ್ನು ಅರಣ್ಯ ಎಂದು 4/1 ಅಧಿಸೂಚನೆ ಹೊರಡಿಸಿತ್ತು ಎಂದು ದೂರಿದರು.
ಪಟ್ಟಣದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಹೋರಾಟ ಮಾಡಿದ ಮುಖಂಡರೊಬ್ಬರ ಮೇಲಿನ ಆಕ್ರೋಶಕ್ಕಾಗಿ ರಾವೂರು, ಲಿಂಗಾಪುರ ಗ್ರಾಮಗಳ ಜಮೀನನ್ನು ಕಿರು ಅರಣ್ಯ ಎಂದು ಘೋಷಣೆ ಮಾಡಿಸಿದ್ದು ಬಿಜೆಪಿ ಎಂದು ದೂರಿದರು. ಬಿಜೆಪಿ ಸರ್ಕಾರ ರೂಪಿಸಿದ ಕಾನೂನನ್ನು ಯಥಾವತ್ತಾಗಿ ಜಾರಿಗೆ ತಂದಲ್ಲಿ ಸಾವಿರಾರು ಜನರ ಬದುಕು ಬೀದಿಗೆ ಬರಲಿದೆ. ಕಾಂಗ್ರೆಸ್ ಪಕ್ಷ ಜನರಿಗೆ ತೊಂದರೆಯಾಗುವಂತಹ ಜನರ ಬದುಕನ್ನು ಕಸಿದುಕೊಳ್ಳುವ ಕಾನೂನನ್ನು ಎಂದಿಗೂ ಜಾರಿಗೆ ತಂದಿಲ್ಲ. ಹಕ್ಕುಪತ್ರ ಕೊಡುವುದಕ್ಕೆ ಸಂಬಂಧಿಸಿದಂತೆ ಇದ್ದ ಟಾಸ್ಕ್ ಫೋರ್ಸ್ ಸಮಿತಿ 2016–17 ರಲ್ಲಿ ರದ್ದಾಗಿದೆ. ಪ್ರಸ್ತುತ ಟಾಸ್ಕ್ ಫೋರ್ಸ್ ಸಮಿತಿ ರಚನೆಗೆ ಸರ್ಕಾರ ಚಾಲನೆ ನೀಡಿದ್ದು ಇದು ರಚನೆಯಾದ ಕೂಡಲೇ ಫಾರಂ ನಂ 53,57 ಅಡಿ ಅರ್ಜಿಸಲ್ಲಿಸಿದವರಿಗೆ ಹಕ್ಕು ಪತ್ರ ನೀಡಲಾಗುವುದು. ಒತ್ತುವರಿ ತೆರವು ಕಾರ್ಯಾಚರಣೆ ತಾತ್ಕಾಲಿಕವಾಗಿ ಕೈಬಿಡ ಲಾಗಿದೆ. ಸೆಕ್ಷೆನ್ 17 ಆಗಿರುವುದು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಎಂದರು.ಕಸ್ತೂರಿರಂಗನ್ ವರದಿಯನ್ನು ಸರ್ಕಾರ ಟಾಸ್ಕ್ ಫೋರ್ಸ್ ಸಮಿತಿ ಮತ್ತು ಸಚಿವ ಸಂಪುಟ ಸಭೆಯಲ್ಲಿ ತಿರಸ್ಕರಿಸುವ ತೀರ್ಮಾನ ಕೈಗೊಳ್ಳ ಲಾಗಿದೆ. ಇನ್ನೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಬಂದರೂ ಕೇಂದ್ರ ಸರ್ಕಾರ ಹೊಣೆಯಾಗುತ್ತದೆ ಎಂದರು.
ತಹಸೀಲ್ದಾರ್ ತನುಜಾ ಟಿ.ಸವದತ್ತಿ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಈ.ಸಿ.ಜೋಯಿ,ಪಪಂ ಅಧ್ಯಕ್ಷೆ ಸುರಯ್ಯಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಸದಸ್ಯ ಸೈಯದ್ ವಸೀಂ, ಗ್ರಾಪಂ ಸದಸ್ಯರಾದ ಬಿನು, ಸುನಿಲ್ ಕುಮಾರ್, ಮಂಜು,ಸಾಜು, ಗೇರುಬೈಲು ನಟರಾಜ್, ರತ್ನಾಕರ, ಮನೋಹರ್, ಕೆಡಿಪಿ ಸದಸ್ಯ ಮಾಳೂರು ದಿಣ್ಣೆ ರಮೇಶ್,ಯೋಗೇಶ್ವರ್, ಕಂದಾಯ ನಿರೀಕ್ಷಕ ಮಂಜುನಾಥ್ ಇದ್ದರು.