ಡೋಣಿ ಪ್ರವಾಹಕ್ಕೆ ಕೊಚ್ಚಿ ಹೋದ ಜಮೀನು

| Published : Jun 10 2024, 12:52 AM IST

ಸಾರಾಂಶ

ತಾಳಿಕೋಟೆ ಭಾಗದಲ್ಲಿ ಡೋಣಿ ನದಿ ಅವಾಂತರ ಸೃಷ್ಟಿಯಾಗಿದ್ದು, ಸೇತುವೆ ಮೇಲೆ ನೀರು ನುಗ್ಗಿ ಸಂಚಾರ ದುಸ್ತರವಾಗಿದೆ.

ಕನ್ನಡಪ್ರಭ ವಾರ್ತೆ ತಾಳಿಕೋಟೆಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿದ ಮಳೆಯಿಂದ ಡೋಣಿ ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದು, ಸೋಗಲಿಹಳ್ಳದ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಡೋಣಿ ನದಿಯ ಪ್ರವಾಹದಿಂದ ವಿಜಯಪುರ ರಸ್ತೆಯ ಕೆಳಮಟ್ಟದ ಸೇತುವೆಯು ಸಂಪೂರ್ಣ ಜಲಾವೃತಗೊಂಡಿದೆ. ಅಲ್ಲದೇ ವಾಹನ ಸಂಚಾರವು ಬೆಳಿಗ್ಗೆಯಿಂದ ಸಂಜೆವರೆಗೆ ಸಂಪೂರ್ಣ ಸ್ಥಗಿತಗೊಂಡಿತ್ತು. ಸಾಯಂಕಾಲದ ನಂತರ ಸೇತುವೆಯ ಮೇಲೆ ನೀರು ಕಡಿಮೆಯಾದ ಬಳಿಕ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಡೋಣಿ ನದಿಯಲ್ಲಿ ಭಾನುವಾರ ಬೆಳಗ್ಗೆ ಪ್ರವಾಹ ಉಂಟಾಗಿದ್ದರಿಂದ ವಿಜಯಪುರ ರಸ್ತೆಯ ಕೆಳಮಟ್ಟದ ಸೇತುವೆ ಪಕ್ಕದಲ್ಲಿ ನಿರ್ಮಿಸಲಾದ ಶ್ರೀ ಹನುಮಾನ ದೇವಸ್ಥಾನ ಅರ್ಧದಷ್ಟು ಮುಳುಗಡೆಯಾಗಿತ್ತು. ತಾಲೂಕಿನ ಮೂಕಿಹಾಳ ಗ್ರಾಮದ ಹತ್ತಿರ ಸೋಗಲಿಹಳ್ಳದ ಕೆಳ ಸೇತುವೆಯ ಮೇಲೆ ನೀರು ಹರಿಯುತ್ತಿದ್ದರು ಅಪಾಯವನ್ನು ಲೆಕ್ಕಿಸದೇ ವಾಹನಗಳು ಸಂಚರಿಸುತ್ತಿದ್ದವು. ಅಲ್ಲದೇ, ಸೇತುವೆ ಮೇಲೆ ನೀರು ಹರಿಯುತ್ತಿದ್ದರು ಅಪಾಯ ಲೆಕ್ಕಿಸದೇ ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಟ ನಡೆಸಿದ್ದವು.

ಕೊಚ್ಚಿಹೋದ ಮಣ್ಣು:

ಪಟ್ಟಣದ ಬಳಿಯ ಮೂಕಿಹಾಳ ಗ್ರಾಮದ ಸೋಗಲಿಹಳ್ಳದ ನೀರಿನ ರಭಸಕ್ಕೆ ಮೂಕಿಹಾಳ ಮೂಲಕ ತಾಳಿಕೋಟೆ ಸಂಪರ್ಕಿಸುವ ಸೇತುವೆಯು ಸಂಪೂರ್ಣ ಜಲಾವೃತಗೊಂಡಿದೆ. ಹಳ್ಳದ ನೀರು ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿ ಜಮೀನುಗಳಲ್ಲಿ ಸಂಪೂರ್ಣ ಮಣ್ಣು ಕೊಚ್ಚಿಕೊಂಡು ಹೋಗಿದೆ. ಮೂಕೀಹಾಳ ಗ್ರಾಮದ ರೈತ ಕಾಸೀಂಪಟೇಲ ಪಾಟೀಲ ಎಂಬ ರೈತರ ಜಮೀನಿನಲ್ಲಿ ಹಾಕಲಾದ ಕಬ್ಬು ನೀರಿನ ರಬಸಕ್ಕೆ ಕೊಚ್ಚಿಕೊಂಡು ಹೋಗಿದೆ. ಡೋಣಿ ನದಿಯ ನೀರಿನ ರಭಸಕ್ಕೆ ಜಮೀನುಗಳು ಹಾಳಾಗಿದ್ದು, ರೈತರಿಗೆ ಪರಿಹಾರ ನೀಡುವಂತೆ ಕಾಸಿಂಪಟೇಲ ಒತ್ತಾಯಿಸಿದ್ದಾರೆ.

ಮೇಲ್ಮಟ್ಟದ ಸೇತುವೆ ನಿರ್ಮಾಣಕ್ಕೆ ಒತ್ತಾಯ:

ಸೋಗಲಿ ಹಳ್ಳಕ್ಕೆ ನಿರ್ಮಿಸಿರುವ ಕೆಳಮಟ್ಟದ ಸೇತುವೆಯ ಜಾಗದಲ್ಲಿ ಕೂಡಲೇ ಮೇಲ್ಮಟ್ಟದ ಸೇತುವೆ ನಿರ್ಮಾಣ ಮಾಡಲು ರೈತರು ಒತ್ತಾಯಿಸಿದ್ದಾರೆ. ಸ್ವಲ್ಪ ಮಳೆಯಾದರೂ ಹಳ್ಳದ ನೀರು ಸೇತುವೆಯ ಮೇಲೆ ತುಂಬಿ ಹರಿಯುತ್ತದೆ. ಇದರಿಂದ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ. ಹೀಗಾಗಿ, ಸೇತುವೆಯ ಎತ್ತರವನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.

ಸಿಡಿಲಿಗೆ ಎಲೆಕ್ಟ್ರಾನಿಕ್‌ ಉಪಕರಣ ಭಸ್ಮ:

ಶನಿವಾರ ಸಂಜೆ ಸುರಿದ ಮಳೆಗೆ ತಾಳಿಕೋಟೆ ಪಟ್ಟಣದ ಮಹಲ್ ಗಲ್ಲಿಯ ಮನೆಗೆ ಸಿಡಿಲು ಬಡಿದಿದೆ. ಸಿಡಿಲು ಬಡಿದಿದ್ದರಿಂದ ಮನೆಯಲ್ಲಿನ ಟಿವಿ, ಪ್ಯಾನ್‌, ಬಲ್ಬ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್‌ ಉಪಕರಣಗಳು ಸುಟ್ಟು ಹೋಗಿವೆ. ಅಲ್ಲದೇ, ಮನೆಯ ಮೇಲಿನ ಗೋಡೆಗೆ ಸಿಡಿಲು ಅಪ್ಪಳಿಸಿದ್ದರಿಂದ ಗೋಡೆಯೂ ಬಿರುಕು ಬಿಟ್ಟಿದೆ.