ಸಾರಾಂಶ
ದೊಡ್ಡಬಳ್ಳಾಪುರ: ಸೂಕ್ತ ಬೆಲೆ ನೀಡದ ಹೊರತು ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ಕೈಗಾರಿಕಾ ಭೂಸ್ವಾದೀನಕ್ಕೆ ನೀಡುವುದಿಲ್ಲ ಎಂದು ಕೊನಘಟ್ಟ, ಆದಿನಾರಾಯಣಹೊಸಹಳ್ಳಿ ಮತ್ತು ನಾಗದೇನಹಳ್ಳಿ ರೈತರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ತಾಲೂಕಿನ ಕೊನಘಟ್ಟ ಗ್ರಾಮದ ಕಾಮನಬಂಡೆಯ ಸಮೀಪ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರ ಧರಣಿ ಕಳೆದ 69 ದಿನಗಳಿಂದ ನಡೆಯುತ್ತಿದ್ದು ಶುಕ್ರವಾರ ಧರಣಿ ಸ್ಥಳದಲ್ಲಿ ನಡೆದ ಸುದ್ದಿಗೋಷ್ಠಿ ನಡೆಯಿತು.ಈ ವೇಳೆ ಮಾತನಾಡಿದ ಮುಖಂಡ ಎಂ.ಆನಂದ್, 7 ದಿನಗಳ ಗಡುವು ಪಡೆದಿರುವ ಅಧಿಕಾರಿಗಳು ಸೂಕ್ತ ದರ ನಿಗದಿ ಮಾಡುವ ವಿಶ್ವಾಸವಿದೆ. ತಪ್ಪಿದಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬರಲು ಚರ್ಚಿಸಲಾಗಿದೆ. ಅಧಿಕಾರಿಗಳೊಂದಿಗೆ ಹಲವು ಸಮಾಲೋಚನಾ ಸಭೆಗಳು ನಡೆದಿದ್ದರೂ, ಅಧಿಕಾರಿಗಳು ಸೂಕ್ತ ಪರಿಹಾರ ದರ ನಿಗದಿಪಡಿಸುವಲ್ಲಿ ವಿಫಲರಾಗಿದ್ದಾರೆ. ಇದು ಅಧಿಕಾರಿಗಳಿಗೆ ರೈತರು ನೀಡುತ್ತಿರುವ ಕೊನೆಯ ಅವಕಾಶವಾಗಿದೆ ಎಂದರು.
ರೈತ ಮುಖಂಡ ರಾಮಾಂಜಿನಪ್ಪ ಮಾತನಾಡಿ, ಕೊನಘಟ್ಟ, ನಾಗದೇನಹಳ್ಳಿ, ಆದಿನಾರಾಯಣ ಹೊಸಹಳ್ಳಿ ಗ್ರಾಮಗಳ 971 ಎಕರೆ ಭೂಮಿಯ ಸ್ವಾಧೀನಕ್ಕೆ ಕೆಐಎಡಿಬಿ ಮುಂದಾಗಿದ್ದು 2013 ರ ಕಾಯ್ಕೆಯ ಮಾನದಂಡದಂತೆ ನಾಲ್ಕು ಪಟ್ಟು ಬೆಲೆ ನಿಗದಿಗೆ ಹಕ್ಕೊತ್ತಾಯ ಮಂಡಿಸಲಾಗುತ್ತಿದೆ. ಅಧಿಕಾರಿಗಳು ಕೆಲ ಏಜೆಂಟ್ ಗಳ ಮೂಲಕ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಸರ್ಕಾರ ರೈತರ ಪರ ನಿರ್ಧಾರ ಪ್ರಕಟಿಸಬೇಕು ಎಂದರು.ನಿವೃತ್ತ ಶಿಕ್ಷಕ ಕೃಷ್ಣಪ್ಪ ಮಾತನಾಡಿ, ಕೆಐಎಡಿಬಿ ಅಧಿಕಾರಿಗಳು ಕೆಲ ಮಧ್ಯವರ್ತಿಗಳ ಮೂಲಕ ರೈತರ ಭೂ ದಾಖಲಾತಿಗಳನ್ನು ಸಂಗ್ರಹ ಮಾಡಿಸಿದ್ದು ಈ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತವಾಗಿದೆ. ಸಮಸ್ಯೆ ಪರಿಹಾರಕ್ಕೆ1 ವಾರ ಗಡುವು ನೀಡಲಾಗಿದೆ. ಅಷ್ಟರಲ್ಲಿ ಸೂಕ್ತ ನಿರ್ಧಾರವನ್ನು ನಿರೀಕ್ಷಿಸಲಾಗುತ್ತಿದೆ ಎಂದರು
ರೈತ ಮುಖಂಡರಾದ ನರಸಿಂಹ ಮೂರ್ತಿ, ರಾಮಾಂಜಿನಪ್ಪ, ವೆಂಕಟೇಶ್, ರಮೇಶ್, ಮಹೇಶ್, ನಾಗರಾಜು ಕೃಷ್ಣಪ್ಪ ಕೋಡಿಹಳ್ಳಿ,ಬೈರೇಗೌಡ ಮಂಜುನಾಥ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.22ಕೆಡಿಬಿಪಿ5-ದೊಡ್ಡಬಳ್ಳಾಪುರ ತಾಲೂಕಿನ ರೈತರು ಕೆಐಎಡಿಬಿ ಭೂಸ್ವಾದೀನ ಪ್ರಕ್ರಿಯೆಯಲ್ಲಿ ಸೂಕ್ತ ದರ ನಿಗಧಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.