ದೋಣಿಗಲ್‌ನಲ್ಲಿ ಭೂಕುಸಿತ: ಮಂಗಳೂರು -ಬೆಂಗಳೂರು ರೈಲು ಸಂಚಾರ ಮಾರ್ಗ ಬದಲು

| Published : Jul 27 2024, 12:51 AM IST

ದೋಣಿಗಲ್‌ನಲ್ಲಿ ಭೂಕುಸಿತ: ಮಂಗಳೂರು -ಬೆಂಗಳೂರು ರೈಲು ಸಂಚಾರ ಮಾರ್ಗ ಬದಲು
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು - ಬೆಂಗಳೂರು ರೈಲು ಮಾರ್ಗದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ಸಮೀಪದ ಎಡಕುಮೇರಿ - ಕಡಗರವಳ್ಳಿ ನಡುವಿನ ದೋಣಿಗಲ್ ಎಂಬಲ್ಲಿ ರೈಲು ಮಾರ್ಗದಲ್ಲಿ ರೈಲು ಹಳಿಯಲ್ಲಿ ಮಣ್ಣು ಕುಸಿತ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು/ಸುಬ್ರಹ್ಮಣ್ಯನಿರಂತರ ಮಳೆಗೆ ರೈಲು ಹಳಿಯ ಕೆಳ ಭಾಗದಲ್ಲಿ ಮಣ್ಣು ಕುಸಿದು ಬೆಂಗಳೂರು - ಮಂಗಳೂರು ನಡುವೆ ರೈಲು ಸಂಚಾರ ಶುಕ್ರವಾರ ಸಂಜೆಯಿಂದ ವ್ಯತ್ಯಯಗೊಂಡಿದೆ. ಈ ಮಾರ್ಗದ ರೈಲುಗಳನ್ನು ಕೇರಳ ಹಾಗೂ ಮಡಂಗಾವ್‌ ಮೂಲಕ ಬದಲಿ ಮಾರ್ಗಗಗಳಲ್ಲಿ ಕಳುಹಿಸಲಾಗುತ್ತಿದೆ.

ಮಂಗಳೂರು - ಬೆಂಗಳೂರು ರೈಲು ಮಾರ್ಗದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ಸಮೀಪದ ಎಡಕುಮೇರಿ - ಕಡಗರವಳ್ಳಿ ನಡುವಿನ ದೋಣಿಗಲ್ ಎಂಬಲ್ಲಿ ರೈಲು ಮಾರ್ಗದಲ್ಲಿ ರೈಲು ಹಳಿಯಲ್ಲಿ ಮಣ್ಣು ಕುಸಿತ ಸಂಭವಿಸಿದೆ. ಘಟನೆಯಿಂದ ಸಂಜೆ 5.30ಕ್ಕೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಿಂದ ಹೊರಟಿದ್ದ ವಿಜಯಪುರ ಎಕ್ಸ್‌ಪ್ರೆಸ್ ರೈಲು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ವಾಪಾಸು ಹಿಂತಿರುಗಿದೆ. ಘಟನೆಯಿಂದ ಮಂಗಳೂರಿನಿಂದ ಹಾಸನ ನಡುವಿನ ಮಾರ್ಗದಲ್ಲಿ ರೈಲು ಸಂಚಾರ ಸಂಪೂರ್ಣ ಸ್ಥಗಿತ ಮಾಡಲಾಯಿತು. ಘಟನಾ ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು, ಇಂಜಿನಿಯರ್ ಗಳು ತೆರಳಿ ಪರಿಶೀಲನೆ ನಡೆಸಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಪ್ರಯಾಣಿಕರಿಗೆ ಗೊಂದಲ: ರೈಲು ಸ್ಥಗಿತ ಆಗಿರುವ ಮಾಹಿತಿಯನ್ನು ರೈಲು ನಿಲ್ದಾಣಗಳಲ್ಲಿ ದಿಢೀರ್ ನೀಡುತ್ತಿದ್ದಂತೆ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದು, ಸ್ಪಷ್ಟ ಮಾಹಿತಿ ಸಿಗದೆ ಪ್ರಯಾಣಿಕರು ಗೊಂದಲ ಪಡುವಂತಾಯಿತು. ರೈಲು ಸ್ಥಗಿತದಿಂದ ಪ್ರಯಾಣಿಕರು ರೈಲು ನಿಲ್ದಾಣದಲ್ಲೇ ಉಳಿಯುವಂತಾಯಿತು. ಕೆಲವರು ಬದಲಿ ವ್ಯವಸ್ಥೆ ಮೂಲಕ (ಬಸ್) ಪ್ರಯಾಣ ಮುಂದುವರಿಸಿದ ಮಾಹಿತಿ ಲಭ್ಯವಾಗಿದೆ.

ಮಾರ್ಗ ಬದಲಾವಣೆ: ಭೂಕುಸಿತ ಹಿನ್ನೆಲೆಯಲ್ಲಿ ಮಂಗಳೂರು -ಬೆಂಗಳೂರು ನಡುವೆ ಸಂಚರಿಸುವ ಪಂಚಗಂಗಾ ಎಕ್ಸ್ ಪ್ರೆಸ್‌ ರೈಲು, ಕಾರವಾರ ಎಕ್ಸ್‌ಪ್ರೆಸ್‌ ರೈಲು ಹಾಗೂ ಕಣ್ಣೂರು ಎಕ್ಸ್ ಪ್ರೆಸ್ ರೈಲು ಕೇರಳದ ಶೋರ್ನೂರು ಮೂಲಕ ಸಂಚರಿಸಲಿದೆ. ವಿಜಯಪುರ ಎಕ್ಸ್‌ಪ್ರೆಸ್‌ ರೈಲು ಮಡಗಾಂವ್‌, ಕ್ಯಾಸಲ್‌ರಾಕ್‌, ಹುಬ್ಬಳ್ಳಿ ಮೂಲಕ ಸಂಚರಿಸಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.