ಶೃಂಗೇರಿಯಲ್ಲಿ ತಗ್ಗಿದ ಮಳೆ ಅಬ್ಬರ । ನಿರಂತರ ಗುಡ್ಡ, ಭೂಕುಸಿತದಿಂದ ಆತಂಕ

ಕನ್ನಡಪ್ರಭ ವಾರ್ತೆ ಶೃಂಗೇರಿ

ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಅಬ್ಬರಿಸುತ್ತಿದ್ದ ಮಳೆ ಭಾನುವಾರ ಕೊಂಚ ಬಿಡುವು ನೀಡಿತ್ತು. ಬೆಳಿಗ್ಗೆಯಿಂದ ಬಿಸಿಲು ಮೋಡ ವಾತಾವರಣವಿದ್ದರೂ ಕೆರೆಕಟ್ಟೆ ಭಾಗದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಅಪಾಯದ ಮಟ್ಟ ಮೀರಿದೆ.

ಶನಿವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಮಂಗಳೂರು ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 169 ರ ಶೃಂಗೇರಿ ಆನೆಗುಂದ ಬಳಿ ಅಪಾಯದಂಚಿನಲ್ಲಿದ್ದ ಬೃಹತ್ ಗುಡ್ಡ ಕುಸಿದು ಮಣ್ಣು, ಬಂಡೆಗಳು, ಗಿಡಮರಗಳು ಸಹಿತ ರಸ್ತೆಮೇಲೆ ಬಿದ್ದಿದೆ. ರಸ್ತೆಯೆಲ್ಲ ಮಣ್ಣಿನ ಗುಡ್ಡ ಜಾರಿ ಬಿದ್ದಿದ್ದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಭಾನುವಾರ ಬೆಳಿಗ್ಗೆಯಿಂದಲೇ ಜೆಸಿಬಿಯಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಸಿ ರಸ್ತೆ ಸಂಚಾರಕ್ಕೆ ಸುಗಮಗೊಳಿಸಲಾಯಿತು.

ಹೊಂಡಕ್ಕುರುಳಿದ ಬೃಹತ್ ಲಾರಿ:


ಮಂಗಳೂರು ಶೃಂಗೇರಿ ಸಂಪರ್ಕ ಕೆರೆಕಟ್ಟೆ ಮಾತೊಳ್ಳಿ ಬಳಿ ಸರಕು ಸಾಮಾನು ಸಾಗಿಸುತ್ತಿದ್ದ ಬೃಹತ್ ಲಾರಿ ನಿಯಂತ್ರಣ ತಪ್ಪಿ ಹೊಂಡಕ್ಕುರುಳಿತು. ಶೃಂಗೇರಿ ಕಾರ್ಕಾಳ ಸಂಪರ್ಕ ಕೆಲ ಹೊತ್ತು ಅಡ್ಡಿಯಾಗಿತ್ತು. ಲಾರಿಯಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಳೆ ನಿಂತರೂ ಭಕ್ತಂಪುರ,ಆನೆಗುಂದ,ವೆಲ್ ಕಂ ಗೇಟ್, ಹೊಸ್ಕೆರೆ ಸೇರಿದಂತೆ ವಿವಿಧೆಡೆ ಗುಡ್ಡ, ಧರೆ ಕುಸಿತ ಸಂಭವಿಸುತ್ತಿದೆ. ಕಿಗ್ಗಾ ಸಿರಿಮನೆ ಜಲಪಾತ ಸಂಪರ್ಕ ರಸ್ತೆ ಮಾಣಿಬೈಲು ಬಳಿ ತುಂಗಾ ನದಿ ದಡದಲ್ಲಿ ಭೂಕುಸಿತ ಉಂಟಾಗುತ್ತಿದ್ದು ರಸ್ತೆ ದಡ ಹಂತ ಹಂತವಾಗಿ ಕುಸಿದು ತುಂಗಾನದಿಗೆ ಬೀಳುತ್ತಿದೆ. ಇಲ್ಲಿ ಅಪಾಯಕಾರಿ ತಿರುವು ಇದ್ದು, ಅಪಘಾತ ವಲಯವಾಗಿದೆ. ಅನೇಕ ಅಪಘಾತಗಳು ಸಂಭವಿಸಿವೆ.ಮಳೆ ಅವಾಂತರದಿಂದ ತಾಲೂಕಿನ ವಿವಿಧೆಡೆ ಹಾನಿಗಳು ಮುಂದುವರಿದಿವೆ.

9 ಶ್ರೀ ಚಿತ್ರ 1-

ಶೃಂಗೇರಿ ಕೆರಕಟ್ಟೆ ಮಾತೋಳ್ಳಿ ಬಳಿ ಲಾರಿಯೊಂದು ನಿಯಂತ್ರಣ ತಪ್ಪಿ ಹೊಂಡಕ್ಕುರುಳಿ ಬಿದ್ದಿರುವುದು.

9 ಶ್ರೀ ಚಿತ್ರ 2-

ಶೃಂಗೇರಿ ರಾಷ್ಟ್ರೀಯ ಹೆದ್ದಾರಿ 169 ರ ಆನೆಗುಂದ ಬಳಿ ಗುಡ್ಡಕುಸಿದು ರಸ್ತೆಯ ಮೇಲೆ ಬಿದ್ದಿರುವುದು.