ಶೃಂಗೇರಿಯಲ್ಲಿ ಭೂಕುಸಿತ, ನಿಯಂತ್ರಣ ತಪ್ಪಿ ಹೊಂಡಕ್ಕುರುಳಿದ ಲಾರಿಗಳು

| Published : Jul 20 2024, 12:49 AM IST

ಶೃಂಗೇರಿಯಲ್ಲಿ ಭೂಕುಸಿತ, ನಿಯಂತ್ರಣ ತಪ್ಪಿ ಹೊಂಡಕ್ಕುರುಳಿದ ಲಾರಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ, ತಾಲೂಕಿನಾದ್ಯಂತ ಮಳೆ ಆರ್ಭಟ ಶುಕ್ರವಾರವೂ ಮುಂದುವರೆದಿತ್ತು. ರಸ್ತೆ, ಭೂಕುಸಿತ ಉಂಟಾಗುತ್ತಿದ್ಜು, ತುಂಗಾ ನದಿ ಯಲ್ಲಿ ಪ್ರವಾಹ ಇಳಿಮುಖವಾಗಿದ್ದರೂ ನೀರು ಮಾತ್ರ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭಾರತೀ ಬೀದಿ ಕೆವಿಆರ್ ವೃತ್ತ ಸಂಪರ್ಕ ಕಲ್ಪಿಸುವ ಬೈಪಾಸ್‌ ರಸ್ತೆ ಇನ್ನೂ ಪ್ರವಾಹದಲ್ಲಿ ಮುಳುಗಡೆಯಾಗಿದ್ದು ಸಂಪರ್ಕ ಕಡಿತಗೊಂಡಿದೆ. ಪ್ರವಾಹ ಪೀಡಿತ ಗಾಂಧಿ ಮೈದಾನದಲ್ಲಿ ಅರ್ಧಭಾಗ ಇನ್ನೂ ಜಲಾವೃತಗೊಂಡಿತ್ತು.

ಹೊಸದೇವರ ಹಡ್ಲು ಸಮೀಪ ಘಟನೆ । ವಾಹನದಲ್ಲಿದ್ದ ಚಾಲಕರು ಪ್ರಾಣಪಾಯದಿಂದ ಪಾರು

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನಾದ್ಯಂತ ಮಳೆ ಆರ್ಭಟ ಶುಕ್ರವಾರವೂ ಮುಂದುವರೆದಿತ್ತು. ರಸ್ತೆ, ಭೂಕುಸಿತ ಉಂಟಾಗುತ್ತಿದ್ಜು, ತುಂಗಾ ನದಿ ಯಲ್ಲಿ ಪ್ರವಾಹ ಇಳಿಮುಖವಾಗಿದ್ದರೂ ನೀರು ಮಾತ್ರ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಭಾರತೀ ಬೀದಿ ಕೆವಿಆರ್ ವೃತ್ತ ಸಂಪರ್ಕ ಕಲ್ಪಿಸುವ ಬೈಪಾಸ್‌ ರಸ್ತೆ ಇನ್ನೂ ಪ್ರವಾಹದಲ್ಲಿ ಮುಳುಗಡೆಯಾಗಿದ್ದು ಸಂಪರ್ಕ ಕಡಿತಗೊಂಡಿದೆ. ಪ್ರವಾಹ ಪೀಡಿತ ಗಾಂಧಿ ಮೈದಾನದಲ್ಲಿ ಅರ್ಧಭಾಗ ಇನ್ನೂ ಜಲಾವೃತಗೊಂಡಿತ್ತು.

ಶ್ರೀಮಠದ ತುಂಗಾ ನದಿ ತೀರದಲ್ಲಿರುವ ಕಪ್ಪೆ ಶಂಕರ ದೇವಾಲಯ, ಸಂಧ್ಯಾವಂದನ ಮಂಟಪ ಇನ್ನೂ ಜಲಾವೃತ ಗೊಂಡಿದೆ. ಭಾರೀ ಮಳೆಯಾಗುತ್ತಿರುವುದರಿಂದ ಭೂಕುಸಿತ, ರಸ್ತೆ ಕುಸಿತ, ಗುಡ್ಡಕುಸಿತ ಉಂಟಾಗುತ್ತಿದ್ದು ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಗಾಳಿಗೆ ಮರಗಳು ಉರುಳಿ ಬಿದ್ದು ವಿದ್ಯುತ್‌ ಲೈನ್, ಕಂಬಗಳು ತುಂಡಾಗುತ್ತಿವೆ.

ಮೆಣಸೆ ಪಂಚಾಯಿತಿ ವ್ಯಾಪ್ತಿಯ ಶಿಡ್ಲೆಯಲ್ಲಿ ಶುಕ್ರವಾರ ಗಾಳಿಗೆ ಬೃಹತ್‌ ಮರವೊಂದು ವಿದ್ಯುತ್ ಲೈನ್ ಮೇಲೆ ಉರುಳಿ ಬಿದ್ದು ವಿದ್ಯುತ್‌ ಕಂಬಗಳು, ಲೈನ್‌ಗಳು ತುಂಡಾಗಿದ್ದು ಶೃಂಗೇರಿ ಸುತ್ತಮುತ್ತ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ನೆಮ್ಮಾರು ಪಂಚಾಯಿತಿ ವ್ಯಾಪ್ತಿಯ ಹೊಸದೇವರ ಹಡ್ಲು ಸಮೀಪ ಗುರುವಾರ ರಾತ್ರಿ ಸುರಿದ ಭಾರೀ ಮಳೆ ಪರಿಣಾಮ ರಸ್ತೆ ಕುಸಿದು ಎರಡು ಲಾರಿಗಳು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ವಾಹನದಲ್ಲಿದ್ದ ಚಾಲಕರು ಪವಾಡಸದೃಶ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಲಾರಿಗಳು ನಜ್ಜುಗುಜ್ಜಾಗಿ ಸಂಪೂರ್ಣ ಜಖಂಗೊಂಡಿದೆ.

ನೆಮ್ಮಾರು ಸರ್ಕಲ್‌ ಬಳಿ ಶುಕ್ರವಾರ ಮಧ್ಯಾಹ್ನ ಭಾರಿ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಮಂಗಳೂರು ಕಡೆಯಿಂದ ಶೃಂಗೇರಿ ಯತ್ತ ಬರುತ್ತಿದ್ದ ಕಾರ್, ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ರಸ್ತೆಗುರುಳಿ ಬಿದ್ದು ಗಂಬೀರ ಗಾಯಗೊಂಡಿದ್ದು, ಗಾಯಾಳುವನ್ನು ಶೃಂಗೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರ ಸಂಜೆಯವರೆಗೂ ಮಳೆ ಮುಂದುವರೆದಿದ್ದು, ತುಂಗಾ ನದಿ ತೀರ ಪ್ರದೇಶಗಳಲಿದ್ದ ತಗ್ಗು ಪ್ರದೇಶಗಳು, ಅಡಕೆ ತೋಟಗಳು, ಹೊಲಗದ್ದೆಗಳು ಪ್ರವಾಹದಲ್ಲಿ ಇನ್ನೂ ಮುಳುಗಡೆಯಾಗಿಯೇ ಇದೆ. ಮಂಗಳೂರು ಶಿವಮೊಗ್ಗ ರಾಷ್ಠ್ರೀಯ ಹೆದ್ದಾರಿ 169 ರ ತನಿಕೋಡು. ಮಾಣಿಬೈಲು, ತ್ಯಾವಣ, ದುರ್ಗಾ ದೇವಸ್ಥಾನ ರಸ್ತೆ ಸಮೀಪಗಳಲ್ಲಿ ಗುಡ್ಡಕುಸಿದು ರಸ್ತೆಯ ಮೇಲೆ ಬೀಳುತ್ತಿದೆ. ಗಾಳಿಗೆ ಮರಗಳು ರಸ್ತೆಗುರುಳಿ ಬೀಳುತ್ತಿವೆ.

19 ಶ್ರೀ ಚಿತ್ರ 1-

ಶೃಂಗೇರಿ ನೆಮ್ಮಾರು ಸಮೀಪದ ಹೊಸದೇವರಹಡ್ಲು ಎಂಬಲ್ಲಿ ರಸ್ತೆ ಕುಸಿದು ಲಾರಿಗಳೆರೆಡು ಕಂದಕಕ್ಕೆ ಉರುಳಿ ಬಿದ್ದಿರುವುದು.

19 ಶ್ರೀ ಚಿತ್ರ 2-

ಶೃಂಗೇರಿ ಮೆಣಸೆ ಪಂಚಾಯಿತಿ ಶಿಡ್ಲೆ ಬಳಿ ಬೃಹತ್‌ ಶುಕ್ರವಾರ ಮರವೊಂದು ವಿದ್ಯುತ್‌ ಲೈನ್‌ ಮೇಲೆ ಉರುಳಿಬಿದ್ದು ವಿದ್ಯುತ್‌ ಲೈನ್, ಕಂಬಗಳು ತುಂಡಾಗಿರುವುದು.