ಕನ್ನಡ ಬಳಸುವುದರಿಂದ ಭಾಷೆ ಬೆಳವಣಿಗೆ: ಡಾ.ನಿಂಗರಾಜ್‌ಗೌಡ

| Published : Jan 22 2024, 02:18 AM IST

ಸಾರಾಂಶ

ರಾಷ್ಟ್ರಕವಿ ಕುವೆಂಪು ಶ್ರೇಷ್ಠ ಸಾಹಿತ್ಯದ ಮೂಲಕ ಕನ್ನಡ ಭಾಷೆಯನ್ನೂ ಶ್ರೀಮಂತಗೊಳಿಸಿದ್ದಾರೆ. ಜೊತೆಗೆ ಇಂದಿನ ಯುವ ಸಾಹಿತಿಗಳಿಗೆ ಕುವೆಂಪು ಪ್ರೇರಣೆಯಾಗಿದ್ದಾರೆ. ಸಾರ್ವಜನಿಕವಾಗಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಿದರೆ ಸಾಕು. ಕನ್ನಡ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣುತ್ತದೆ ಕನ್ನಡ ಬೆಳೆದಾಗ ಆಂಗ್ಲಭಾಷೆಗೆ ಪರ್ಯಾಯವಾಗಿ ಕನ್ನಡ ಬೆಳವಣಿಗೆ ಸಾಧಿಸುತ್ತದೆ. ವಿಜ್ಞಾನ -ತಂತ್ರಜ್ಞಾನ ಬೆಳೆದಂತೆ ಕನ್ನಡ ಬೆಳೆಯಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾರ್ವಜನಿಕವಾಗಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಿದರೆ ಸಾಕು. ಕನ್ನಡ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣುತ್ತದೆ ಕನ್ನಡ ಬೆಳೆದಾಗ ಆಂಗ್ಲಭಾಷೆಗೆ ಪರ್ಯಾಯವಾಗಿ ಕನ್ನಡ ಬೆಳವಣಿಗೆ ಸಾಧಿಸುತ್ತದೆ. ವಿಜ್ಞಾನ -ತಂತ್ರಜ್ಞಾನ ಬೆಳೆದಂತೆ ಕನ್ನಡ ಬೆಳೆಯಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಅಭಿಪ್ರಾಯಿಸಿದರು.

ಜೀಶಂಪ ಸಾಹಿತ್ಯ ವೇದಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಗಾಂಧಿ ಭವನದಲ್ಲಿ ನಡೆದ ರಾಜ್ಯ ಮಟ್ಟದ ಕವಿಕಾವ್ಯ ಮೇಳ, ವಿವಿಧ ಪ್ರಶಸ್ತಿ ಪ್ರದಾನ, ಓ ಗುಣವಂತ ಕಿರುಚಿತ್ರ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರಕವಿ ಕುವೆಂಪು ಶ್ರೇಷ್ಠ ಸಾಹಿತ್ಯದ ಮೂಲಕ ಕನ್ನಡ ಭಾಷೆಯನ್ನೂ ಶ್ರೀಮಂತಗೊಳಿಸಿದ್ದಾರೆ. ಜೊತೆಗೆ ಇಂದಿನ ಯುವ ಸಾಹಿತಿಗಳಿಗೆ ಕುವೆಂಪು ಪ್ರೇರಣೆಯಾಗಿದ್ದಾರೆ ಎಂದರು.

ನಾಳೆ ಶ್ರೀರಾಮ ಮಂದಿರ ಉದ್ಘಾಟನೆ ಆಗುತ್ತಿದೆ. ನಾವೆಲ್ಲರೂ ಶ್ರೀರಾಮನ ಆದರ್ಶವನ್ನೂ ಪಾಲಿಸಬೇಕು. ರಾಮಾಯಣ- ಮಹಾಭಾರತದಲ್ಲಿರುವ ಮೌಲ್ಯಗಳು, ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೇ ಭಾರತ ವಿಶ್ವಗುರು ಆಗುವುದರಲ್ಲಿ ಸಂಶಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನ ಆದರ್ಶದಂತೆ ಆಡಳಿತವನ್ನೂ ಯಶಸ್ವಿಯಾಗಿ ನಡೆಸುವುದರ ಜೊತೆಗೆ ನಮ್ಮ ಸಾಹಿತ್ಯ, ಸಂಸ್ಕೃತಿ ಮತ್ತು ಧಾರ್ಮಿಕತೆಯನ್ನೂ ಇಡೀ ವಿಶ್ವಕ್ಕೆ ಪರಿಚಯಿಸುತ್ತಿದ್ದಾರೆ ಎಂದರು.

ಸಮ್ಮೇಳನಾಧ್ಯಕ್ಷ ಡಾ.ಹಲ್ಲೆಗೆರೆ ಶಂಕರ್ ಮಾತನಾಡಿ, ಮಂಡ್ಯ ಜಿಲ್ಲೆ ಸಾಮಾಜಿಕ, ಸಾಂಸ್ಕೃತಿಕ, ಔದ್ಯೋಗಿಕ ಮತ್ತು ರಾಜಕೀಯದ ತವರೂರಾಗಿದೆ. ನಾಡು ನುಡಿ, ಕಲೆ, ಸಂಸ್ಕೃತಿಯ ಪರಂಪರೆಗೆ ಪ್ರಮುಖ ಕೊಂಡಿಯಾಗಿದೆ ಎಂದು ಶ್ಲಾಘಿಸಿದರು.

ಇತ್ತೀಚಿನ ಕವಿಗಳು ಮತ್ತು ಕಾವ್ಯ ರಚನೆಯ ಕಡೆಗೆ ನೋಡುವುದಾದರೆ ಕೆಲವೊಂದು ಅಂಶಗಳು ವಿಶ್ಲೇಷಣೆಗೆ ಒಳಪಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಹಳಗನ್ನಡ, ನಡುಗನ್ನಡ ನಂತರ ಬಂದ ಹೊಸಗನ್ನಡದಲ್ಲಿ ಇತ್ತೀಚೆಗೆ ಕಾವ್ಯ ರಚನೆ ಮಾಡುತ್ತಿರುವ ಕವಿಗಳನ್ನು ಮೂರು ಗುಂಪುಗಳಾಗಿಯೂ ನೋಡಬೇಕಿದೆ. ಹಳಗನ್ನಡ ಮತ್ತು ನಡುಗನ್ನಡದ ಕಾವ್ಯಗಳು, ಕವಿತೆಗಳು ಅಥವಾ ಕವನಗಳು ಎಂಬ ಭಾಗಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಛಂದಸ್ಸು, ಲಯ, ಗೇಯತೆಗಳಿದ್ದವು, ರಾಗ, ತಾಳಗಳಿಗೆ ಒಗ್ಗುತ್ತಿದ್ದವು. ಸಂಗೀತ, ನೃತ್ಯ ಮತ್ತು ಗಾಯನಕ್ಕೆ ಒತ್ತಾಸೆಯಾಗಿದ್ದು ಕೇಳುಗರಿಗೆ ಇಂಪಾಗಿಯೂ, ಆಪ್ತವಾಗಿಯೂ ಮನೋಜ್ಞವಾಗಿಯೂ ಇರುತ್ತಿದ್ದವು. ಆದರೆ, ಇತ್ತೀಚಿನ ಹೊಸಗನ್ನಡದ ಕವಿತೆಗಳು ಇಪ್ಪತ್ತನೇ ಶತಮಾನದ ಪೂರ್ವ ಮತ್ತು ಮಧ್ಯಂತರದವರೆಗೂ ಅಂತಹ ಗೇಯತೆಗೆ ಒಲಿಯುತ್ತಿದ್ದವು. ಆನಂತರ ಬಂದ ಕವಿಗಳಿಗಳಲ್ಲಿ ಬಹುತೇಕರಿಗೆ ಅಂತಹ ಕಾವ್ಯಗುಣಗಳು ಬೇಕಿಲ್ಲವೇನೋ ಅನ್ನುವ ಮಟ್ಟಕ್ಕೆ ರಚನೆಗಳಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಾಹಿತಿ ಹಲ್ಲೆಗೆರೆ ಶಂಕರ್ ರಚಿತ ಪರಿಸರ ಪಲ್ಲವಿ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ರಾಜ್ಯ ಆರ್‌ಟಿಒ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ, ಆರ್ ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್, ವಕೀಲ, ಮೋಹನ್ ಕುಮಾರ್, ನಟರಾದ ವಿಷ್ಣು ತೇಜ, ಚಂದ್ರಚೂಡರಾಜು, ಹಾವೇರಿ ನೇತ್ರಾವತಿ, ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ, ವೇದಿಕೆ ಪದಾಧಿಕಾರಿಗಳಾದ ಮಂಗಲ ಶಿವಣ್ಣ, ರಾಗಿಮುದ್ದನಹಳ್ಳಿ ನಾಗೇಶ್, ರೂಪಾ ಹೊಸಹಳ್ಳಿ, ಅಪೇಕ್ಷ ಉಪಸ್ಥಿತರಿದ್ದರು.