ಸಾರಾಂಶ
ವಿಚಾರ ಸಂಕಿರಣದಲ್ಲಿ ಶಿವಮೊಗ್ಗದ ಪ್ರಾಧ್ಯಾಪಕ ಬಿ.ಎಲ್.ರಾಜು ಅಭಿಮತ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಲಂಕೇಶ್ ಅವರು ತಮ್ಮ ಪತ್ರಿಕೆ ಮೂಲಕ ಅನೇಕ ಪ್ರಜ್ಞಾವಂತರನ್ನು, ಸಾಹಿತಿಗಳನ್ನು ಜೋಡಿಸುವ ಕೆಲಸ ಮಾಡಿದರೆಂದು ಶಿವಮೊಗ್ಗದ ಪ್ರಾಧ್ಯಾಪಕ ಬಿ.ಎಲ್.ರಾಜು ಅಭಿಪ್ರಾಯಪಟ್ಟರು.ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಗೆಳೆಯರ ಬಳದ ವತಿಯಿಂದ ಹಮ್ಮಿಕೊಂಡಿದ್ದ ಪಿ.ಲಂಕೇಶ್ ಹಾಗೂ ಪ್ರಸ್ತುತ ಸಾಂಸ್ಕೃತಿಕ ವಿದ್ಯಮಾನ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು ಲಂಕೇಶ್ ಎಂಬುದು ಕೇವಲ ಹೆಸರಾಗಿರದೆ ಕರ್ನಾಟಕದಲ್ಲಿ ಜರುಗಿದ ವಿದ್ಯಮಾನವೆಂದು ಬಣ್ಣಿಸಿದದರು.
ಕರ್ನಾಟಕದ 20ನೇ ಶತಮಾನದ ಕೊನೆಯ ಎರಡು ದಶಕಗಳನ್ನು ಪಿ.ಲಂಕೇಶ್ ಅತ್ಯಂತ ಗಾಢವಾಗಿ ಪ್ರಭಾವಿಸಿದರು. ಕರ್ನಾಟಕದ ರಾಜಕಾರಣ, ಸಂಸ್ಕೃತಿ, ಚರಿತ್ರೆ, ಜ್ಞಾನ ಸೇರಿದಂತೆ ಅನೇಕ ವಿದ್ಯಮಾನಗಳನ್ನು ಕರ್ನಾಟಕದಲ್ಲಿ ಪ್ರಭಾವಿಸಿದವರು. ಅವರು ಪತ್ರಕರ್ತರು ಮಾತ್ರವಲ್ಲದೇ ಸ್ವತಃ ಕವಿಯಾಗಿ, ನಾಟಕಕಾರ, ಸಿನಿಮಾ ನಿರ್ದೇಶಕ, ಕಾದಂಬರಿಕಾರರೂ ಆಗಿದ್ದರೆಂದರು.ಲಂಕೇಶ್ ಪತ್ರಿಕೆ ಓದುತ್ತಿರುವವರಿಗೆ ಅಂದಿನ ದಿನಮಾನಗಳಲ್ಲಿ ವಿಶಿಷ್ಟವಾದ ಸ್ಥಾನವಿತ್ತು. ಲಂಕೇಶ್ ಪತ್ರಿಕೆ ಓದುವವರು ಪ್ರಜ್ಞಾವಂತರೂ ಎಂಬ ಇಮೇಜ್ ಕೂಡ ಇತ್ತು. ಲಂಕೇಶ್ ಪತ್ರಿಕೆಯ ಶೀರ್ಷಿಕೆಯ ಮೇಲ್ಭಾಗದಲ್ಲಿ ರಂಜನೆ, ಬೋಧನೆ, ಪ್ರಚೋಧನೆ ಹಾಗೂ ಶೀರ್ಷಿಕೆಯ ಕೆಳಭಾಗದಲ್ಲಿ ಜಾಣ-ಜಾಣೆಯರ ಪತ್ರಿಕೆ ಎಂಬುದಾಗಿತ್ತು. ಒಂದು ಪತ್ರಿಕೆಯನ್ನು ಓದುಗರು ತಮ್ಮ ಜತೆಗೆ ಗುರುತಿಸಿಕೊಂಡು, ಪತ್ರಿಕೆ ಜತೆಗೆ ತಮ್ಮನ್ನು ಸಮೀಕರಿಸಿಕೊಂಡ ಕಾಲಘಟ್ಟವೂ ಹೌದು ಎಂದರು.
ಸುಮಾರು 20 ವರ್ಷಗಳ ಕಾಲ ಯಾವುದೇ ಜಾಹೀರಾತುಗಳು ಇಲ್ಲದೇ, ಜಾಹೀರಾತಿನ ಹಂಗಿಲ್ಲದೆ, ನಿರ್ಭೀತವಾಗಿ, ನಿಷ್ಠುರವಾಗಿ ಕರ್ನಾಟಕದ ಬದುಕುನ್ನು ಲಂಕೇಶ್ ಪತ್ರಿಕೆ ರೂಪಿಸಿತು. ಲಂಕೇಶ್ ಅವರು ಕರ್ನಾಟಕದ ರಾಜಕಾರಣವನ್ನು ನೇರ-ನಿಷ್ಠುರವಾಗಿ ಟೀಕಿಸುವ, ವಿಮರ್ಶಿಸುವ ಹಾಗೂ ಪರಿಶೀಲಿಸುವ ಕೆಲಸ ಮಾಡಿದರು. ಮುಖ್ಯಮಂತ್ರಿ, ಮಂತ್ರಿ ಸೇರಿದಂತೆ ಯಾವುದೇ ರಾಜಕಾರಣಿ, ಅಧಿಕಾರಿಗಳಿರಲಿ ನಿರ್ಭೀತವಾಗಿ ಅವರ ಎಲ್ಲ ಕರ್ಮಕಾಂಡಗಳನ್ನು ಬಯಲಿಗೆಳೆದವರು. ಸರ್ಕಾರಗಳನ್ನು ಪ್ರಭಾವಿಸುವಷ್ಟರ ಮಟ್ಟಿಗೆ, ಜನರಿಗೆ ವಿವೇಕವನ್ನು ನೀಡುತ್ತಿದ್ದರು. ಕರ್ನಾಟಕದ ಅಧಿಕೃತ ವಿರೋಧ ಪಕ್ಷವಾಗಿ, ವಿರೋಧ ಪಕ್ಷಗಳ ಸ್ಥಾನವನ್ನು ಲಂಕೇಶ್ ಪತ್ರಿಕೆ ತುಂಬಿದೆ. ಸರ್ಕಾರವನ್ನು ಅಧಿಕಾರಕ್ಕೆ ತರುವುದು, ಅಧಿಕಾರಕ್ಕೆ ಬಂದ ಕೂಡಲೇ ವಿರೋಧವಾಗಿ ಕೆಲಸ ಮಾಡುವುದು. ಅಧಿಕಾರದಲ್ಲಿ ಇಲ್ಲದಿರುವವರ ಪರವಾಗಿ, ಅಧಿಕಾರದ ವಿರುದ್ಧವಾಗಿ ಲಂಕೇಶ್ ಪತ್ರಿಕೆ ಕೆಲಸ ಮಾಡಿದೆ. ರಾಜಕಾರಣ ನಿಂತ ನೀರಾಗಬಾರದು. ಅದು ನಿರಂತರತೆ ಮತ್ತು ಸದಾ ಜಂಗಮಸ್ಥಿತಿಯಲ್ಲಿರಬೇಕು ಎಂಬ ಉದ್ದೇಶ ಲಂಕೇಶ್ ಅವರದ್ದಾಗಿತ್ತು ಎಂದು ಹೇಳಿದರು.ಬಿ.ಟಿ.ಜಾಹ್ನವಿ, ಬಿ.ಟಿ.ಲಲಿತಾ ನಾಯ್ಕ್, ಸಾರಾ ಅಬೂಬ್‍ಕರ್ ಸೇರಿದಂತೆ ಬಹಳಷ್ಟು ಲೇಖಕರನ್ನು ಲಂಕೇಶರು ಸೃಷ್ಠಿ ಮಾಡಿದರು. ಮೊಗಳ್ಳಿ ಗಣೇಶ್, ಸಿದ್ದಲಿಂಗಯ್ಯ, ದೇವನೂರು ಮಹಾದೇವ ಅವರು ಸಹ ಲಂಕೇಶ್ ಪತ್ರಿಕೆಯಲ್ಲಿ ಬರೆಯಲು ಶುರು ಮಾಡಿದರು. ಲಂಕೇಶ್ ಪತ್ರಿಕೆ ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರದೇ ಸಂಸ್ಕೃತಿ , ಸಾಹಿತ್ಯದ ವಿಮರ್ಶೆಗೂ ಮೀಸಲಿತ್ತು. ಬರಹದಲ್ಲಿ ಮಾನವೀಯತೆ, ನಿಷ್ಠುರತೆಯನ್ನು ನಿರೀಕ್ಷೆ ಮಾಡುತ್ತಿದ್ದರು. ಜಾತಿ, ಧರ್ಮದ ಗಡಿಯನ್ನು ಮೀರಿ ಬರೆಯುವ ವಾತಾವರಣ ನಿರ್ಮಾಣ ಮಾಡಿದ್ದರು. ಅನಂತಮೂರ್ತಿ ಸೇರಿದಂತೆ ಕರ್ನಾಟಕದ ಬಹಳ ದೊಡ್ಡ ಲೇಖಕರು ಹಾಗೂ ಸಣ್ಣ ಲೇಖಕರವರೆಗೂ ಸಹ ಲಂಕೇಶ್ ಅವರ ಕುಲುಮೆಯಲ್ಲಿ ಪರೀಕ್ಷೆಗೆ ಒಳಪಟ್ಟಿದ್ದಾರೆ ಎಂದು ಹೇಳಿದರು.
ಪಿ.ಲಂಕೇಶ್ ಅವರು ಅಧಿಕಾರ ಕೇಂದ್ರಕ್ಕೆ ಮುಖಾಮುಖಿಯಾಗಿ ನಿಂತವರು. ಅಂದು ಲಂಕೇಶ್ ಅವರು ಪಟ್ಟಾಭದ್ರರು, ಜಗದ್ಗುರುಗಳು, ರಾಜಕಾರಣಿಗಳು, ಭೂ ಮಾಲೀಕರ ವಿರುದ್ಧ ನಿರಂತರ ಹಾಗೂ ನಿರ್ಭೀತರಾಗಿ ಮಾತನಾಡಿದರು. ಆದರೆ ಇಂದಿನ ದಿನಮಾನಗಳಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಕೇಂದ್ರಕ್ಕೆ ಮುಖಾಮುಖಿಯಾಗಲು ಸಾಧ್ಯವೇ ಇಲ್ಲದಂತಾಗಿದೆ. ಲಂಕೇಶ್ ಪತ್ರಿಕೆಯಿಂದ ನಾವು ಅಷ್ಟೆಲ್ಲಾ ಪ್ರಭಾವಿತರಾದರೂ, ಲಂಕೇಶ್ ಅವರನ್ನು ಓದಿ, ನೆಚ್ಚಿಕೊಂಡು, ಪ್ರಜ್ಞಾವಂತರಾದ ನಾವುಗಳು ಲಂಕೇಶ್ ಅವರ ಪ್ರಜ್ಞಾವಂತಿಕೆ, ನಿಷ್ಠುರತೆ ನಮ್ಮ ತಲೆಮಾರುಗಳಿಗೆ ಮುಂದುವರೆಯಲಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕಥೆಗಾರ ಡಾ.ಗಂಗಾಧರಯ್ಯ ಮಾತನಾಡಿ, ಲಂಕೇಶ್ ಓದಿನ ಹುಚ್ಚು ಹಿಡಿಸಿದ ಪತ್ರಿಕೆ. ಇದು ಕೇವಲ ಪತ್ರಿಕೆ ಮಾತ್ರವಾಗಿರದೇ ಸಿನಿಮಾ, ಕ್ರೀಡೆ, ರಾಜಕಾರಣ, ಟೀಕೆ-ಟಿಪ್ಪಣಿ ಸೇರಿದಂತೆ ಅನೇಕ ವಿಷಯಗಳನ್ನು ಸಹ ಹೇಳುತ್ತಿತ್ತು. ನಾನು ಕನ್ನಡದಲ್ಲಿ ವರ್ಷಕ್ಕೊಮ್ಮೆ ಮತ್ತೆ ಮತ್ತೆ ಓದುವ ಲೇಖಕರರು ಪಿ.ಲಂಕೇಶ್, ತೇಜಸ್ವಿ ಹಾಗೂ ಕುವೆಂಪು. ಅವರ ಜೀವನದೃಷ್ಠಿ, ಭಾಷೆ, ನಿರೂಪಣೆ ಬಹಳ ಮುಖ್ಯ ಕಾರಣವಾಗಿದೆ ಎಂದು ಹೇಳಿದರು.
ಪಿ.ಲಂಕೇಶ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು. ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದರೆ ಮಕ್ಕಳು ಹೆಚ್ಚು ಅವರ ಸಾಹಿತ್ಯ ಅಧ್ಯಯನ ಮಾಡಲು ಅನುಕೂಲವಾಗುತ್ತಿತ್ತು. ಜ್ಞಾನಪೀಠ ಪ್ರಶಸ್ತಿ ಬಾರದೇ ಇರುವುದು ಅವರಿಗೆ ಆದ ನಷ್ಟ ಅಲ್ಲ. ಅದು ಕನ್ನಡ ಸಾಹಿತ್ಯಕ್ಕೆ ಆದ ನಷ್ಟ. ಲಂಕೇಶ್ ಅವರ ಸಾಹಿತ್ಯ ವಿಶ್ವವಿದ್ಯಾಲಯಗಳಲ್ಲಿ ಇನ್ನೂ ಸರಿಯಾಗಿ ತಲುಪಿಲ್ಲ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ಹೆಚ್ಚು ಲಂಕೇಶ್ ಅವರ ಸಾಹಿತ್ಯ ಬಳಸಿಕೊಳ್ಳಬೇಕು ಎಂದು ಹೇಳಿದರು.ಸರ್ಕಾರಿ ಕಲಾ ಕಾಲೇಜು ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಜೆ.ಕರಿಯಪ್ಪ ಮಾಳಿಗೆ, ಗೆಳೆಯರ ಬಳಗದ ಗೌನಹಳ್ಳಿ ಗೋವಿಂದಪ್ಪ, ಸಾಹಿತಿ ಪರಮೇಶ್ವರಪ್ಪ ಕುದುರಿ, ಪಿಹೆಚ್‍ಡಿ ಸಂಶೋಧನಾರ್ಥಿ ಬಿ.ಪಿ.ಸಂತೋಷ್ ಕುಮಾರ್ ಬೆಳಗಟ್ಟ ಇದ್ದರು.