ಚನ್ನಗಿರಿ ಪುರಸಭೆ ನಿರ್ಲಕ್ಷ: ಅರ್ಹರಿಗೆ ದೊರಕದ ಲ್ಯಾಪ್ ಟಾಪ್ಸ್‌

| Published : Jul 11 2024, 01:33 AM IST

ಚನ್ನಗಿರಿ ಪುರಸಭೆ ನಿರ್ಲಕ್ಷ: ಅರ್ಹರಿಗೆ ದೊರಕದ ಲ್ಯಾಪ್ ಟಾಪ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ಯೋಜನೆಗಳು ಸಕಾಲಕ್ಕೆ ಅರ್ಹರಿಗೆ ದೊರೆತರೆ ಜನಪರ ಉದ್ದೇಶ ಈಡೇರಿದಂತಾಗುತ್ತದೆ. ಆದರೆ, ಅಧಿಕಾರಿಗಳ ನಿರ್ಲಕ್ಷದಿಂದ ಸೌಲಭ್ಯಗಳು ದೊರೆಯದೇ ಸರ್ಕಾರದ ಉದ್ದೇಶಕ್ಕೆ ಹಿನ್ನಡೆಗಳೂ ಆಗುತ್ತಿವೆ. ಇದಕ್ಕೆ ಸ್ಪಷ್ಟ ಉದಾಹರಣೆ ಚನ್ನಗಿರಿ ಪುರಸಭೆ ಆಡಳಿತ ಕಾರ್ಯವೈಖರಿ.

- 60 ನಿರುದ್ಯೋಗಿ ಪದವೀಧರರಿಗೆ ₹28.98 ಲಕ್ಷ ವೆಚ್ಚದಲ್ಲಿ ಖರೀದಿಸಿರುವ ಲ್ಯಾಪ್ ಟಾಪ್‌ಗಳೀಗ ಮೂಲೆಗುಂಪು

- - - - ಅರ್ಹರ ಆಯ್ಕೆ ಪಟ್ಟಿ ಡಿಸಿ ಕಚೇರಿಗೆ ಕಳಿಸದೇ ಅಧಿಕಾರಿಗಳ ನಿರ್ಲಕ್ಷ್ಯ

- ತ್ರಿಶೂಲ್ ಏಜೆನ್ಸಿ ಲ್ಯಾಪ್‌ ಟಾಪ್‌ಗಳ ಖರೀದಿಸಿ 17 ತಿಂಗಳೇ ಕಳೆದರೂ ಹಣ ಸಂದಾಯವಾಗಿಲ್ಲ

- ಲ್ಯಾಪ್ ಟಾಪ್‌ಗಳಿಗೆ 1 ವರ್ಷದ ವಾರಂಟಿ ಅವಧಿಯೂ ಮುಗಿದಿದ್ದು ಯೋಜನೆ ಹಳ್ಳ ಹಿಡಿದಿರುವುದಕ್ಕೆ ಸಾಕ್ಷಿ - - -

ಕನ್ನಡಪ್ರಭ ವಾರ್ತೆ, ಚನ್ನಗಿರಿ

ಸರ್ಕಾರದ ಯೋಜನೆಗಳು ಸಕಾಲಕ್ಕೆ ಅರ್ಹರಿಗೆ ದೊರೆತರೆ ಜನಪರ ಉದ್ದೇಶ ಈಡೇರಿದಂತಾಗುತ್ತದೆ. ಆದರೆ, ಅಧಿಕಾರಿಗಳ ನಿರ್ಲಕ್ಷದಿಂದ ಸೌಲಭ್ಯಗಳು ದೊರೆಯದೇ ಸರ್ಕಾರದ ಉದ್ದೇಶಕ್ಕೆ ಹಿನ್ನಡೆಗಳೂ ಆಗುತ್ತಿವೆ. ಇದಕ್ಕೆ ಸ್ಪಷ್ಟ ಉದಾಹರಣೆ ಚನ್ನಗಿರಿ ಪುರಸಭೆ ಆಡಳಿತ ಕಾರ್ಯವೈಖರಿ.

ನಿರುದ್ಯೋಗಿ ಯುವ ಜನಾಂಗಕ್ಕೆ ಸ್ವಉದ್ಯೋಗ ನಡೆಸಿ, ಸ್ವಾವಲಂಬನೆ ಸಾಧಿಸಲಿ ಎಂಬ ಉದ್ದೇಶದಿಂದ ಈ ಹಿಂದಿನ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವಧಿಯಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಲ್ಲಿ ಪಟ್ಟಣ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಹಾಗೂ ಅಂಗವಿಕಲರು ಸೇರಿದಂತೆ 60 ನಿರುದ್ಯೋಗಿ ಪದವೀಧರರಿಗೆ ₹28.98 ಲಕ್ಷ ವೆಚ್ಚದಲ್ಲಿ ಉಚಿತ ಲ್ಯಾಪ್ ಟಾಪ್‌ಗಳ ವಿತರಣೆಗೆ ಕ್ರಮ ಕೈಗೊಂಡಿದ್ದರು. ಈ ಬಗ್ಗೆ ಟೆಂಡರ್ ಪ್ರಕ್ರಿಯೆಯೂ ಮುಗಿದು, ಟೆಂಡರ್ ದಾರರು ಲ್ಯಾಪ್ ಟಾಪ್‌ಗಳನ್ನು ತಂದು ಇಟ್ಟುಕೊಂಡಿದ್ದಾರೆ. ಆದರೆ, ಅರ್ಹರಿಗೆ ಮಾತ್ರ ಇನ್ನೂ ಕೈಸೇರಿಲ್ಲ.

ಚನ್ನಗಿರಿ ಪುರಸಭೆ ಆಧಿಕಾರಿಗಳು ಮತ್ತು ಸದಸ್ಯರ ನಿರ್ಲಕ್ಷದಿಂದ ಒಂದೂವರೆ ವರ್ಷ ಕಳೆದರೂ ಈ ಲ್ಯಾಪ್ ಟಾಪ್‌ಗಳು ಫಲಾನುಭವಿಗಳಿಗೆ ವಿತರಣೆಯಾಗದೇ ಇರುವುದು ಸ್ಥಳೀಯ ಪುರಸಭೆ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ವಾರಂಟಿ ಅವಧಿ ಅಂತ್ಯ:

ಜಿಲ್ಲಾಧಿಕಾರಿಗಳ ನಗರಾಭಿವೃದ್ಧಿ ಕೋಶದ ವತಿಯಿಂದ 2023ರ ಫೆ.4ರಂದ ಲ್ಯಾಪ್ ಟಾಪ್‌ಗಳ ಸರಬರಾಜು ಅದೇಶ ನೀಡಿದ್ದಾರೆ. ಈ ಟೆಂಡರ್ ಪ್ರಕ್ರಿಯೆಯಂತೆ 1 ಲ್ಯಾಪ್ ಟಾಪ್ ಬೆಲೆ ತೆರಿಗೆ ಸೇರಿ ₹48.300 ಆಗಿದೆ. 60 ಲ್ಯಾಪ್ ಟಾಪ್‌ಗಳಿಗೆ ₹28.98 ಲಕ್ಷ ಮೊತ್ತಕ್ಕೆ ತ್ರಿಶೂಲ್ ಏಜೆನ್ಸಿ ಅವರು ಈ ಲ್ಯಾಪ್‌ ಟಾಪ್‌ಗಳನ್ನು ಖರೀದಿಸಿ ತಂದಿದ್ದಾರೆ. ಲ್ಯಾಪ್ ಟಾಪ್ ಖರೀದಿಸಿ 17 ತಿಂಗಳೇ ಕಳೆದಿದೆ. ಆದರೆ, ಫಲಾನುಭವಿಗಳಿಗೆ ಮಾತ್ರ ದೊರಕಿಲ್ಲ. ದುರಂತವೆಂದರೆ, ಈ ಲ್ಯಾಪ್ ಟಾಪ್‌ಗಳಿಗೆ ನೀಡಿದ್ದ ವಾರೆಂಟಿ ಅವಧಿಯೂ ಮುಗಿದಿರುವುದು ಯೋಜನೆ ಹಳ್ಳ ಹಿಡಿದಿರುವುದಕ್ಕೆ ಸಾಕ್ಷಿ.

ಪುರಸಭೆ ಆಡಳಿತ 60 ಅರ್ಹರ ಆಯ್ಕೆ ಪಟ್ಟಿಯನ್ನು ಡಿಸಿ ಕಚೇರಿಗೆ ಕಳುಹಿಸಬೇಕು. ಆದರೆ ಇಲ್ಲಿಯವರೆಗೂ ಫಲಾನುಭವಿಗಳ ಆಯ್ಕೆ ಪಟ್ಟಿ ಕಳಿಸಿಲ್ಲ. ಇದರ ಹಿಂದೆ ಯಾರ ಕೈವಾಡ ಇದೆ ಎನ್ನುವುದು ತಿಳಿಯದಾಗಿದೆ.

15 ತಿಂಗಳ ಹಿಂದೆಯೇ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ. ಎನ್.ಮಹಾಂತೇಶ್ ಅವರು ಫಲಾನುಭವಿಗಳನ್ನು ಆಯ್ಕೆ ಮಾಡಿ, ಕೌನ್ಸಿಲ್‌ ಸಭೆ ಅನುಮೋದನೆಯ ನಡವಳಿಕೆಯೊಂದಿಗೆ ಈ ಕಚೇರಿಗೆ ಫಲಾನುಭವಿಗಳ ಪಟ್ಟಿ ಸಲ್ಲಿಸಲು ತಿಳಿಸಿದ್ದರು. ಈ ಬಗ್ಗೆ ನಿರ್ಲಕ್ಷ ವಹಿಸಿದರೆ ಮುಂದಿನ ಆಗು-ಹೋಗುಗಳಿಗೆ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸೂತ್ತೋಲೆ ಸಹ ಹೊರಡಿಸಲಾಗಿತ್ತು. ಹೀಗಿದ್ದರೂ ಪುರಸಭೆ ಜವಾಬ್ದಾರಿಯುತ ಅಧಿಕಾರಿಗಳಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ ಯಾವುದೇ ಕಾಳಜಿ ವಹಿಸಿಲ್ಲ. ಇದರಿಂದ ನಿರುದ್ಯೋಗಿ ಫಲಾನುಭವಿಗಳಿಗೆ ತೀವ್ರ ಅನ್ಯಾಯ ಆದಂತಾಗಿದೆ.

- - - ಬಾಕ್ಸ್‌

* ಚುನಾಯಿತ ಸದಸ್ಯರಿಂದಲೇ ಅರ್ಜಿ

ಪುರಸಭೆಯ ಸಮುದಾಯ ಸಂಘಟನೆ ಅಧಿಕಾರಿ ಬಾಲಾಜಿ ರಾವ್‌ ಹೇಳುವಂತೆ, ಯೋಜನೆಯಡಿ ಸೌಲಭ್ಯಕ್ಕೆ 9 ಪುರಸಭೆ ಚುನಾಯಿತ ಸದಸ್ಯರೇ ಲ್ಯಾಪ್ ಟಾಪ್‌ಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಇದು ಕಾನೂನು ವಿರುದ್ಧ ನಡೆ. ಈ ಬಗ್ಗೆ ಪುರಸಭೆ ಸದಸ್ಯರ ಗಮನಕ್ಕೆ ತಂದರೆ, ಸೌಲಭ್ಯ ಯಾಕೆ ಕೊಡಲು ಬರುವುದಿಲ್ಲ ಎಂದು ದಬಾಯಿಸುತ್ತಾರೆ. ಸಮಸ್ಯೆಯನ್ನು ಮುಖ್ಯಾಧಿಕಾರಿ ಗಮನಕ್ಕೆ ತರಲಾಗಿದೆ. ಅವರ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

- - - ಕೋಟ್ಸ್‌ ಈಗಾಗಲೇ ಹಲವಾರು ಕಾರಣಗಳಿಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ತಡವಾಗಿದೆ. ಆಯ್ಕೆ ಪಟ್ಟಿಯಲ್ಲಿ ಕೆಲವು ಲೋಪದೋಶಗಳು ಇದ್ದ ಕಾರಣ, ಅದನ್ನು ಸರಿಪಡಿಸಿ ಮುಂದಿನ 10 ದಿನಗಳ ಒಳಗಾಗಿ ಫಲಾನುಭವಿಗಳಿಗೆ ಲ್ಯಾಪ್ ಟಾಪ್‌ಗಳನ್ನು ವಿತರಣೆ ಮಾಡಲಾಗುವುದು

- ಕೃಷ್ಣ ಡಿ. ಕಟ್ಟಿಮನಿ, ಮುಖ್ಯಾಧಿಕಾರಿ, ಪುರಸಭೆ

- - -

ಬಾಕ್ಸ್‌

* ಲ್ಯಾಪ್‌ಟಾಪ್‌ ಖರೀದಿ ಹಣ ಬಾರದೇ ತೊಂದರೆ

ಲ್ಯಾಪ್ ಟಾಪ್‌ ಟೆಂಡರ್ ಪಡೆದ ತ್ರಿಶೂಲ್ ಏಜೆನ್ಸಿಯ ಚಂದನ್‌ ಮಾಹಿತಿ ನೀಡಿ, ದಾವಣಗೆರೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಈ ಯೋಜನೆ ಫಲಾನುಭವಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ನೀಡಿ, ಆಯಾ ಟೆಂಡರ್‌ದಾರರು ಹಣವನ್ನು ಸರ್ಕಾರದಿಂದ ಪಡೆದುಕೊಂಡಿದ್ದಾರೆ. ಆದರೆ, ಚನ್ನಗಿರಿ ಪಟ್ಟಣದ ಪುರಸಭೆಯವರು ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ಗೊಂದಲ ಸೃಷ್ಠಿಸಿದ್ದಾರೆ. ಈಗಾಗಲೇ ಲ್ಯಾಪ್ ಟಾಪ್‌ಗಳನ್ನು ಖರೀದಿ ಮಾಡಲಾಗಿದೆ. ಅವುಗಳ ಗ್ಯಾರಂಟಿ ವಾರಂಟಿಯ ಅವಧಿಗಳು ಮುಗಿಯುತ್ತಿವೆ. ಸಮಸ್ಯೆಗಳಿರುವ ಫಲಾನುಭವಿಗಳನ್ನು ಬಿಟ್ಟು ಇನ್ನುಳಿದ ಅರ್ಹರಿಗಾದರೂ ಲ್ಯಾಪ್ ಟಾಪ್ ಸೌಲಭ್ಯ ವಿತರಣೆಯಾಗಲಿ. ಈಗಾಗಲೇ ಖರೀದಿ ಮಾಡಿರುವ ಲ್ಯಾಪ್ ಟಾಪ್‌ಗಳ ಹಣವೂ ಬಾರದೇ ನಮಗೆ ತುಂಬಾ ತೊಂದರೆಯಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಲಿ ಎಂದು ಹೇಳುತ್ತಾರೆ. - - -

-10ಕೆಸಿಎನ್‌ಜಿ1:

ಚನ್ನಗಿರಿ ಪಟ್ಟಣದ ಪುರಸಭೆ ಕಚೇರಿ.