ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎಗೆ ನೀಡಬೇಕು ಎಂದು ಅಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಬಜ್ಪೆ ಬಳಿ ಭಾನುವಾರ ಬೃಹತ್‌ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎಗೆ ನೀಡಬೇಕು ಎಂದು ಅಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಬಜ್ಪೆ ಬಳಿ ಭಾನುವಾರ ಬೃಹತ್‌ ಪ್ರತಿಭಟನೆ ನಡೆಯಿತು.

ಬಜ್ಪೆಯ ಶಾರದಾ ಮಂಟಪ ಮುಂಭಾಗ ಮಳೆಯ ನಡುವೆ ಈ ಜನಾಗ್ರಹ ಸಭೆ ನಡೆದಿದ್ದು, ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಸ್ಥಳೀಯರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಘೋಷಿತವಾಗಿ ಬಂದ್‌ ಮಾಡಿದ್ದರು. ಬಸ್ಸುಗಳ ಸಂಚಾರ ಮಾರ್ಗ ಬದಲಿಸಲಾಗಿತ್ತು.

ಸಭೆಯಲ್ಲಿ ಮಾತನಾಡಿದ ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಎಂ. ಶೆಟ್ಟಿ, ನನ್ನ ಮಗನ ಕೊಲೆ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆ ಮಾಡಲು ಈ ಸರ್ಕಾರ ಅವಕಾಶ ನೀಡುವುದಿಲ್ಲ. ಹಾಗಾಗಿ ತನಿಖೆಯನ್ನು ಎನ್‌ಐಎಗೆ ವಹಿಸಲೇಬೇಕು. ಗೃಹ ಸಚಿವ ಪರಮೇಶ್ವರ್ ಮತ್ತು ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್ ಪದೇ ಪದೇ ನನ್ನ ಮಗ ರೌಡಿ ಎನ್ನುತ್ತಿದ್ದಾರೆ. ಆದರೆ ನನ್ನ ಮಗ ಹಿಂದೂ ಕಾರ್ಯಕರ್ತ. ಅವನ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಮುಖ್ಯ ಭಾಷಣಕಾರ ಶ್ರೀಕಾಂತ್ ಶೆಟ್ಟಿ ಮಾತನಾಡಿ, ಒಬ್ಬನೇ ಒಬ್ಬ ಕಾಂಗ್ರೆಸ್ ನಾಯಕ ಸುಹಾಸ್ ಶೆಟ್ಟಿ ಮನೆಗೆ ಹೋಗಿಲ್ಲ. ಇಂತಹ ಸರ್ಕಾರ ಕೊಲೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಬಿಡಲ್ಲ. ಕೇಂದ್ರ ತನಿಖಾ ತಂಡದಿಂದ ತನಿಖೆಯಾದರೆ ಕೊಲೆಯ ಹಿಂದಿನ ಕಾಣದ ಕೈಗಳು ಯಾರದ್ದೆಂದು ಗೊತ್ತಾಗಬಹುದು ಎಂದರು.

ಸುಹಾಸ್ ಶೆಟ್ಟಿ ಬಲಿದಾನಕ್ಕೆ ಉತ್ತರವನ್ನು ಎಲ್ಲಿ, ಹೇಗೆ ಕೊಡಬೇಕು ಎಂಬುದನ್ನು ಹಿಂದೂ ಸಮಾಜ ತೀರ್ಮಾನ ಮಾಡುತ್ತದೆ ಎಂದು ಶ್ರೀಕಾಂತ್‌ ಶೆಟ್ಟಿ ಹೇಳಿದರು.

ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಇಬ್ಬರು ಸಿಬ್ಬಂದಿ ಹಾಗೂ ಒಬ್ಬ ರಾಜಕಾರಣಿ ಶಾಮೀಲಾಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಿದರೆ ಇವರೆಲ್ಲರ ಹೆಸರು ಬಹಿರಂಗವಾಗಲಿದೆ ಎಂದರು.ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪುರುಷೋತ್ತಮ್, ಮುಖಂಡರಾದ ಶಿವಾನಂದ ಮೆಂಡನ್, ಶರಣ್ ಪಂಪ್‌ವೆಲ್, ಜಗದೀಶ್ ಶೇಣವ, ಭುಜಂಗ ಕುಲಾಲ್, ಸುಹಾಸ್ ಶೆಟ್ಟಿ ತಂದೆ ಮೋಹನ್ ಶೆಟ್ಟಿ ವೇದಿಕೆಯಲ್ಲಿದ್ದರು. ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಭಾಗೀರತಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮತ್ತಿತರರು ಭಾಗವಹಿಸಿದ್ದರು.