ರಾಜ್ಯದಲ್ಲೇ ೪೦೦ ಚದರಡಿ ಅಳತೆಯ ಅತಿ ದೊಡ್ಡ ಮಂಡಲ ರಂಗೋಲಿಯನ್ನು ಅತ್ಯಾಕರ್ಷಕವಾಗಿ ರಚಿಸುವ ಮೂಲಕ ಮಂಡ್ಯ ಹುಡುಗಿಯೊಬ್ಬಳು ಹೊಸ ದಾಖಲೆಯನ್ನು ಬರೆದಿದ್ದಾರೆ. ೩೦ ಕೆಜಿ ರಂಗೋಲಿ ಬಳಸಿ ೧೦ ಗಂಟೆಯೊಳಗೆ ಸುಂದರವಾಗಿ ಮಂಡಲವನ್ನು ವಿನ್ಯಾಸಗೊಳಿಸಿದ್ದಾರೆ. ಆದರೆ, ಇದು ಯಾವುದೇ ದಾಖಲೆಗೂ ಸೇರದಿರುವುದು ವಿಪರ್ಯಾಸದ ಸಂಗತಿ.
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯರಾಜ್ಯದಲ್ಲೇ ೪೦೦ ಚದರಡಿ ಅಳತೆಯ ಅತಿ ದೊಡ್ಡ ಮಂಡಲ ರಂಗೋಲಿಯನ್ನು ಅತ್ಯಾಕರ್ಷಕವಾಗಿ ರಚಿಸುವ ಮೂಲಕ ಮಂಡ್ಯ ಹುಡುಗಿಯೊಬ್ಬಳು ಹೊಸ ದಾಖಲೆಯನ್ನು ಬರೆದಿದ್ದಾರೆ. ೩೦ ಕೆಜಿ ರಂಗೋಲಿ ಬಳಸಿ ೧೦ ಗಂಟೆಯೊಳಗೆ ಸುಂದರವಾಗಿ ಮಂಡಲವನ್ನು ವಿನ್ಯಾಸಗೊಳಿಸಿದ್ದಾರೆ. ಆದರೆ, ಇದು ಯಾವುದೇ ದಾಖಲೆಗೂ ಸೇರದಿರುವುದು ವಿಪರ್ಯಾಸದ ಸಂಗತಿ.
ಕೆ.ಸಿ.ಪುಣ್ಯಶ್ರೀ ಮಂಡಲ ರಂಗೋಲಿ ರಚಿಸಿದ ಕಲಾವಿದೆ. ಈಕೆ ಮಂಡ್ಯ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಸಿ.ಚನ್ನೇಗೌಡರ ಪುತ್ರಿ. ನಗರದ ಬಂದೀಗೌಡ ಬಡಾವಣೆಯಲ್ಲಿ ನೆಲೆಸಿರುವ ಪುಣ್ಯಶ್ರೀ ಬಡಾವಣೆಯ ಗಣೇಶೋತ್ಸವ ನಡೆದಿರುವ ಸ್ಥಳದಲ್ಲಿ ಈ ವರ್ಣಮಯ ಮಂಡಲವನ್ನು ಸುಂದರವಾಗಿ ರಚಿಸಿ ಎಲ್ಲರ ಗಮನಸೆಳೆದಿದ್ದಾರೆ. ಬಡಾವಣೆಯ ಜನರೂ ಕೂಡ ಈ ಮಂಡಲದ ಆಕರ್ಷಣೆಗೆ ಒಳಗಾಗಿ ಬಾಲ ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ.ದ್ವಿತೀಯ ಪಿಯುಸಿ ಓದುತ್ತಿದ್ದ ಸಮಯದಲ್ಲಿ ಪುಣ್ಯಶ್ರೀ ಸ್ನೇಹಿತೆ ಜೆ.ದೀಕ್ಷಾ ಎಂಬಾಕೆ ಬಿಡುವಿನ ವೇಳೆಯಲ್ಲಿ ಮಂಡಲ ರಚಿಸುತ್ತಿದ್ದರು. ಆಕೆ ಬಿಡಿಸುತ್ತಿದ್ದ ಮಂಡಲ ಕಲೆಯಿಂದ ಪ್ರೇರಿತರಾದ ಕೆ.ಸಿ.ಪುಣ್ಯಶ್ರೀ ತಾನೂ ಸಹ ಈ ಕಲೆಯಲ್ಲಿ ಸಾಧನೆ ಮಾಡುವ ಸಂಕಲ್ಪ ಮಾಡಿದರು. ಆರಂಭದಲ್ಲಿ ೧೦ ಅಡಿ ವಿನ್ಯಾಸದ ಮಂಡಲ ರಚಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ಆಗಲೂ ಅದು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದಂತೆ ಯಾವುದೇ ದಾಖಲೆಯನ್ನೂ ಸೇರಿಸಲು ಸಾಧ್ಯವಾಗಲಿಲ್ಲ.
ಈಗ ೨೦*೨೦ ಅಡಿ ಅಳತೆ (೪೦೦ ಚದರಡಿ)ಯಲ್ಲಿ ಮಂಡಲ ರಚಿಸುವ ಸಮಯದಲ್ಲೂ ಕಾರಣಾಂತರಗಳಿಂದ ದಾಖಲೆಗೆ ಸೇರಿಸಲು ಕೆ.ಸಿ.ಪುಣ್ಯಶ್ರೀ ಅವರಿಂದ ಸಾಧ್ಯವಾಗಲಿಲ್ಲ. ಆ ಕೊರಗು ಇಂದಿಗೂ ಅವರನ್ನು ಕಾಡುತ್ತಲೇ ಇದೆ.ಹತ್ತೊಂಬತ್ತು ವರ್ಷದ ಕೆ.ಸಿ.ಪುಣ್ಯಶ್ರೀ ರಚಿಸಿರುವ ಮಂಡಲ ರಂಗೋಲಿಯಲ್ಲಿ ೧೧ ಜಿಯೋ ಮೆಟ್ರಿಕಲ್ ವೃತ್ತಗಳು, ೩೦ ಜಿಯೋಮೆಟ್ರಿಕಲ್ ಸಾಲುಗಳಿವೆ. ಈ ಮಂಡಲ ರಚನೆಯಿಂದ ಸಕಾರಾತ್ಮಕ ಶಕ್ತಿ, ಸಮತೋಲನ ಮತ್ತು ಶಾಂತಿಯನ್ನು ಗಳಿಸಬಹುದು ಎಂಬ ನಂಬಿಕೆ ಇದೆ. ದೇವಸ್ಥಾನಗಳಲ್ಲಿ ನಡೆಯುವ ಹೋಮ-ಹವನ, ಗೃಹ ಪ್ರವೇಶ ಸೇರಿದಂತೆ ಇನ್ನಿತರ ಶುಭ-ಸಮಾರಂಭಗಳಲ್ಲಿ ಮಂಡಲವನ್ನು ರಚಿಸಿ ದೇವರನ್ನು ಪೂಜಿಸುವುದು ಉಂಟು. ಈ ಮಂಡಲವನ್ನು ಒಳ್ಳೆಯ ಕಾರ್ಯಗಳಿಗೆ ಹಾಗೂ ಮಾಟ-ಮಂತ್ರಗಳಂತಹ ಕೆಟ್ಟ ಕಾರ್ಯಗಳಿಗೂ ಬಳಸುವುದುಂಟು.
ಮಾನವರಾದ ನಾವು ಪ್ರತಿಯೊಂದು ವೃತ್ತದಿಂದ ಒಳ್ಳೆಯ ವಿಚಾರ ಮತ್ತು ಜಾಗೃತಿಯನ್ನು ಮೂಡಿಸಿಕೊಳ್ಳಬೇಕು ಎಂಬ ಉದ್ದೇಶವನ್ನು ಹೊಂದಿದೆ. ಪ್ರಕೃತಿ ಸಂರಕ್ಷಣೆ, ಸ್ವಚ್ಛತೆ, ನೀರಿನ ಉಳಿವು, ಪ್ರಾಣಿ-ಪಕ್ಷಿಗಳ ರಕ್ಷಣೆ, ಶಾಂತಿ ಹಾಗೂ ಮಾನವೀಯ ಸಂದೇಶಗಳನ್ನು ಈ ಮಂಡಲದ ಮೂಲಕ ಜನರಿಗೆ ತಲುಪಿಸಲು ಪ್ರಯತ್ನಿಸಿದ್ದೇನೆ. ಕೇವಲ ಇದನ್ನು ಕಲೆಯಾಗಿ ನೋಡದೆ ಪ್ರತಿಯೊಂದು ವೃತ್ತದ ಅರ್ಥವನ್ನು ತಿಳಿದುಕೊಂಡು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬುದು ನನ್ನ ಉದ್ದೇಶ. ಮಂಡಲ ಕಲೆ ಎಂದರೆ ವೃತ್ತಗಳು, ಆಕಾರಗಳು ಮತ್ತು ವಿನ್ಯಾಸವನ್ನು ಸಮಮಿತಿಯಾಗಿ ಜೋಡಿಸುವ ಕಲೆ ಎಂದು ಕೆ.ಸಿ.ಪುಣ್ಯಶ್ರೀ ಅಭಿಮತವಾಗಿದೆ.ರಂಗೋಲಿ, ಮೆಹಂದಿ ಕಲೆಯಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್, ಗಿನ್ನಿಸ್ ದಾಖಲೆ ಮಾಡಿದವರಿದ್ದಾರೆ. ಆದರೆ, ಮಂಡಲ ರಂಗೋಲಿಯಲ್ಲಿ ದಾಖಲೆ ಮಾಡಿದವರು ಇದುವರೆಗೆ ಯಾರೂ ಇಲ್ಲ. ೧೦*೧೦ ಅಡಿ ಮತ್ತು ೨೦*೨೦ ಅಡಿ ಅಳತೆಯಲ್ಲಿ ಮಂಡಲ ರಂಗೋಲಿ ಬಿಡಿಸಿದ ಸಾಧನೆ ನನ್ನದಾಗಿದೆ. ಆದರೆ, ಅದನ್ನು ಎಲ್ಲೂ ಸಹ ದಾಖಲು ಮಾಡಲು ಸಾಧ್ಯವಾಗಲೇ ಇಲ್ಲ. ಆ ನೋವು ನನ್ನಲ್ಲಿದೆ. ಈ ಮಂಡಲ ರಚನೆಗೆ ೧೦ ಗಂಟೆ ಸಮಯ ೩೦ ಕೆಜಿ ರಂಗೋಲಿ ಬಳಸಿದ್ದೇನೆ. ಮಂಡಲದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಮುಂದೆ ೩೦*೩೦ ಅಡಿ ಅಳತೆಯ ಮಂಡಲ ರಂಗೋಲಿ ರಚಿಸಿ ದಾಖಲೆಗೆ ಸೇರಿಸುವ ಗುರಿ ಹೊಂದಿದ್ದೇನೆ.
- ಕೆ.ಸಿ.ಪುಣ್ಯಶ್ರೀ, ಮಂಡಲ ರಂಗೋಲಿ ಕಲಾವಿದೆ