ಸಾರಾಂಶ
ಗಪ್ಪಿ, ಗಾಂಬೂಜಿಯ ಲಾರ್ವಾ ನಾಶಕ ಮೀನುಗಳು ಕೆರೆಗೆ ಬಿಡುವ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಡೆಂಘೀ ಜ್ವರದ ನಿಯಂತ್ರಣಕ್ಕೆ ಪ್ರತಿ ತಿಂಗಳ ಮೊದಲನೇ ಶುಕ್ರವಾರ ಹಾಗೂ 3 ನೇ ಶುಕ್ರವಾರ ನಗರದ ಲಾರ್ವ ಸಮೀಕ್ಷೆ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಲೂಕು ವೈಧ್ಯಾಧಿಕಾರಿ ಡಾ.ವಿಜಯಕುಮಾರ್ ತಿಳಿಸಿದರು.
ಸೋಮವಾರ ಪಟ್ಟಣದ ಪಂಪ್ ಹೌಸ್ ಸಮೀಪದ ಕೆರೆಗೆ ಲಕ್ಕವಳ್ಳಿ ಸಮೀಪದ ಬಿ.ಆರ್.ಪಿ ಹಾಗೂ ಗಪ್ಪಿ ಗಂಬೋಸಿಯ ಸಾಕಾಣಿಕೆ ತೊಟ್ಟಿಯಿಂದ ತಂದ ಗಪ್ಪಿ, ಗಾಂಬೂಜಿಯ ಮೀನುಮರಿಗಳನ್ನು ಕೆರೆಗೆ ಬಿಡುವ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿ ದಿನ ಮನೆ, ಮನೆಗೆ ಭೇಟಿ ನೀಡಿ ಜ್ವರ ಸಮೀಕ್ಷೆ ಮಾಡಿ ಕರ ಪತ್ರಗಳನ್ನು ವಿತರಿಸುತ್ತಿದ್ದಾರೆ. ಲಾರ್ವ ಗುರುತಿಸಿ ಲಾರ್ವ ತಾಣಗಳನ್ನು ನಾಶ ಮಾಡಲಾಗುತ್ತದೆ. ಜೈವಿಕ ವಿಧಾನದ ಮೂಲಕ ಲಾರ್ವ ನಾಶಕ ಮೀನುಗಳಾದ ಗಪ್ಪಿ ಗಾಂಬೋಜಿಯಾ ಮೀನುಗಳನ್ನು ಪಟ್ಟಣ ಸಮೀಪ ಇರುವ ಮುಖ್ಯ ಕೆರೆ ಗಳಿಗೆ ಬಿಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಆರೋಗ್ಯ ಸಚಿವರ ಆದೇಶದಂತೆ ಪ್ರತಿ ಶುಕ್ರವಾರ ಸಾರ್ವಜನಿಕರು ತಮ್ಮ ಮನೆಯ ನೀರು ಶೇಖರಣೆ ತಾಣಗಳನ್ನು ಖಾಲಿ ಮಾಡಿ ನಂತರ ಉಜ್ಜಿ ತೊಳೆದು 2 ಗಂಟೆಗಳ ಕಾಲ ಒಣಗಿಸಿ ಮತ್ತೆ ನೀರು ಶೇಖರಿಸಿ ಮುಚ್ಚಿಟ್ಟು ಬಳಸಬೇಕು. ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಘನ ತ್ಯಾಜ್ಯಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಎಳನೀರು ಚಿಪ್ಪು, ಪ್ಲಾಸ್ಟಿಕ್ ಲೋಟ, ಹಳೆ ಪಾತ್ರೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿ, ಡೆಂಘೀ ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕೈಗೊಳ್ಳುತ್ತಿರುವ ಮನ್ನೆಚ್ಚರಿಕೆ ಕ್ರಮಗಳಿಗೆ ಪ್ರತಿಯೊಬ್ಬ ನಾಗರಿಕರು ಸಹಕಾರ ನೀಡಬೇಕು. ಘನ ತ್ಯಾಜ್ಯ ವಸ್ತು ಗಳನ್ನು ಸಮರ್ಪಕ ನಿರ್ವಹಣೆ ಮಾಡಬೇಕು. ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಜನರು ತಮ್ಮ ಮನೆಯಲ್ಲಿ ಸಂಗ್ರಹ ವಾಗುವ ಕಸವನ್ನು ಕಸ ಸಂಗ್ರಹಿಸುವ ವಾಹನಕ್ಕೆ ನೀಡಬೇಕು ಎಂದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಮನೋಹರ್ ಪಾಷಾ,ಬವಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್.ಎಂ.ದರ್ಶನಾಥ್, ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕ ಪವನ್ ಕರ್, ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಕೆ. ಭಗವಾನ್, ಕಿರಿಯ ಆರೋಗ್ಯ ನಿರೀಕ್ಷಣಾಧಿ ಕೇಶವಮೂರ್ತಿ, ಆರ್. ನಾಗೇಂದ್ರಪ್ಪ, ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಕುಮಾರ್, ವಾಟರ್ ಮ್ಯಾನ್ ಸುರೇಶ್ ಇದ್ದರು.