ಸಾರಾಂಶ
ಶ್ರಾವಣ ಮಾಸದ ಕಡೆ ಶನಿವಾರದ ಹಿನ್ನೆಲೆಯಲ್ಲಿ ಪಾಂಡವಪುರ ಪಟ್ಟಣದ ಹಾರೋಹಳ್ಳಿ ಶ್ರೀಲಕ್ಷ್ಮಿನಾರಾಯಣಸ್ವಾಮಿ, ಧರ್ಮ ಶನೈಶ್ಚರಸ್ವಾಮಿ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿದ ದೇವಸ್ಥಾನಗಳಲ್ಲಿ ಪೂಜೆ ಹಾಗೂ ದೇವರ ಉತ್ಸವ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರಾವಣ ಮಾಸದ ಕೊನೆಯ ಶನಿವಾರದ ಅಂಗವಾಗಿ ಜಿಲ್ಲೆಯ ಎಲ್ಲಾ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಸಾಂಗೋಪಸಾಂಗವಾಗಿ ನೆರವೇರಿದವು.ಮಂಡ್ಯ ತಾಲೂಕಿನ ಸಾತನೂರು ಶ್ರೀಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ಶ್ರಾವಣ ಕಡೇ ಶನಿವಾರದ ಅಂಗವಾಗಿ ಬೆಳಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದವು. ನರಸಿಂಹಸ್ವಾಮಿ ವಿಗ್ರಹವನ್ನು ಮಹಾರಾಜನ ವೇಷಭೂಷಣದೊಂದಿಗೆ ಅಲಂಕರಿಸಲಾಗಿತ್ತು. ದೇವಾಲಯದ ಒಳಾವರಣ ಮತ್ತು ಹೊರಗೆ ಹೂವುಗಳಿಂದ ಶೃಂಗರಿಸಲಾಗಿತ್ತು. ಸಹಸ್ರಾರು ಮಂದಿ ಭಕ್ತಾದಿಗಳು ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾದರು.
ಸಾತನೂರು ಬೆಟ್ಟ ಎಂದೇ ಹೆಸರಾಗಿರುವ ಇಲ್ಲಿ ಪ್ರತೀ ಶ್ರಾವಣ ಶನಿವಾರಗಳಂದು ವಿಶೇಷ ಜಾತ್ರಾ ಮಹೋತ್ಸವ ನಡೆಯುತ್ತದೆ. ಭಕ್ತರ ದಂಡು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ದೇವಾಲಯ ಸಮಿತಿಯವರು ಈ ಬಾರಿ ಅನ್ನದಾಸೋಹ ಭವನ ನಿರ್ಮಿಸಲು ಮುಂದಾಗಿದ್ದುಘಿ, ಈ ಹಿನ್ನೆಲೆಯಲ್ಲಿ ಭಕ್ತಾದಿಗಳು ಎಂದಿನಂತೆ ಸಹಕಾರ ನೀಡಬೇಕೆಂದು ಕೋರುತ್ತಿದ್ದರು. ಹಲವರು ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಅನ್ನಪ್ರಸಾದ ವಿತರಿಸಿ ವಿಶೇಷ ಸೇವೆ ಸಲ್ಲಿಸಿದರು.ನಗರದ ಮೈಸೂರು-ಬೆಂಗಳೂರು ಹೆದ್ದಾರಿ ಕಲ್ಲಹಳ್ಳಿಯ ಶ್ರೀ ಆಂಜನೇಯ ದೇವಸ್ಥಾನಕ್ಕೆ ಬೆಳಿಗ್ಗೆಯಿಂದಲೇ ಭಕ್ತರ ದಂಡು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಪುನೀತರಾದರು. ನಗರದ ಹನಿಯಂಬಾಡಿ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಉತ್ಸವ, ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬೆಳಗಿನಿಂದಲೇ ದೇವಾಲಯಕ್ಕೆ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.