ರಾಮಾನುಜಾಚಾರ್ಯರಿಗೆ ಸ್ವಾಮಿ ದಿವ್ಯದರ್ಶನ ನೀಡಿದ ಪ್ರತೀಕವಾಗಿ ನಡೆದ ದಶಾವತಾರದಲ್ಲಿ ನಡುರಾತ್ರಿಯಾದರೂ ನೂರಾರು ಭಕ್ತರು ಭಾಗವಹಿಸಿದ್ದರು. ಚೆಲುವನಾರಾಯಣಸ್ವಾಮಿ ಮತ್ಸ್ಯಾಲಂಕಾರದಲ್ಲಿ ರಾತ್ರಿ 12ಗಂಟೆಗೆ ದೇವಾಲಯದ ಹೊರಭಾಗ ಬಂದ ವೇಳೆ ಪ್ರಥಮ ಮಂಗಳಾರತಿ ಹಾಗೂ ಈಯಲ್ ಶಾತ್ತುಮೊರೈ ನೆರವೇರಿತು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ರಾಮಾನುಜಾಚಾರ್ಯರ 1009ನೇ ತಿರುನಕ್ಷತ್ರ ಮಹೋತ್ಸವದ ದಿನವಾದ ಬುಧವಾರ ತಡರಾತ್ರಿ ಚೆಲುವನಾರಾಯಣ ಸ್ವಾಮಿಯ ದಶಾವತಾರ ಉತ್ಸವ ವೈಭವಯುತವಾಗಿ ನೆರವೇರಿತು.ರಾಮಾನುಜಾಚಾರ್ಯರಿಗೆ ಸ್ವಾಮಿ ದಿವ್ಯದರ್ಶನ ನೀಡಿದ ಪ್ರತೀಕವಾಗಿ ನಡೆದ ದಶಾವತಾರದಲ್ಲಿ ನಡುರಾತ್ರಿಯಾದರೂ ನೂರಾರು ಭಕ್ತರು ಭಾಗವಹಿಸಿದ್ದರು. ಚೆಲುವನಾರಾಯಣಸ್ವಾಮಿ ಮತ್ಸ್ಯಾಲಂಕಾರದಲ್ಲಿ ರಾತ್ರಿ 12ಗಂಟೆಗೆ ದೇವಾಲಯದ ಹೊರಭಾಗ ಬಂದ ವೇಳೆ ಪ್ರಥಮ ಮಂಗಳಾರತಿ ಹಾಗೂ ಈಯಲ್ ಶಾತ್ತುಮೊರೈ ನೆರವೇರಿತು.
ನಂತರ ಕೂರ್ಮ, ವರಾಹ, ವಾಮನ, ನರಸಿಂಹ, ಬಲರಾಮ, ರಾಮ, ಕೃಷ್ಣನ ಅಲಂಕಾರಗಳ ವೇಳೆ ಪ್ರತ್ಯೇಕ ಕಪಾಯಿಗಳು ಮತ್ತು ವಿಶೇಷ ಕುಲಾವಿಗಳನ್ನು ಧರಿಸಲಾಗಿತ್ತು. ನಿದಿರ್ಷ ಸ್ಥಳಗಳಲ್ಲಿ ಪ್ರತಿ ಕುಲಾವಿಗಳು ಮತ್ತು ಅಲಂಕಾರದ ಕಪಾಯಿಗಳು ಬದಲಾದ ನಂತರ ಮಂಗಳಾರತಿ ನೆರವೇರುತ್ತಿದ್ದ ವೇಳೆ ಭಕ್ತರ ಸಂಭ್ರಮ ಇಮ್ಮಡಿಸುತ್ತಿತ್ತು.ದೇವಾಲಯದ ಹೊರ ಪ್ರಕಾರಗಳಲ್ಲಿ ನಡೆದ ದಶಾವತಾರ ರಾತ್ರಿ 1.45ರ ವೇಳೆಗೆ ಮುಕ್ತಾಯವಾದ ನಂತರ ಸಂಸ್ಕೃತ ಪಾಠ ಶಾಲೆ ಎದುರು ಚೆಲುವನಾರಾಯಣನ ನಿಜದರ್ಶನದೊಂದಿಗೆ ಪುಷ್ಪಕೈಂಕರ್ಯಸೇವೆ ನಡೆಸಲಾಯಿತು. ವಿದ್ವಾನ್ ಎಂ.ಜಿ.ಶ್ರೀಧರ ಮತ್ತು ವಿದ್ವಾನ್ ಆನಂದ್ ತಂಡದ ವಿಶೇಷ ನಾದಸ್ವರವಾದನದ ನಾದಮಾಧುರ್ಯದೊಂದಿಗೆ ಸ್ವಾಮಿ ನಿಧಾನಗತಿ ವಿಶೇಷ ನಡೆಯ ಉತ್ಸವ ಸಾಗುತ್ತಿದ್ದಾಗ ಭಕ್ತರು ಭೂವೈಕುಂಠದಂತೆ ಭಾವಿಸಿ ತಡರಾತ್ರಿಯಾದರೂ ಕಾದಿದ್ದು ಚೆಲುವನಾರಾಯಣಸ್ವಾಮಿಯ ದರ್ಶನ ಮಾಡಿ ಸಂಭ್ರಮಿಸಿ ಧನ್ಯತಾಭಾವ ಹೊಂದಿದರು.
ಇದಕ್ಕೂ ಮೊದಲು ಆಚಾರ್ಯರಾಮಾನುಜರಿಗೆ ಶ್ರೀಗಂಧದ ಅಲಂಕಾರದೊಡನೆ ಬೆಳ್ಳಿಯ ಪಲ್ಲಕ್ಕಿ ಉತ್ಸವ ರಾತ್ರಿ 7.30 ಕ್ಕೆ ಹೊರಟು ಸೀತಾರಣ್ಯ, ವೇದಾಂತ ದೇಶಿಕರ ಸನ್ನಿಧಿ ಹಾಗೂ ಮಣವಾಳಮಾಮುನಿಜೀಯರ್ ಸನ್ನಿಧಿಗಳಲ್ಲಿ ನಡೆದು ಯತಿರಾಜ ವಿಂಶತಿ, ಯತಿರಾಜ ಸಪ್ತತಿ ಪಾರಾಯಣ ಮುಕ್ತಾಯವಾದ ನಂತರ ರಾಮಾನುಜಚಾರ್ಯರ ಉತ್ಸವ ದೇವಾಲಯದ ಮುಂಭಾಗ ಬಂದಾಗ ಮುಚ್ಚಿದ ರಾಜಗೋಪುರದ ಭಾಗಿಲು ತೆಗೆದು ಚೆಲುವನಾರಾಯಣ ಆಚಾರ್ಯರಿಗೆ ದರ್ಶನ ನೀಡುವ ರೀತಿ ಉತ್ಸವ ಆರಂಭಿಸಲಾಯಿತು.ಬುದವಾರ ಇಡೀ ರಾತ್ರಿ ದೇವಾಲಯದಲ್ಲಿ ವಿಶೇಷಪಾರಾಯಣಗಳು, ಒಡೆಯವರ್ ತಾಲಾಟ್ಟು ನಡೆದು ಬೆಳಗಿನ 5 ಗಂಟೆ ವೇಳೆಗೆ ರಾಮಾನುಜಾಚಾರ್ಯರ 1009ನೇ ವರ್ಷದ ಹತ್ತು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನವಾದವು.