ಧಾರವಾಡದಲ್ಲಿ ತಡರಾತ್ರಿ ಮೊಳಗಿದ ಗುಂಡಿನ ಸದ್ದು

| Published : Nov 07 2024, 11:56 PM IST

ಧಾರವಾಡದಲ್ಲಿ ತಡರಾತ್ರಿ ಮೊಳಗಿದ ಗುಂಡಿನ ಸದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಅಭಿಷೇಕ ಹೇಳಿಕೆ ಅನ್ವಯ ರಾತ್ರಿ 12ರ ಸುಮಾರಿಗೆ ಮನೆಗೆ ಹೊರಟ ವೇಳೆ ಮೂವರು ಅಪರಿಚಿತರು ಬೈಕ್‌ಗೆ ಅಡ್ಡಗಟ್ಟಿ ಕಾರು ನಿಲ್ಲಿಸಿ ಜಗಳ ತೆಗೆದು ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೇ, ಪರವಾನಗಿ ಹೊಂದಿರುವ ಪಿಸ್ತೂಲ್‌ ಕಸಿದುಕೊಳ್ಳಲು ಪ್ರಯತ್ನಿಸಿ ತನ್ನನ್ನು ಮುಗಿಸಲು ಹೊಂಚು ಹಾಕಿದ್ದರು ಎಂದು ಹೇಳಿಕೆ ನೀಡಿದ್ದಾನೆ.

ಧಾರವಾಡ:

ಕ್ಷುಲ್ಲಕ ಕಾರಣಕ್ಕೆ ಇಲ್ಲಿಯ ಆರ್‌.ಎನ್‌. ಶೆಟ್ಟಿ ಜಿಲ್ಲಾ ಕ್ರೀಡಾಂಗಣದ ಬಳಿ ಬುಧವಾರ ತಡರಾತ್ರಿ ಪರವಾನಗಿ ಹೊಂದಿದ್ದ ರಿವಾಲ್ವಾರ್‌ನಿಂದ ಎರಡು ಬಾರಿ ಗುಂಡು ಹಾರಿದ್ದು, ಘಟನೆಗೆ ಸಂಬಂಧಿಸಿದಂತೆ ಗುಂಡು ಹಾರಿಸಿದ ಯುವಕನ್ನು ಬಂಧಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಫೈನಾನ್ಸ್‌ ವ್ಯವಹಾರ ಮಾಡುತ್ತಿದ್ದ ಅಭಿಷೇಕ ಬಡ್ಡಿಮನಿ (31) ತಡರಾತ್ರಿ 12ರಿಂದ 1ರ ಸಮಯದಲ್ಲಿ ಗುಂಡು ಹಾರಿಸಿದ್ದಾನೆ. ಕಾರಿನಲ್ಲಿ ಬಂದಿದ್ದ ಮೂವರೊಂದಿಗೆ ನಡೆದ ಜಗಳ ವಿಕೋಪಕ್ಕೆ ಹೋಗಿ ಬೈಕ್‌ ಮೇಲಿದ್ದ ಅಭಿಷೇಕ ಕಾರಿನ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಸುದ್ದಿ ತಿಳಿದ ಉಪ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಭಿಷೇಕನನ್ನು ಬಂಧಿಸಿ, ಇತರ ಮೂವರನ್ನು ಸಹ ವಶಕ್ಕೆ ಪಡೆದು ತೀವ್ರ ತನಿಖೆ ಕೈಗೊಂಡಿದ್ದಾರೆ.

ಗುರುವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಘಟನೆ ಬಗ್ಗೆ ಮಾಹಿತಿ ಪಡೆದು ತನಿಖೆ ಚುರುಕುಗೊಳಿಸಲು ಉಪನಗರ ಠಾಣೆ ಪೊಲೀಸರಿಗೆ ಸೂಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಘಟನೆಯಲ್ಲಿ ಉಪನಗರ ಪೊಲೀಸರು ಅಭಿಷೇಕನೊಂದಿಗೆ ಇತರ ಮೂವರನ್ನು ತಮ್ಮ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಘಟನೆ ಕುರಿತು ಎರಡು ಎಫ್ಐಆರ್‌ ದಾಖಲಾಗಿವೆ. ಅಭಿಷೇಕ ಹೇಳಿಕೆ ಅನ್ವಯ ರಾತ್ರಿ 12ರ ಸುಮಾರಿಗೆ ಮನೆಗೆ ಹೊರಟ ವೇಳೆ ಮೂವರು ಅಪರಿಚಿತರು ಬೈಕ್‌ಗೆ ಅಡ್ಡಗಟ್ಟಿ ಕಾರು ನಿಲ್ಲಿಸಿ ಜಗಳ ತೆಗೆದು ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೇ, ಪರವಾನಗಿ ಹೊಂದಿರುವ ಪಿಸ್ತೂಲ್‌ ಕಸಿದುಕೊಳ್ಳಲು ಪ್ರಯತ್ನಿಸಿ ತನ್ನನ್ನು ಮುಗಿಸಲು ಹೊಂಚು ಹಾಕಿದ್ದರು ಎಂದು ಹೇಳಿಕೆ ನೀಡಿದ್ದಾನೆ. ಇತರ ಮೂವರಾದ ದಿನೇಶ, ಪ್ರಜ್ವಲ್‌ ಹಾಗೂ ಗಣೇಶ, ಅಭಿಷೇಕ ಕುಡಿದ ಮತ್ತಿನಲ್ಲಿ ಏರ್ರಾಬಿರ್ರಿ ಬೈಕ್‌ ಚಲಾಯಿಸಿ ಕಾರಿಗೆ ಗುದ್ದಿದ್ದಾನೆ. ರಿಪೇರಿ ಮಾಡಿಕೊಡುವಂತೆ ಕೇಳಿದಾಗ ಜಗಳ ತೆಗೆದ. ಅದು ವಿಕೋಪಕ್ಕೆ ಹೋಗಿ ಹಲ್ಲೆಗೆ ಯತ್ನಿಸಿದ. ಬಳಿಕ ತನ್ನ ಜೇಬಿನಿಂದ ರಿವಾಲ್ವಾರ್‌ ತೆಗೆದು ಕಾರಿನ ಮೇಲೆ ಎರಡು ಬಾರಿ ಗುಂಡು ಹಾರಿಸಿದನೆಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ವಿಷಯ ತಿಳಿದ ತಕ್ಷಣವೇ ಪೊಲೀಸರು ನಾಲ್ವರನ್ನೂ ಅಲ್ಕೋಮೀಟರ್‌ ಪರೀಕ್ಷೆ ಮಾಡಿಸಿದಾಗ, ಅಭಿಷೇಕ ಕುಡಿದ ಮತ್ತಿನಲ್ಲಿದ್ದ ಎಂದು ತಿಳಿದು ಬಂದಿದೆ. ಎಲ್ಲ ಆಯಾಮಗಳಲ್ಲಿ ತನಿಖೆ ಕೈಗೊಳ್ಳಲಾಗಿದೆ. ಅಭಿಷೇಕ 2015ರಲ್ಲಿಯೇ ಪರವಾನಗಿ ಹೊಂದಿದ ಪಿಸ್ತೂಲ್‌ ಪಡೆದಿದ್ದಾನೆ. ಸಾಮಾನ್ಯವಾಗಿ ಜೀವ ಬೆದರಿಕೆ, ಆಸ್ತಿ ರಕ್ಷಿಸಿಕೊಳ್ಳಲು ಪಿಸ್ತೂಲ್‌ ಹೊಂದಲಾಗುತ್ತದೆ. ಆದರೆ, 23ನೇ ವಯಸ್ಸಿನಲ್ಲಿಯೇ ರಿವಾಲ್ವಾರ್‌ ಏತಕ್ಕೆ ಹೊಂದಿದ್ದಾನೆ ಎಂಬ ತನಿಖೆ ಕೈಗೊಂಡಿದ್ದೇವೆ ಎಂಬ ಮಾಹಿತಿ ನೀಡಿದರು.

ಮೇಲ್ನೋಟಕ್ಕೆ ಅಭಿಷೇಕ ತನ್ನ ಪರವಾನಗಿ ಪಿಸ್ತೂಲನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಕಂಡುಬಂದಿದೆ. ಧಾರವಾಡ ಸುಶಿಕ್ಷಿತರ ನಾಡಾಗಿದ್ದು ಶಾಂತಿಯ ಸ್ಥಳವಾಗಿದೆ. ಇಂತಹ ಘಟನೆಗಳು ಮರುಕಳಿಸಬಾರದು. ಆದ್ದರಿಂದ ಪರವಾನಗಿ ಹೊಂದಿರುವವರು ಯಾವುದೇ ಕಾರಣಕ್ಕೂ ತಮ್ಮ ಪಿಸ್ತೂಲ್‌ಗಳನ್ನು ದುರುಪಯೋಗಪಡಿಸಿಕೊಳ್ಳಬಾರದು. ಒಂದು ವೇಳೆ ದುರುಪಯೋಗಪಡಿಸಿಕೊಂಡರೆ ಅವರ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎನ್‌. ಶಶಿಕುಮಾರ ಎಚ್ಚರಿಕೆ ನೀಡಿದರು.

ಗುಂಡು ಹಾರಿಸಿರುವ ಅಭಿಷೇಕ ಮತ್ತು ಜಗಳವಾದ ಇತರ ಮೂವರು ಮಧ್ಯೆ ದುಡ್ಡಿನ ವ್ಯವಹಾರ ಇತ್ತೇ? ಹಾಗೂ ಆಕಸ್ಮಿಕ ಘಟನೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯೂ ಇದ್ದು, ಸಮಗ್ರ ತನಿಖೆ ನಂತರವೇ ಗೊತ್ತಾಗಬೇಕಿದೆ.