ರಾಜೀವ್‌ ತಾರಾನಾಥ್‌ಗೆ ತಡವಾಗಿ ಪದ್ಮಶ್ರೀ: ಗಣ್ಯರು

| Published : Jul 01 2024, 01:46 AM IST

ಸಾರಾಂಶ

ಶ್ರೇಷ್ಠ ಸರೋದ್‌ ವಾದಕ ಪಂಡಿತ್‌ ರಾಜೀವ್‌ ತಾರಾನಾಥ್‌ ಅವರಿಗೆ ಬಹಳ ತಡವಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ಹಲವು ಗಣ್ಯರು ಒಕ್ಕೊರಲಿನಿಂದ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶ್ರೇಷ್ಠ ಸರೋದ್‌ ವಾದಕ ಪಂಡಿತ್‌ ರಾಜೀವ್‌ ತಾರಾನಾಥ್‌ ಅವರಿಗೆ ಬಹಳ ತಡವಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ಹಲವು ಗಣ್ಯರು ಒಕ್ಕೊರಲಿನಿಂದ ಬೇಸರ ವ್ಯಕ್ತಪಡಿಸಿದ್ದಾರೆ.

ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಸಾಹಿತಿ ಮತ್ತು ಕಲಾವಿದರ ವೇದಿಕೆಯು ದೆಹಲಿಯ ಪ್ರಸಿದ್ಧ ಫೌಂಡೇಷನ್‌ ಸಹಕಾರದೊಂದಿಗೆ ಆಯೋಜಿಸಿದ್ದ ಸರೋದ್‌ ಮಾಂತ್ರಿಕ ‘ರಾಜೀವ್‌ ತಾರಾನಾಥ್‌’ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಹಲವು ಗಣ್ಯರು, ‘ರಾಜೀವ್‌ ತಾರಾನಾಥ್‌ ಅವರ ಪ್ರತಿಭೆಗೆ ತಕ್ಕ ಗೌರವ ಸಿಗಲಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿ ಸಿಂಗ್‌ ಮಾತನಾಡಿ, ರಾಜೀವ್‌ ತಾರಾನಾಥ್‌ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಹಳ ವಿಳಂಬವಾಗಿ ಸಂದಿತು. ರಾಜೀವ್‌ ಅವರಂತಹ ಅಪ್ರತಿಮ ಕಲಾವಿದನಿಗೆ ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿಯೇ ಸಿಗಬೇಕಿತ್ತು. ಇದು ಸಾಧ್ಯವಾಗಲಿಲ್ಲ. ಆದರೆ ರಾಜೀವ್‌ ಎಂದಿಗೂ ಪ್ರಶಸ್ತಿಗಳ ಬಗ್ಗೆ ಯೋಚನೆ ಮಾಡಿದವರಲ್ಲ ಎಂದು ಸ್ಮರಿಸಿದರು.

ನಾನು ಎಷ್ಟೋ ಸಾಹಿತಿಗಳು, ಸಂಗೀತಗಾರರು, ಗಣ್ಯರನ್ನು ನೋಡಿದ್ದೇನೆ. ಆದರೆ ರಾಜೀವ್‌ ವ್ಯಕ್ತಿತ್ವ ಅನನ್ಯ, ಅಪ್ರತಿಮವಾದುದು. ಬಹುಮುಖ ಪ್ರತಿಭಾವಂತರಾಗಿದ್ದ ಅವರು ಸೂಕ್ಷ್ಮ ಮನಸ್ಸಿನ ವ್ಯಕ್ತಿಯಾಗಿದ್ದರು. ದಶಕಗಳ ಕಾಲ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದೆ. ಇಷ್ಟೊಂದು ಪ್ರತಿಭಾವಂತರಾಗಿದ್ದರೂ ಅವರೆಂದೂ ಪ್ರಶಸ್ತಿಗಳ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ನೆನಪಿಸಿಕೊಂಡರು.

ಕಲಾವಿದರಿಗೆ ಸಿಗದ ಗೌರವ:

ಕಲಾವಿದೆ ಪ್ರತಿಭಾ ಪ್ರಹ್ಲಾದ್‌ ಮಾತನಾಡಿ, ನಮ್ಮ ಜನತೆ ಕರ್ನಾಟಕದ ಕಲಾವಿದರಿಗೆ ಪ್ರೋತ್ಸಾಹ ನೀಡುವುದಿಲ್ಲ. ತಮಿಳು, ಮುಂಬೈ, ಉತ್ತರ ಭಾರತದ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾರೆ. ರಾಜೀವ್‌ ಅವರು 2019ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು. ಬಹಳಷ್ಟು ತಡವಾಗಿ ಅವರಿಗೆ ಪ್ರಶಸ್ತಿ ಒಲಿದುಬಂತು. ನಮ್ಮ ಕಲಾವಿದರಿಗೆ ಗೌರವ ಸಿಗುತ್ತಿಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜೀವ್‌ ಮತ್ತು ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರು ನನಗೆ ಉತ್ತಮ ಮಾರ್ಗದರ್ಶನ ಮಾಡಿದ್ದು ಸಾಧನೆಗೆ ಪ್ರೇರೇಪಣೆಯಾಯಿತು. ಬದುಕಿದ್ದಾಗ ಕಲಾವಿದರಿಗೆ ಗೌರವ ನೀಡದೇ ಮರಣಾನಂತರ ನಮ್ಮ ಜೊತೆ ಇಂತಹ ಅದ್ಭುತ ಕಲಾವಿದ್ದರು ಎಂದು ಪ್ರಶಸಂಸಿಸುವುದು ಸರಿಯಲ್ಲ. ರಾಜೀವ್‌ ಅದ್ಭುತ ಕಲಾವಿದರಾಗಿದ್ದರು. ರಾಜ್ಯದ ಕಲಾವಿದರಿಗೆ ರಾಷ್ಟ್ರ ಮಟ್ಟದಲ್ಲಿ ವೇದಿಕೆ ಕಲ್ಪಿಸಿಕೊಡಲು ನಾನು ಮತ್ತು ರಾಜೀವ್‌ ಸೇರಿಕೊಂಡು ಪ್ರಸಿದ್ಧ ಫೌಂಡೇಷನ್‌ ಸ್ಥಾಪಿಸಿದ್ದೆವು ಎಂದು ತಿಳಿಸಿದರು.

ಪ್ರಶಸ್ತಿಗೆ ಲಾಬಿ ಮಾಡಲಿಲ್ಲ

ರಾಜೀವ್‌ ಆಪ್ತರಾದ ಸಿ.ಚಂದ್ರಶೇಖರ್‌ ಮಾತನಾಡಿ, ರಾಜೀವ್ ಪ್ರಶಸ್ತಿಗಳ ಬಗ್ಗೆ ಯಾವತ್ತೂ ಯೋಚನೆ ಮಾಡಿರಲಿಲ್ಲ. ಪ್ರಶಸ್ತಿಗಾಗಿ ಲಾಬಿ ಮಾಡಿದವರಲ್ಲ. ಅವರಿಗೆ ತಡವಾಗಿ ಪದ್ಮಶ್ರೀ ಪ್ರಶಸ್ತಿ ಸಂದಿತು. ಕಲಾವಿದನಾಗಿ ನಾನು ಪ್ರಶಸ್ತಿಗೆ ಅರ್ಜಿ ಸಲ್ಲಿಸಬೇಕೆ ಎಂದು ರಾಜೀವ್‌ ಯಾವಾಗಲೂ ಹೇಳುತ್ತಿದ್ದರು ಎಂದು ನೆನಪಿಸಿಕೊಂಡರು.

ರಾಜೀವ್‌ ಅವರ ಶಿಷ್ಯರಾದ ಸಚಿನ್‌ ಮತ್ತು ಸಂಗಡಿಗರು ಇದೇ ಸಂದರ್ಭದಲ್ಲಿ ಸ್ವರ ಸಮರ್ಪಣೆ ಮೂಲಕ ನಮನ ಸಲ್ಲಿಸಿದರು. ವೇದಿಕೆ ಸಂಚಾಲಕ ಶ್ರೀನಿವಾಸ ಜಿ.ಕಪ್ಪಣ್ಣ ಮತ್ತಿತರರು ಉಪಸ್ಥಿತರಿದ್ದರು.ಸಂಗೀತ, ಅಡುಗೆ ಮಾತ್ರ ಸೃಜನಶೀಲ ಕೆಲಸ

‘ಸಂಗೀತ ಮತ್ತು ಅಡುಗೆ ತಯಾರಿ ಮಾತ್ರ ಅದ್ಭುತ ಸೃಜನಶೀಲ ಕೆಲಸಗಳು’ ಎಂದು ಗಾಯನ ಸಮಾಜದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ರಾಜೀವ್‌ ತಾರಾನಾಥ್‌ ಹೇಳಿಕೆ ನೀಡಿದ್ದರು. ಅವರಿಗಿದ್ದ ಪಾಂಡಿತ್ಯದಿಂದಲೇ ಯಾವುದೇ ವಿಷಯವನ್ನು ನೇರವಾಗಿ ಹೇಳಲು ಸಾಧ್ಯವಾಗಿತ್ತು ಎಂದು ನಿವೃತ್ತ ಐಎಎಸ್‌ ಅಧಿಕಾರಿ ಐ.ಎಂ.ವಿಠ್ಠಲಮೂರ್ತಿ ಅಭಿಪ್ರಾಯಪಟ್ಟರು.

ತಮಗೆ ಅನಿಸಿದ್ದನ್ನು ನಿರ್ಭಿಡೆಯಿಂದ ರಾಜೀವ್‌ ಹೇಳುತ್ತಿದ್ದರು. ಯಾವುದೇ ಮುಲಾಜಿಗೆ ಒಳಗಾಗುತ್ತಿರಲಿಲ್ಲ. ಕಲಾವಿದರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಅದ್ಭುತವಾದ ವ್ಯಕ್ತಿತ್ವದವರು. ಬಹಳಷ್ಟು ಸಮಯದಲ್ಲಿ ನನಗೆ ಉತ್ತಮ ಮಾರ್ಗದರ್ಶನ ನೀಡಿದ್ದರು ಎಂದು ಸ್ಮರಿಸಿದರು.