ಸಾರಾಂಶ
ಕನ್ನಡಪ್ರಭವಾರ್ತೆ ಜಗಳೂರ
ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದವರ ಮೇಲೆ ಪೊಲೀಸರು ಏಕಾಏಕಿ ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ತಾಲೂಕು ಅಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಯು.ಜಿ. ಶಿವಕುಮಾರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೀಸಲು ಹೋರಾಟವನ್ನು ಸರಕಾರ ಪೊಲೀಸ್ ಬಲ ಪ್ರಯೋಗಿಸಿ ಹತ್ತಿಕ್ಕುವ ಕೆಲಸ ಮಾಡಿದೆ. ಸಮುದಾಯದ ಹೋರಾಟಗಾರರನ್ನು ರಕ್ತ ಬರುವಂತೆ ಪೊಲೀಸರು ಥಳಿಸಿದ್ದಾರೆ. ಸಾರ್ವಜನಿಕರ ವೇಷದಲ್ಲಿದ್ದ ಪೊಲೀಸರೇ ವ್ಯವಸ್ಥಿತವಾಗಿ ಪ್ರತಿಭಟನಾಕರರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದರು. ಪ್ರತಿಭಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣವನ್ನು ವಾಪಾಸ್ ಪಡೆಯಬೇಕು. ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಪ್ರಕರಣದ ಬಗ್ಗೆ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ಸರಕಾರ 2ಎ ಮೀಸಲಾತಿ ಹೋರಾಟಗಾರರ ವಿರುದ್ಧ ಸರ್ವಾಧಿಕಾರಿ ಧೋರಣೆ ತಾಳುತ್ತಿದೆ. ಬೆಳಗಾವಿ ಅಧಿವೇಶನದಲ್ಲಿ ಸಮಾಜದ ಮಂತ್ರಿಗಳು, ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರು ಗಟ್ಟಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.ಅಷ್ಟೆ ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮುದಾಯದ ಮುಖಂಡರನ್ನು ಕರೆದು ಸಭೆ ನಡೆಸಿ ಮೀಸಲಾತಿ ಬೇಡಿಕೆ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಜೊತೆಗೆ ಸಿಎಂ ಮತ್ತು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪಪಂ ಹಾಲಿ ಸದಸ್ಯ ರೇವಣಸಿದ್ದಪ್ಪ, ಮುಖಂಡ ಹೊಸಕೆರೆ ಮುರಿಗೆಪ್ಪ, ಗಡಿಮಾಕುಂಟೆ ನಾಗರಾಜ್, ಮಹಾಸ್ವಾಮಿ, ಹೊಸಕೆರೆ ಮುಕುಂದ, ಚಿಕ್ಕಬನ್ನಿಹಟ್ಟಿ ನಾಗರಾಜ್, ಮುಷ್ಟೂರಪ್ಪ, ಕರೇಗೌಡ್ರು ಬಸವರಾಜ್ , ಬಣಕಾರ್ ರುದ್ರಪ್ಪ, ರಾಂಪುರ ರಾಜಪ್ಪ, ಮಲ್ಲಿಕಾರ್ಜುನ್, ವಸಂತಕುಮಾರ್, ಮುರಿಗೇಶ್ ಇದ್ದರು.