ಸಾರಾಂಶ
ರಕ್ಷಿತ್ ಶೆಟ್ಟಿ ಫಿಲಂ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಲಾಫಿಂಗ್ ಬುದ್ಧ ಸಿನಿಮಾ ೩೦ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಪೊಲೀಸರ ಬಗ್ಗೆ ಯಾವುದೇ ಭಯ ಬೇಡ. ಅವರೂ ಸಮಾಜದ ಒಳಿತಾಗಿ ಇರುವವರೇ ಎಂಬುದು ನಮ್ಮ ಚಿತ್ರದಲ್ಲಿದೆ ಎಂದರು. ಪೊಲೀಸರೂ ಮನುಷ್ಯರು, ಅವರಿಗೂ ಸಂಸಾರ ಇದೆ. ಅವರಿಗೂ ಮಹತ್ವ ಇದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೀತಿಯಲ್ಲೇ ಈ ಸಿನಿಮಾವೂ ಇದೆ. ನಮ್ಮ ಚಿತ್ರದಲ್ಲಿ ಇಡಿಯಾಗಿ ಹಾಸ್ಯಕ್ಕೆ ಒತ್ತು ನೀಡಲಾಗಿದೆ ಎಂದು ನಾಯಕ ನಟ ಪ್ರಮೋದ್ ಶೆಟ್ಟಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಸಮಾಜದಲ್ಲಿ ಪೊಲೀಸರ ಕಾರ್ಯಶೈಲಿ, ವೃತ್ತಿ ಜೀವನದಲ್ಲಿ ಅವರು ಎದುರಿಸುವ ಸವಾಲುಗಳನ್ನು ಕೇಂದ್ರೀಕರಿಸಿರುವ ಲಾಫಿಂಗ್ ಬುದ್ಧ ಸಿನಿಮಾ ಇದೇ ತಿಂಗಳು ೩೦ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಾಯಕ ನಟ ಪ್ರಮೋದ್ ಶೆಟ್ಟಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ರಕ್ಷಿತ್ ಶೆಟ್ಟಿ ಫಿಲಂ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಇದೊಂದು ಕುಟುಂಬ ಸಮೇತರಾಗಿ ನೋಡುವ ಸದಭಿರುಚಿಯ ಚಲನ ಚಿತ್ರವಾಗಿದೆ.ಹುದ್ದೆಗೆ ಆಯ್ಕೆಯಾಗುವಾಗ ಪೊಲೀಸರು ಫಿಟ್ ಆಗಿರುತ್ತಾರೆ. ತರುವಾಯ ಏಕೆ ದಪ್ಪಗಾಗುತ್ತಾರೆ. ಇದಕ್ಕೆ ಕಾರಣ ಏನು ಎಂಬುದರ ಮೇಲೆ ಸಿನಿಮಾ ಬೆಳಕು ಚೆಲ್ಲುತ್ತದೆ. ಇದು ಅತಿಯಾದ ತೂಕ ಇರುವ ಮುಖ್ಯ ಪೇದೆಯೊಬ್ಬರು ಹೇಗೆ ಪರಿಸ್ಥಿತಿಗಳನ್ನು ಸಂಭಾಳಿಸುತ್ತಾರೆ ಎಂಬುದನ್ನು ಹೇಳುತ್ತದೆ. ಭರತ್‌ರಾಜ್ ಕತೆ ಬರೆದು ಚಿತ್ರ ನಿರ್ದೇಶನ ಮಾಡಿದ್ದಾರೆ. ಅನೇಕ ಗಂಟೆ ಸ್ಟೇಷನ್‌ನಲ್ಲೇ ಕುಳಿತು ಕತೆ ಬರೆದಿದ್ದಾರೆ. ಹೀಗಾಗಿ ಸಿನಿಮಾ ನೈಜವಾಗಿ ಮೂಡಿ ಬಂದಿದೆ ಎಂದರು.ಹಿಂದೆ ಸಾಂಗ್ಲಿಯಾನ ಮೊದಲಾದ ಸಿನಿಮಾಗಳು ಪೊಲೀಸ್ ಅಧಿಕಾರಿಯ ಸಾಹಸಗಾಥೆ, ಕರ್ತವ್ಯ ಶೈಲಿ, ಅಪರಾಧ ಪತ್ತೆ ಹಚ್ಚುವ ವಿಧಾನಗಳ ಮೇಲೆ ಸಿನಿಮಾ ಬೆಳಕು ಚೆಲ್ಲುತ್ತಿತ್ತು. ಆದರೆ ನಮ್ಮ ಸಿನಿಮಾದಲ್ಲಿ ಯಾವುದೇ ಉದ್ಧಟತನ ಇಲ್ಲ. ಫಿಜಿಕಲಿ ದಪ್ಪ ಇದ್ದರೂ, ನಗುಮೊಗದಿಂದಲೇ ವ್ಯಾಜ್ಯಗಳನ್ನು ಹೇಗೆ ಬಗೆಹರಿಸುತ್ತಾರೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಪೊಲೀಸರ ಬಗ್ಗೆ ಯಾವುದೇ ಭಯ ಬೇಡ. ಅವರೂ ಸಮಾಜದ ಒಳಿತಾಗಿ ಇರುವವರೇ ಎಂಬುದು ನಮ್ಮ ಚಿತ್ರದಲ್ಲಿದೆ ಎಂದರು. ಪೊಲೀಸರೂ ಮನುಷ್ಯರು, ಅವರಿಗೂ ಸಂಸಾರ ಇದೆ. ಅವರಿಗೂ ಮಹತ್ವ ಇದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೀತಿಯಲ್ಲೇ ಈ ಸಿನಿಮಾವೂ ಇದೆ. ನಮ್ಮ ಚಿತ್ರದಲ್ಲಿ ಇಡಿಯಾಗಿ ಹಾಸ್ಯಕ್ಕೆ ಒತ್ತು ನೀಡಲಾಗಿದೆ ಎಂದು ನುಡಿದರು.
ನಟ ದಿಗಂತ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಮ್ಮ ಪಾತ್ರವೇ ಹಾಸ್ಯವಾಗಿದೆ. ಇಡೀ ದೃಶ್ಯ, ಸನ್ನಿವೇಶವೇ ಕಾಮಿಡಿ ಸೃಷ್ಟಿಸುತ್ತದೆ ಎಂದ ಅವರು, ನಮ್ಮ ಚಿತ್ರವನ್ನು ಪೊಲೀಸ್ ಇಲಾಖೆಗೆ ಅರ್ಪಣೆ ಮಾಡಲಾಗಿದೆ ಎಂದು ಲಾಫಿಂಗ್ ಬುದ್ಧ ಸಿನಿಮಾ ಬಗ್ಗೆ ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಕಲಾವಿದರಾದ ಸೃಜನೀತ್ ಶೆಟ್ಟಿ, ದೀಪಕ್ ರಾಜ್, ಶ್ಯಾಂ ಸುಂದರ್, ಸ್ನೇಹಶ್ರೀ ಇತರರು ಉಪಸ್ಥಿತರಿದ್ದರು.