ಸಾರಾಂಶ
ಗ್ರಾಮೀಣ ಸಾಲ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಜನಸಾಮಾನ್ಯರನ್ನು ಚಿಕ್ಕ ಪ್ರಮಾಣದ ಆದಾಯ ತರಬಲ್ಲ ಚಟುವಟಿಕೆಗಳಿಗೆ ಪ್ರೇರೇಪಿಸುವ ಯತ್ನವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವಿನೂತನ ಸಾಲ ಯೋಜನೆಯನ್ನು ವಿಕಾಸ ಸ್ಫೂರ್ತಿ ಹೆಸರಿನಲ್ಲಿ ರೂಪಿಸಿದೆ.
ಧಾರವಾಡ:
ಗ್ರಾಮೀಣ ಸಾಲ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಜನಸಾಮಾನ್ಯರನ್ನು ಚಿಕ್ಕ ಪ್ರಮಾಣದ ಆದಾಯ ತರಬಲ್ಲ ಚಟುವಟಿಕೆಗಳಿಗೆ ಪ್ರೇರೇಪಿಸುವ ಯತ್ನವಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವಿನೂತನ ಸಾಲ ಯೋಜನೆಯನ್ನು ವಿಕಾಸ ಸ್ಫೂರ್ತಿ ಹೆಸರಿನಲ್ಲಿ ರೂಪಿಸಿದೆ.ಬ್ಯಾಂಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಯೋಜನೆ ಬಿಡುಗಡೆ ಮಾಡಿದ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಎಂ. ಭಂಡಿವಾಡ, ಇದೊಂದು ಜಾಮೀನು, ತೃತೀಯ ಭದ್ರತೆ ಬೇಡದ ಸರಳ ಯೋಜನೆ. ಆದಾಯ ತರಬಲ್ಲ ಚಟುವಟಿಕೆಗಳಾದ ಠೋಕ್ ವ್ಯಾಪಾರ, ಸಣ್ಣ ವ್ಯಾಪಾರ, ಗ್ರಾಮೀಣ ಕೈ ಕಸಬು ಅಲ್ಲದೆ ಯಾವುದೇ ಸ್ವ-ಉದ್ಯೋಗ ಮತ್ತು ಕೃಷಿಯೇತರ ಚಟುವಟಿಕೆ ಈ ಸಾಲ ಯೋಜನೆಯ ವ್ಯಾಪ್ತಿಗೆ ಒಳಪಡುತ್ತವೆ. ಈ ಸಾಲ ಯೋಜನೆಯಡಿ ಕನಿಷ್ಠ ₹ 50ರಿಂದ ಗರಿಷ್ಠ ₹ 2 ಲಕ್ಷ ವರೆಗೆ ಸಾಲ ದೊರೆಯಲಿದೆ. ಅತಿ ಸಣ್ಣ ಸಾಲಕ್ಕೆ ಜನರು ಖಾಸಗಿ ಲೇವಾದೇವಿಗಾರರ ಮೊರೆ ಹೋಗುವುದೇ ಜಾಸ್ತಿ. ಅಂತಹವರ ಕಪಿಮುಷ್ಟಿಯಿಂದ ಸಣ್ಣ ಸಾಲಗಾರರನ್ನು ಪಾರು ಮಾಡುವ ಉದ್ದೇಶದಿಂದ ಈ ಕಿರು ಸಾಲ ಯೋಜನೆ ರೂಪಿಸಿದೆ ಎಂದು ಶ್ರೀಕಾಂತ ಭಂಡಿವಾಡ ಹೇಳಿದರು.ಎಷ್ಟೋ ಸಮಯದಲ್ಲಿ ಸಣ್ಣ ಸಾಲಗಾರರು ಸಾಲದ ಮರುಪಾವತಿಯನ್ನೇ ಯೋಚಿಸುತ್ತಾರೆ. ತಿಂಗಳಿಗೆ ₹1000 ಕಂತು ಕೂಡ ಅವರಿಗೆ ದೊಡ್ಡದಾಗಿ ಕಾಣುತ್ತದೆ. ಹೀಗಾಗಿ ಅವರು ಬ್ಯಾಂಕಿನತ್ತ ಮುಖ ಮಾಡುವುದಿಲ್ಲ. ಈ ಯೋಜನೆಯನ್ವಯ ಬ್ಯಾಂಕಿನ ನಿತ್ಯ ಠೇವಣಿ ಸಂಗ್ರಾಹಕ (ಪಿಗ್ಮಿ ಏಜಂಟ್) ನಿತ್ಯವೂ ಸಾಲಗಾರರ ಮನೆ ಬಾಗಿಲಿಗೆ ತೆರಳಿ ಅವರು ಕೊಟ್ಟಷ್ಟು ಹಣ ಸಂಗ್ರಹಿಸಿ ಬ್ಯಾಂಕಿಗೆ ಬಂದು ಅವರ ಖಾತೆಗೆ ಜಮಾ ಮಾಡುತ್ತಾನೆ. ಆ ಖಾತೆಗೆ ಜಮಾಗೊಂಡ ಹಣದಲ್ಲಿ ತಿಂಗಳಾವರ್ತೆಯಲ್ಲಿ ಸಾಲದ ಕಂತು ಪಡೆದುಕೊಳ್ಳಲಾಗುತ್ತದೆ ಎಂದು ವಿವರಿಸಿದರು.
ಸರಳ ಕಾಗದ ಪತ್ರಗಳು ಈ ಯೋಜನೆಯನ್ನು ಇನ್ನಷ್ಟು ಸರಳಗೊಳಿಸಿದೆ. ಈ ಯೋಜನೆಗೆ ಜನಸ್ಪಂದನೆ ವ್ಯಕ್ತವಾಗುವ ಎಲ್ಲ ಭರವಸೆ ಇದ್ದು, ಇದರಡಿಯಲ್ಲೇ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಕನಿಷ್ಠ ₹ 100 ಕೋಟಿ ಸಾಲ ವಿತರಿಸಲಾಗುವುದು ಎಂದೂ ಶ್ರೀಕಾಂತ ಹೇಳಿದರು.ಬ್ಯಾಂಕಿನ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.