ಸಾರಾಂಶ
ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ಕಲಾರಂಭ 2025 ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದ ಮಹಾತ್ಮಗಾಂಧಿ ಪದವಿ ಕಾಲೇಜಿನಲ್ಲಿ ಕಲಾರಂಭ 2025 ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ, ಕಲೆಯನ್ನು ವೃದ್ಧಿಸಿ ಸಾಧನೆಗಳ ಮೂಲಕ ನಿರಂತರವಾದ ಪರಿಶ್ರಮದ ಅಗತ್ಯವಿದೆ. ಜೀವನದಲ್ಲಿ ಉತ್ತುಂಗಕ್ಕೇರಲು ಶ್ರಮಿಸುವುದರ ಜೊತೆಗೆ ಉತ್ತಮ ಪ್ರಜೆಗಳಾಗಿ ತಮ್ಮನ್ನು ಸಮಾಜದ ಸೇವಾ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಮರೆಯಬಾರದು ಎಂದು ಕಿವಿಮಾತು ಹೇಳಿದರು.ಅತಿಥಿಗಳಾಗಿ ಪಾಲ್ಗೊಂಡಿದ್ದ ಮಕ್ಕಳ ತಜ್ಞ ಡಾ.ನವೀನ್ ಕುಮಾರ್ ಬಿ.ಸಿ.ಮಾತನಾಡಿ, ಜಗತ್ತನ್ನು ಬದಲಾಯಿಸುವ ಶಕ್ತಿ ಯುವ ಸಮೂಹಕ್ಕಿದೆ. ಬದಲಾವಣೆ ಬಯಸುವವರು ಮೊದಲು ತಾವು ಪರಿವರ್ತನೆ ಯಾಗಬೇಕು. ಮನುಷ್ಯನಲ್ಲಿರುವ ಭಾವನೆಗಳಿಗೆ ಸಾಣೆ ಹಿಡಿಯುವ ಶಕ್ತಿ ಸಾಂಸ್ಕೃತಿಕ ಚಟುವಟಿಕೆಗಳಿಗಿದೆ. ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು, ಸಂವೇದನಶೀಲರಾಗಿ ಸಮಾಜದ ಬಗ್ಗೆ ತುಡಿತ ಹೊಂದುವಂತೆ ಕರೆ ನೀಡಿದರು.
ಮತ್ತೋರ್ವ ಅತಿಥಿ ಡಿಕೆಡಿ ಸೀಸನ್ 5 ರ ವಿನ್ನರ್ ರಾಹುಲ್ ರಾವ್ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ತಮ್ಮನ್ನು ಪರಿಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ನಿರೀಕ್ಷೆಗಳಿಲ್ಲದೆ ಸ್ಪರ್ಧಿಸಿದಾಗ ದೊರಕುವ ಫಲಿತಾಂಶ ನಮಗೆ ನಿರಾಸೆ ಉಂಟುಮಾಡುವುದಿಲ್ಲ. ಫಲವನ್ನು ನಿರೀಕ್ಷಿಸದೆ ನಿರಂತರವಾಗಿ ಶ್ರಮವಹಿಸಿದಾಗ ಒಂದಲ್ಲ ಒಂದು ದಿನ ತಕ್ಕ ಪ್ರತಿಫಲ ದೊರೆಯುತ್ತದೆ ಎಂದರು.ಕಾಲೇಜು ಆಡಳಿತ ಮಂಡಳಿ ವತಿಯಿಂದ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಎಂಜಿಎಂ ಕಾಲೇಜು ಪ್ರಾಂಶುಪಾಲೆ ಲಿಖಿತಾ, ವಿವೇಕಾನಂದ ಕಾಲೇಜು ಪ್ರಾಂಶುಪಾಲೆ ಕ್ಲಾರಾ ರೇಷ್ಮಾ, ಸಂಸ್ಥೆ ಆಡಳಿತಾಧಿಕಾರಿ ಮಹೇಶ್ ಅಮೀನ್, ಟ್ರಸ್ಟಿ ನಂಜಪ್ಪ ಸೇರಿದಂತೆ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳ ಪೋಷಕರು ಇದ್ದರು.
ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.;Resize=(128,128))
;Resize=(128,128))
;Resize=(128,128))
;Resize=(128,128))