ಕನ್ನಡಪ್ರಭ ವಾರ್ತೆ ಹೊಸಕೋಟೆ

ಕನ್ನಡಪ್ರಭ ದಿನಪತ್ರಿಕೆ ಪ್ರಕಟಿಸಿರುವ ‘ಗ್ರಾಮಾಂತರ ಬೆಂಗಳೂರು ಭಾವಾಂತರ’ ವಿಶೇಷ ಸಂಚಿಕೆಯನ್ನು ಬೆಂಗಳೂರು ಹಾಲು ಒಕ್ಕೂಟ (ಬಮುಲ್) ನಿರ್ದೇಶಕ ಬಿ.ವಿ.ಸತೀಶ್‌ಗೌಡ ಅವರು ತಾಲೂಕಿನ ಬೆಂಡಿಗಾನಹಳ್ಳಿಯಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಕೃಷಿ, ಕೈಗಾರಿಕೆ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ತನ್ನೊಳಗೆ ಅಡಗಿಸಿಕೊಂಡಿರುವ ಸಮೃದ್ಧ ಜಿಲ್ಲೆಯಾಗಿದೆ. ಇಂತಹ ಜಿಲ್ಲೆಯ ವೈಶಿಷ್ಟ್ಯಗಳು, ಸಾಧಕರು, ಜನಜೀವನ, ಪರಂಪರೆ ಹಾಗೂ ಅಭಿವೃದ್ಧಿಯ ಪಥವನ್ನು ಒಂದೇ ಕೃತಿಯಲ್ಲಿ ದಾಖಲಿಸಿರುವ ಕನ್ನಡಪ್ರಭದ ಈ ವಿಶೇಷ ಸಂಚಿಕೆ ಅಭಿನಂದನಾರ್ಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದು ಕೇವಲ ಪುಸ್ತಕವಲ್ಲ, ಜಿಲ್ಲೆಯ ಇತಿಹಾಸ, ಸಂಸ್ಕೃತಿ ಮತ್ತು ಸಾಧನೆಗಳನ್ನು ದಾಖಲಿಸುವ ಅಮೂಲ್ಯ ದಾಖಲೆ. ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗುವ ಈ ಕೃತಿ ಸಂಗ್ರಹಯೋಗ್ಯವಾಗಿದ್ದು, ಪ್ರತಿಯೊಬ್ಬರೂ ತಮ್ಮ ಗ್ರಂಥಾಲಯದಲ್ಲಿ ಇಟ್ಟುಕೊಳ್ಳಬೇಕಾದ ಮೌಲ್ಯಯುತ ಪ್ರಕಟಣೆಯಾಗಿದೆ ಎಂದು ಹೇಳಿದರು.

ಕನ್ನಡಪ್ರಭ ದಿನಪತ್ರಿಕೆ ನಮ್ಮ ತಂದೆ ವೆಂಕಟರಮಣಗೌಡ ಅವರ ಕಾಲದಿಂದಲೇ ನಮ್ಮ ಕುಟುಂಬದ ನೆಚ್ಚಿನ ಪತ್ರಿಕೆಯಾಗಿದೆ. ಹಲವು ದಶಕಗಳಿಂದ ಪತ್ರಿಕೆ ತನ್ನ ವಿಶ್ವಾಸಾರ್ಹತೆ, ನಿಷ್ಪಕ್ಷಪಾತ ಧೋರಣೆ ಹಾಗೂ ಪತ್ರಿಕಾ ಧರ್ಮವನ್ನು ಕಾಪಾಡಿಕೊಂಡು ಓದುಗರ ವಿಶ್ವಾಸ ಗಳಿಸಿದೆ. ಕಾಲಕ್ಕೆ ತಕ್ಕಂತೆ ಹೊಸತನವನ್ನು ಅಳವಡಿಸಿಕೊಂಡು ಡಿಜಿಟಲ್ ಯುಗದಲ್ಲಿಯೂ ಮುದ್ರಣ ಮಾಧ್ಯಮದ ಮಹತ್ವವನ್ನು ಉಳಿಸಿಕೊಂಡಿರುವುದು ಶ್ಲಾಘನೀಯ ಎಂದರು.


ತಂತ್ರಜ್ಞಾನ ಎಷ್ಟೇ ಬೆಳೆಯುತ್ತಿದ್ದರೂ ಪುಸ್ತಕದ ಮೌಲ್ಯ ಎಂದಿಗೂ ಕಡಿಮೆಯಾಗುವುದಿಲ್ಲ. ಜಿಲ್ಲೆಯ ಸಮಗ್ರ ಮಾಹಿತಿಯನ್ನು ದಾಖಲಿಸುವ ಇಂತಹ ವಿಶೇಷ ಸಂಚಿಕೆಗಳು ವಿದ್ಯಾರ್ಥಿಗಳು, ಸಂಶೋಧಕರು, ಸಾರ್ವಜನಿಕರು ಹಾಗೂ ಇತಿಹಾಸ ಆಸಕ್ತರಿಗೆ ಉಪಯುಕ್ತ ಮಾಹಿತಿಯ ಆಕರವಾಗಲಿವೆ. ಸ್ಥಳೀಯ ಸಾಧಕರು, ಜನಪ್ರತಿನಿಧಿಗಳು, ರೈತರು, ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ವಿವಿಧ ಕ್ಷೇತ್ರಗಳ ಸಾಧನೆಗಳನ್ನು ದಾಖಲಿಸುವ ಮೂಲಕ ಕನ್ನಡಪ್ರಭ ಸಮಾಜಮುಖಿ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಪ್ರಶಂಸಿಸಿದರು.

ಗ್ರಾಮಾಂತರ ಭಾಗದ ಜನರ ಸಮಸ್ಯೆಗಳು, ಅಭಿವೃದ್ಧಿ ಕಾರ್ಯಗಳು, ಸಾಧನೆಗಳು ಹಾಗೂ ಸಂಸ್ಕೃತಿಯನ್ನು ನಿರಂತರವಾಗಿ ಸಮಾಜದ ಮುಂದೆ ತರುವಲ್ಲಿ ಕನ್ನಡಪ್ರಭ ಮಹತ್ವದ ಪಾತ್ರ ವಹಿಸುತ್ತಿದ್ದು, ಇಂತಹ ಪ್ರಯತ್ನಗಳು ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯರಾದ ಕಣ್ಣೂರಹಳ್ಳಿ ಮುನಿಯಪ್ಪ, ದೊಡ್ಡನಲ್ಲೂರಹಳ್ಳಿ ಚಲಪತಿ, ಕನ್ನಡಪ್ರಭ ಮಾರುಕಟ್ಟೆ ಕಾರ್ಯನಿರ್ವಾಹಕ ಶಿವಕುಮಾರ್, ಹೊಸಕೋಟೆ ತಾಲೂಕು ವರದಿಗಾರ ಸೂಲಿಬೆಲೆ ಮಂಜುನಾಥ್ ಸೇರಿದಂತೆ ಸ್ಥಳೀಯ ಮುಖಂಡರು, ಕನ್ನಡಪ್ರಭ ಪತ್ರಿಕೆಯ ಓದುಗರು, ಗ್ರಾಮಸ್ಥರು ಉಪಸ್ಥಿತರಿದ್ದರು.