ಕನ್ನಡಪ್ರಭ ವಾರ್ತೆ ಹಾಸನ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಮಂಗಳವಾರದಿಂದ ಪ್ರಾರಂಭವಾಗಿದ್ದು, ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಜುಲೈ ೨೯ರವರೆಗೆ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ. ಎಸ್ ಲತಾ ಕುಮಾರಿ ತಿಳಿಸಿದ್ದಾರೆ.ನಗರದ ಪೆನ್ಷನ್ ಮೊಹಲ್ಲಾದಲ್ಲಿರುವ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಸಾಹಿತಿ ಬಾನು ಮುಷ್ತಾಕ್ ಅವರ ನಿವಾಸಕ್ಕೆ ಜಿಲ್ಲಾಧಿಕಾರಿ ಅವರು ಭೇಟಿ ನೀಡಿ ವಿಶೇಷ ಸಮಗ್ರ ಪರಿಷ್ಕರಣೆಯ ಎನುಮರೇಶನ್ ನಮೂನೆಯನ್ನು ಭರ್ತಿ ಮಾಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಮನೆಯ ಸದಸ್ಯರು ಮತಗಟ್ಟೆ ಅಧಿಕಾರಿಗಳು ನೀಡುವ ದ್ವಿಪ್ರತಿಯ ಎನುಮರೇಶನ್ ನಮೂನೆಯನ್ನು ಭರ್ತಿ ಮಾಡಿ ಕಡ್ಡಾಯವಾಗಿ ಸಹಿ ಮಾಡಿ ಒಂದು ಪ್ರತಿಯನ್ನು ತಮ್ಮ ಬಳಿ ಇರಿಸಿಕೊಂಡು ಮತ್ತೋಂದು ಪ್ರತಿಯನ್ನು ಬಿ.ಎಲ್.ಒಗಳಿಗೆ ನೀಡುವ ಮೂಲಕ ಈ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದರು.ಅರ್ಜಿಯಲ್ಲಿ ಕೇಳಿರುವ ಸರಳ ಮಾಹಿತಿಗಳನ್ನು ಅಧಿಕಾರಿಗಳಿಗೆ ನೀಡಬೇಕು, ಮನೆಯಲ್ಲಿ ಒಬ್ಬರೇ ಸದಸ್ಯರು ಇದ್ದು, ಇನ್ನುಳಿದವರು ಸ್ಥಳದಲ್ಲಿ ಇಲ್ಲದೆ ಇದ್ದರೂ ಸಹ ಮನೆಯಲ್ಲಿರುವ ಸದಸ್ಯರೇ ಇತರ ಸದಸ್ಯರ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಬಹುದು, ಅಲ್ಲದೆ ಅರ್ಜಿದಾರರ ಸಂಬಂಧಿಕರ ಬಗ್ಗೆಯೂ ಮಾಹಿತಿ ನೀಡಿ ಪರಿ?ರಣೆಯಲ್ಲಿ ಪಾಲ್ಗೊಳ್ಳಬಹುದು ಎಂದು ಮಾಹಿತಿ ನೀಡಿದರು.ಹಾಸನದಲ್ಲಿ ಇಂದು ಬೆಳಗ್ಗೆ ೭ ಗಂಟೆಯಿಂದಲೇ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಆರಂಭವಾಗಿದ್ದು, ಈಗಾಗಲೇ ಮತಗಟ್ಟೆ ಅಧಿಕಾರಿಗಳು ಪ್ರತೀ ಮನೆ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು. ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಸಾಹಿತಿ ಭಾನು ಮುಷ್ತಾಕ್ ಅವರ ಮನೆಗೆ ನಾನೇ ಖುದ್ದು ಆಗಮಿಸಿದ್ದು, ಅವರ ಕೈಯಿಂದಲೇ ಎನುಮರೇಷನ್ ನಮೂನೆ ಭರ್ತಿ ಮಾಡಿಸುವ ಮೂಲಕ ವಿಶೇಷ ಸಮಗ್ರ ಪರಿಷ್ಕರಣೆ ಆರಂಭಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಮಹಾನಗರ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ತಹಸೀಲ್ದಾರ್ ಗೀತಾ ಹಾಗೂ ಮತ್ತಿತರರು ಹಾಜರಿದ್ದರು.