ಶೃಂಗೇರಿ ಶ್ರೀಗಳ ಆಶಯದಂತೆ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಹಾಗೂ ಕಾರವಾರ ಜಿಲ್ಲೆಗಳ ಶಿಷ್ಯ ಸಮುದಾಯಗಳನ್ನು ಒಗ್ಗೂಡಿಸಿ ಇಲ್ಲಿನ ಎಂಜಿಎಂ ಮೈದಾನದಲ್ಲಿ ಡಿ. 28ರಿಂದ 30ರವರೆಗೆ ‘ಶ್ರೀ ಶಂಕರ ವಿಜಯೋತ್ಸವ’ ಆಯೋಜಿಸಲಾಗಿದೆ.

ಉಡುಪಿ: ಶೃಂಗೇರಿ ಶ್ರೀಗಳ ಆಶಯದಂತೆ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಹಾಗೂ ಕಾರವಾರ ಜಿಲ್ಲೆಗಳ ಶಿಷ್ಯ ಸಮುದಾಯಗಳನ್ನು ಒಗ್ಗೂಡಿಸಿ ಇಲ್ಲಿನ ಎಂಜಿಎಂ ಮೈದಾನದಲ್ಲಿ ಡಿ. 28ರಿಂದ 30ರವರೆಗೆ ‘ಶ್ರೀ ಶಂಕರ ವಿಜಯೋತ್ಸವ’ ಆಯೋಜಿಸಲಾಗಿದೆ.ಈ ಸಂಬಂಧ ಕುಂಜಿಬೆಟ್ಟಿನ ಶ್ರೀ ಶಾರದಾ ಮಂಟಪದಲ್ಲಿ ಶ್ರೀ ಶಂಕರ ವಿಜಯೋತ್ಸವಕ್ಕೆ ಪೂರ್ವಭಾವಿ ಕಾರ್ಯಕ್ರಮಗಳ ಆರಂಭೋತ್ಸವವನ್ನು ಶೃಂಗೇರಿ ಪೀಠದ ಉಡುಪಿ ಪ್ರಾಂತ್ಯದ ಧರ್ಮಾಧಿಕಾರಿ ಬ್ರಹ್ಮಶ್ರೀ ವಾಗೀಶ್ ಶಾಸ್ತ್ರಿ ಉದ್ಘಾಟಿಸಿದರು.ಆದಿ ಶಂಕರಾಚಾರ್ಯರು ವೈದಿಕ ಸನಾತನ ಧರ್ಮದ ಉಳಿವು ಮತ್ತು ಬೆಳವಣಿಗೆಗೆ ಅಪಾರ ಕೊಡುಗೆ ನೀಡುವುದರ ಜತೆಗೆ, ಧಾರ್ಮಿಕ ಗೊಂದಲಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಸಮಾಜಕ್ಕೆ ದಾರಿದೀಪವಾದವರು. ಅವರ ತತ್ವಾದರ್ಶಗಳನ್ನು ಸ್ಮರಿಸುವ ಹಾಗೂ ಹಿಂದೂ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಿಜಯೋತ್ಸವವನ್ನು ನಡೆಸಲಾಗುತ್ತಿದೆ ಎಂದರು.

ಶಂಕರಾಚಾರ್ಯರು ದೇಶಾದ್ಯಂತ ಧರ್ಮಜಾಗೃತಿ ಮತ್ತು ಧರ್ಮಪ್ರಸಾರದ ಕಾರ್ಯದಲ್ಲಿ ಉಡುಪಿ ಕ್ಷೇತ್ರದ ಹಸ್ತಾಮಲಕ ಎಂಬ ಶಿಷ್ಯನನ್ನು ಪುರಿ ವಿಶ್ವನಾಥ ಕ್ಷೇತ್ರಕ್ಕೆ ಕರೆದೊಯ್ದ ಐತಿಹಾಸಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಉಡುಪಿಯಲ್ಲಿ ಶ್ರೀ ಶಂಕರ ವಿಜಯೋತ್ಸವ ಆಯೋಜಿಸಲು ಶೃಂಗೇರಿ ಶ್ರೀಗಳು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.ಉತ್ಸವದ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಹಿಂದೂ ಸಮಾಜದ ಪ್ರತಿಯೊಬ್ಬರಲ್ಲಿಯೂ ಇದು ನಮ್ಮ ಉತ್ಸವ ಎಂಬ ಆತ್ಮೀಯ ಭಾವನೆ ಮೂಡುವುದಕ್ಕೆ ಈ ಉತ್ಸವ ಪೂರಕವಾಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ವಿಜಯೋತ್ಸವ ಸಮಿತಿ ಅಧ್ಯಕ್ಷ, ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿ, ಶಾರದಾ ಮಾತೆಯ ಕೃಪೆಯಿಂದ ಉಡುಪಿ ಜಿಲ್ಲೆ ಪ್ರತಿವರ್ಷ ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಗಳಿಸುತ್ತಿದೆ. ಉಡುಪಿಯಲ್ಲಿ ನಡೆಯಲಿರುವ ಶ್ರೀ ಶಂಕರ ವಿಜಯೋತ್ಸವವನ್ನು ಯಶಸ್ವಿಗೊಳಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.ವಿಜಯೋತ್ಸವದ ಪೋಸ್ಟರನ್ನು ಶೃಂಗೇರಿ ಶ್ರೀಗಳ ಆಪ್ತ ಸಹಾಯಕ ಬ್ರಹ್ಮಶ್ರೀ ಎಸ್.ಎನ್. ಕೃಷ್ಣಮೂರ್ತಿ ಬಿಡುಗಡೆ ಮಾಡಿದರು. ಕುಂದಾಪುರ ಮತ್ತು ಮಂಗಳೂರು ಪ್ರಾಂತ್ಯದ ಧರ್ಮಾಧಿಕಾರಿಗಳಾದ ಲೋಕೇಶ್ ಅಡಿಗ, ಸತ್ಯಶಂಕರ ಬೊಳ್ಳಾವ, ರಾಜ್ಯ ಶಾಂಕರ ತತ್ತ್ವ ಪ್ರಸಾರ ಸಮಿತಿ ಅಧ್ಯಕ್ಷ ತೇಜಶಂಕರ ಸೋಮಯಾಜಿ, ಪ್ರಮುಖರಾದ ರಮೇಶ್ ಕಾಂಚನ್, ಭಜನ ಸಮಿತಿ ಸಂಚಾಲಕಿ ಡಾ. ವಿದ್ಯಾ ಎಸ್. ರಾವ್ ಉಪಸ್ಥಿತರಿದ್ದರು.ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಠಾಕೂರ್ ಪರ್ಕಳ ಪ್ರಸ್ತಾವನೆಗೈದು ಸ್ವಾಗತಿಸಿದರು. ಸಂಘಟನೆಯ ಸ್ವರೂಪದ ಕುರಿತು ಸಮಿತಿ ಕಾರ್ಯದರ್ಶಿ ಉಮೇಶ್ ನಾಯ್ಕ್ ವಿವರಿಸಿದರು. ಆರ್ಥಿಕ ಸಮಿತಿ ಅಧ್ಯಕ್ಷ ಗಣೇಶ್ ಹೆಬ್ಬಾರ್ ಸಮಿತಿ ಸದಸ್ಯರ ಪಟ್ಟಿಯನ್ನು ವಾಚಿಸಿದರು. ರತ್ನಾಕರ ಇಂದ್ರಾಳಿ ನಿರೂಪಿಸಿ, ವಿಶ್ವನಾಥ ಶಾನುಭಾಗ್ ವಂದಿಸಿದರು.