ತರೀಕೆರೆಸತತ ಪ್ರಯತ್ನದ ಫಲವಾಗಿ ಅಜ್ಜಂಪುರ ತಾಲೂಕಿನ 20 ಕೆರೆಗಳಿಗೆ ನೀರು ತುಂಬಿಸುವ ₹48 ಕೋಟಿ ವೆಚ್ಚದ ಮಹತ್ವದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಶಾಸಕ ಜಿ.ಎಚ್.ಶ್ರೀನಿವಾಸ್‌ । ಅಜ್ಜಂಪುರದ 20 ಕೆರೆಗಳಿಗೆ ನೀರು ಹರಿಸಲು ಏತ ನೀರಾವರಿಗೆ ಶಂಕು

ಕನ್ನಡಪ್ರಭ ವಾರ್ತೆ ತರೀಕೆರೆ

ಸತತ ಪ್ರಯತ್ನದ ಫಲವಾಗಿ ಅಜ್ಜಂಪುರ ತಾಲೂಕಿನ 20 ಕೆರೆಗಳಿಗೆ ನೀರು ತುಂಬಿಸುವ ₹48 ಕೋಟಿ ವೆಚ್ಚದ ಮಹತ್ವದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಮಂಗಳವಾರ ಅಜ್ಜಂಪುರ ತಾಲೂಕಿನ ಗಡಿ ರಂಗಾಪುರ ಸೇರಿದಂತೆ ಒಟ್ಟು 20 ಕೆರೆಗಳಿಗೆ ನೀರು ತುಂಬಿಸುವ ₹48 ಕೋಟಿ ವೆಚ್ಚದ ಏತ ನೀರಾವರಿ ಯೋಜನೆಗೆ ಹುಚ್ಚೇನಹಟ್ಟಿ ಜುಂಜಪ್ಪ ದೇವರ ಜಾತ್ರಾ ಮೈದಾನದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಅಜ್ಜಂಪುರ ತಾಲೂಕು ಕಳೆದ ಹಲವು ವರ್ಷಗಳಿಂದ ಮಳೆ ಕೊರತೆ, ಅಂತರ್ಜಲ ಕುಸಿತದಿಂದ ಜಲ ಸಂಕಷ್ಟ ಎದುರಿಸುತ್ತಿದೆ. ಬಹುತೇಕ ಕೆರೆಗಳಲ್ಲಿ ಸಮರ್ಪಕ ನೀರು ಸಂಗ್ರಹವಾಗದೆ ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಜಲ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಈ ಮಹತ್ವದ ಯೋಜನೆ ಅನುಷ್ಠಾನ ಗೊಳಿಸ ಲಾಗುತ್ತಿದೆ. ಯೋಜನೆಯಡಿ ಬುಕ್ಕಾಂಬುಧಿ–ಬೇಗೂರು ದೊಡ್ಡಹಳ್ಳದ ಮೂಲಕ ವೇದಾ ನಾಲೆ ಮುಖಾಂತರ ವಾಣಿವಿಲಾಸ ಸಾಗರಕ್ಕೆ ಹರಿವ ನೀರಿನಲ್ಲಿ 75 ಎಂ.ಸಿ.ಎಫ್‌.ಟಿ ನೀರು ಬಳಸಿ ಒಟ್ಟು 20 ಕೆರೆಗಳನ್ನು ತುಂಬಿ ಸಲು ಉದ್ದೇಶಿಸಲಾಗಿದೆ ಎಂದರು.

ಅಜ್ಜಂಪುರ–ಶಿವನಿ ಹೋಬಳಿ 20 ಕೆರೆಗಳಿಗೆ ನೀರು:

ಅಜ್ಜಂಪುರ ಹೋಬಳಿ ಗಡಿಹಳ್ಳಿ ಕೆರೆ-1, ಗಡಿಹಳ್ಳಿ ಕೆರೆ-2, ಕಲ್ಲಾಪುರ ಕೆರೆ-1, ಕಲ್ಲಾಪುರ ಕೆರೆ-2, ಗರಗದಹಳ್ಳಿ ಕೆರೆ, ಭೂತನಹಳ್ಳಿ ಕೆರೆ, ಅರಬಲ ಕೆರೆ ಹಾಗೂ ಅರಸಿನಘಟ್ಟ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಅದೇ ರೀತಿ ಶಿವನಿ ಹೋಬಳಿ ನಂದಿಪುರ, ಬಸವಪುರ ಕೆರೆ, ಶಂಭೈನೂರು ಕೆರೆ, ತಗ್ಗಿನಹಳ್ಳಿ ಕೆರೆ, ಗಡಿ ಗಿರಿಯಾಪುರ ಕೆರೆ, ಗಡಿ ರಂಗಾಪುರ ಕೆರೆ, ಗೀಜಿಕಟ್ಟೆ ಕೆರೆ, ಶಿವನಿ ಕಾವಲು ಕೆರೆ, ದಂದೂರು ಕೆರೆ, ಹುಚ್ಚನಹಟ್ಟಿ ಕೆರೆ, ದಾಸರಹಟ್ಟಿ ಕೆರೆ ಹಾಗೂ ಭಕ್ತನಕಟ್ಟೆ ಕೆರೆಗಳಿಗೂ ನೀರು ಒದಗಿಸಲಾಗುತ್ತದೆ.

ಬೆನಕುಣಸೆ ಬಳಿ ಜಾಕ್‌ವೆಲ್‌ ಕಮ್‌ ಪಂಪ್‌ಹೌಸ್: ಮುಗಳಿ ಸಮೀಪದ ಬೆನಕುಣಸೆ ಬಳಿ ಜಾಕ್‌ವೆಲ್‌ ಕಮ್‌ ಪಂಪ್‌ಹೌಸ್ ಕಾಮಗಾರಿ ಪ್ರಗತಿಯಲ್ಲಿದೆ. ಬರಪೀಡಿತ ಅಜ್ಜಂಪುರಕ್ಕೆ ರಾಜ್ಯ ಸರ್ಕಾರದ ವಿಪತ್ತು ನಿಧಿಯಿಂದ ₹12.50 ಕೋಟಿಗೂ ಹೆಚ್ಚಿನ ಇನ್‌ಪುಟ್ ಸಬ್ಸಿಡಿ ಪರಿಹಾರ ನಮ್ಮ ರೈತರಿಗೆ ದೊರೆಯಲಿದೆ. ರೈತರ ನೆರವಿಗೆ ಸರ್ಕಾರ ಸದಾ ನಿಲ್ಲಲಿದೆ ಎಂದು ಹೇಳಿದರು. ಅಜ್ಜಂಪುರದ 20 ಕೆರೆಗಳ ಏತ ನೀರಾವರಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಮಹತ್ವದ ಕೊಡುಗೆ ನೀಡಲಿವೆ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಯಡಿ ಕೆಲವು ವೈಫಲ್ಯಗಳಿಂದ ಶಿವನಿ ಭಾಗದ ಹಲವಾರು ಕೆರೆಗಳು ತುಂಬುತ್ತಿಲ್ಲ. ಈ ಸಮಸ್ಯೆ ಗಮನದಲ್ಲಿದ್ದು, ಈಗಾಗಲೇ ಪರಿಷ್ಕೃತ ಯೋಜನಾ ವರದಿ ಸಿದ್ಧಪಡಿಸಿ ಸರ್ಕಾರದ ಅನುಮೋದನೆ ಪಡೆಯ ಲಾಗಿದೆ. ಶಿವನಿ ಭಾಗದ ಕೆರೆಗಳಿಗೆ ನೀರು ತಲುಪುವಲ್ಲಿ ಇರುವ ಸಮಸ್ಯೆ ಶೀಘ್ರ ಬಗೆಹರಿಸಲಾಗುವುದು ಎಂದರು.

120ಕ್ಕೂ ಹೆಚ್ಚು ಕೆರೆಗಳಿಗೆ ನೀರು: ಭದ್ರಾ ಮೇಲ್ದಂಡೆ ಯೋಜನೆಯಡಿ 120ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಸುಮಾರು 55 ಸಾವಿರ ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಕಲ್ಪಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಅಭಿವೃದ್ಧಿಯೇ ಮಂತ್ರ: ನಾನು ಯಾವುದೇ ಟೀಕೆ-ಟಿಪ್ಪಣಿಗಳಿಗೆ ತಲೆಕೆಡಿಸಿ ಕೊಳ್ಳುವುದಿಲ್ಲ. ನನ್ನ ಆದ್ಯತೆ ಅಭಿವೃದ್ಧಿಪರ, ರೈತರು, ಯುವಕರು, ಶ್ರಮಿಕರು ಮತ್ತು ಮಹಿಳೆಯರ ಪರವಾಗಿ ಕೆಲಸ ಮಾಡುವು ದಾಗಿದೆ. ಕ್ಷೇತ್ರದ ಜಲ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದು ಹಾಗೂ ರೈತರ ಬದುಕು ಬಲಪಡಿಸುವುದೇ ನನ್ನ ಮುಖ್ಯ ಗುರಿ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.

ಕೆಪಿಸಿಸಿ ಸದಸ್ಯ ಅಜ್ಜಂಪುರ ನಟರಾಜ್, ಕೆಡಿಪಿ ಸದಸ್ಯೆ ರಚನ ಚೇತನ್, ಬುಕ್ಕಾಂಬುಧಿ ಗುರುಮೂರ್ತಿ, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಯಾನಂದ್, ಶಿವನಿ ಹೋಬಳಿ ಅಧ್ಯಕ್ಷ ಕಲ್ಲೇಶ್, ಕಾಂಗ್ರೆಸ್ ಮುಖಂಡ ನಿರಂಜನಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ, ಅಡ್ವೋಕೇಟ್ ಲಿಂಗರಾಜು, ಹುಣಸಘಟ್ಟ ಮಲ್ಲಿಕಾರ್ಜುನ, ಮೆಹಬೂಬ್ ಸೇರಿದಂತೆ ಶಿವನಿ ಹೋಬಳಿ ವ್ಯಾಪ್ತಿಯ ಗ್ರಾಪಂಗಳ ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.1ಕೆಟಿಆರ್.ಕೆ.40ಃ ಶಾಸಕ ಜಿ.ಎಚ್.ಶ್ರೀನಿವಾಸ್ ಅಜ್ಜಂಪುರ ತಾಲೂಕಿನ ಗಡಿ ರಂಗಾಪುರ ಸೇರಿದಂತೆ ಒಟ್ಟು 20 ಕೆರೆಗಳಿಗೆ ನೀರು ತುಂಬಿಸುವ ₹48 ಕೋಟಿ ವೆಚ್ಚದ ಮಹತ್ವದ ಏತ ನೀರಾವರಿ ಯೋಜನೆಗೆ ಹುಚ್ಚೇನಹಟ್ಟಿಯ ಜುಂಜಪ್ಪ ದೇವರ ಜಾತ್ರಾ ಮೈದಾನದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.