ಬಾರ್ ಮಾಲೀಕ ರಾಜಗೋಪಾಲ್ ಮೇಲೆ ಏರ್‌ಗನ್ ದಾಳಿ ಸಂಬಂಧ ಖಾಸಗಿ ಕಾಲೇಜಿನ ಕಾನೂನು ವಿದ್ಯಾರ್ಥಿಯೊಬ್ಬನನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಾರ್ ಮಾಲೀಕ ರಾಜಗೋಪಾಲ್ ಮೇಲೆ ಏರ್‌ಗನ್ ದಾಳಿ ಸಂಬಂಧ ಖಾಸಗಿ ಕಾಲೇಜಿನ ಕಾನೂನು ವಿದ್ಯಾರ್ಥಿಯೊಬ್ಬನನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಸವನಗುಡಿ ನಿವಾಸಿ ಮೊಹಮ್ಮದ್ ಅಫ್ಜಲ್ (21) ಬಂಧಿತನಾಗಿದ್ದು, ಆತನಿಂದ ಮೂರು ಏರ್ ಗನ್ ಹಾಗೂ ಆಟಿಕೆ ಗುಂಡುಗಳನ್ನು ಜಪ್ತಿ ಮಾಡಲಾಗಿದೆ.
ಮೂರು ದಿನಗಳ ಹಿಂದೆ ಕೃಷ್ಣರಾವ್ ಪಾರ್ಕ್‌ನಲ್ಲಿ ವಾಯು ವಿಹಾರ ನಡೆಸುತ್ತಿದ್ದ ಬಾರ್ ಮಾಲೀಕ ರಾಜಗೋಪಾಲ ಅವರಿಗೆ ಏರ್‌ಗನ್ ನಿಂದ ಹಾರಿದ ಆಟಿಕೆ ಗುಂಡು ಹೊಕ್ಕು ಗಾಯವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ತನ್ನ ಪೋಷಕರ ಜತೆ ನೆಲೆಸಿದ್ದ ಅಫ್ಜಲ್, ಶೋಕಿಗೆ ಏರ್ ಗನ್ ಬಳಸುತ್ತಿದ್ದ. ಅಂತೆಯೇ ಡಿ.10 ರಂದು ರಾತ್ರಿ ತನ್ನ ಮನೆ ಮುಂದಿನ ಕೃಷ್ಣರಾವ್ ಪಾರ್ಕ್‌ನಲ್ಲಿ ಏರ್‌ಗನ್‌ನಲ್ಲಿ ಆತ ಶೂಟಿಂಗ್ ತರಬೇತಿ ನಡೆಸುತ್ತಿದ್ದ. ಆ ವೇಳೆ ಆಕಸ್ಮಿಕವಾಗಿ ಹಾರಿದ ಗುಂಡು ಅಲ್ಲೇ ವಾಯು ವಿಹಾರ ನಡೆಸುತ್ತಿದ್ದ ರಾಜಗೋಪಾಲ್ ಅವರಿಗೆ ಹೊಕ್ಕಿತ್ತು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..
