ನಕಲಿ ಮಾರಾಟ ನಿಯಂತ್ರಿಸಲು ಕಾಯ್ದೆ ಜಾರಿ

| Published : May 07 2025, 12:45 AM IST

ನಕಲಿ ಮಾರಾಟ ನಿಯಂತ್ರಿಸಲು ಕಾಯ್ದೆ ಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೀಡೆನಾಶಕಗಳ ಬಳಕೆ ಮತ್ತು ಬೇಡಿಕೆ ಹೆಚ್ಚಾದಂತೆ ನಕಲಿ ಕೃಷಿ ಪರಿಕರಗಳ ತಯಾರಿಕೆ ಮತ್ತು ಮಾರಾಟದಂತಹ ಸಮಸ್ಯೆಗಳು ಹೆಚ್ಚಾಗತೊಡಗಿದ್ದು ಈ ಸಮಸ್ಯೆಗಳನ್ನು ನಿಯಂತ್ರಣ ಮಾಡುವ ದೃಷ್ಟಿಯಿಂದ ಸರ್ಕಾರ ಕೃಷಿ ಪರಿಕರಗಳ ಕಾಯ್ದೆಗಳನ್ನು ಜಾರಿಗೆ ತಂದಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೀಡೆನಾಶಕಗಳ ಬಳಕೆ ಮತ್ತು ಬೇಡಿಕೆ ಹೆಚ್ಚಾದಂತೆ ನಕಲಿ ಕೃಷಿ ಪರಿಕರಗಳ ತಯಾರಿಕೆ ಮತ್ತು ಮಾರಾಟದಂತಹ ಸಮಸ್ಯೆಗಳು ಹೆಚ್ಚಾಗತೊಡಗಿದ್ದು ಈ ಸಮಸ್ಯೆಗಳನ್ನು ನಿಯಂತ್ರಣ ಮಾಡುವ ದೃಷ್ಟಿಯಿಂದ ಸರ್ಕಾರ ಕೃಷಿ ಪರಿಕರಗಳ ಕಾಯ್ದೆಗಳನ್ನು ಜಾರಿಗೆ ತಂದಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ನಗರದ ರೋಟರಿ ಭವನದಲ್ಲಿ ಕೃಷಿ ಇಲಾಖೆ ಮತ್ತು ಕೃಷಿ ಪರಿಕರಗಳ ಮಾರಾಟಗಾರರ ಸಂಘ ತಿಪಟೂರು ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕೃಷಿ ಪರಿಕರಗಳ ಕಾಯ್ದೆಗಳ ಕುರಿತು ತಾಲೂಕಿನ ಎಲ್ಲಾ ಕೃಷಿ ಪರಿಕರ ಮಾರಾಟಗಾರರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಪರಿಕರ ಮಾರಾಟಗಾರರು ಅನಧಿಕೃತ ಉತ್ಪಾದಕರಿಂದ ಕೃಷಿ ಪರಿಕರಗಳನ್ನು ಖರೀದಿಸಿ ರೈತರಿಗೆ ಮಾರಾಟ ಮಾಡಬಾರದು. ಕೃಷಿ ಪರಿಕರಗಳ ಕಾಯ್ದೆಯ ಅಂಶಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ರೈತರಿಗೆ ಅಗತ್ಯವಿರುವ ಕೃಷಿ ಪರಿಕರಗಳನ್ನು ಮಾರಾಟ ಮಾಡುವಂತೆ ಸಲಹೆ ನೀಡಿದರು. ಜಂಟಿ ಕೃಷಿ ನಿರ್ದೇಶಕ ಡಾ. ಎನ್. ರಮೇಶ್ ಮಾತನಾಡಿ ಕೃಷಿಯಲ್ಲಿ ನಿರೀಕ್ಷಿತ ಹಾಗೂ ಗುಣಮಟ್ಟದ ಉತ್ಪಾದನೆ ಪಡೆಯಲು ಕೃಷಿ ಪರಿಕರಗಳಾದ ಪ್ರಮಾಣಿತ ಬಿತ್ತನೆ ಬೀಜ, ಗುಣಮಟ್ಟದ ರಸಗೊಬ್ಬರ ಹಾಗೂ ಪೀಡೆನಾಶಕಗಳ ಬಳಕೆ ಪ್ರಮುಖ ಪಾತ್ರ ವಹಿಸುತ್ತವೆ. ಕೃಷಿ ಪರಿಕರಗಳ ಕಾಯ್ದೆಗಳ ಪರಿಪಾಲನೆ ಮಾಡುವ ಹೊಣೆ ಮಾರಾಟಗಾರರ ಮೇಲಿರುತ್ತದೆ. ಈ ಹಿನ್ನೆಲೆಯಲ್ಲಿ ಕಾಯ್ದೆಗಳಲ್ಲಿನ ವಿವಿಧ ವಿಷಯಗಳನ್ನು ಮಾರಾಟಗಾರರು ತಿಳಿದು ತಮ್ಮ ಕೃಷಿ ಪರಿಕರ ಮಾರಾಟದಲ್ಲಿ ಅಳವಡಿಸಿಕೊಳ್ಳಲು ತಿಳಿಸಿದರು. ಬೆಂಗಳೂರು ಕೇಂದ್ರ ಕಛೇರಿಯ ನಿವೃತ್ತ ಕೃಷಿ ಅಧಿಕಾರಿ ಕಿರಣ್‌ಕುಮಾರ್ ಕೃಷಿ ಪರಿಕರ ಕಾಯ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಯೊಂದಿಗೆ ಬಳಕೆ ಬಗ್ಗೆ ತರಬೇತಿ ನೀಡಿದರು. ಉಪ ಕೃಷಿ ನಿರ್ದೇಶಕ ಎಚ್. ಹುಲಿರಾಜ್ ಮಾತನಾಡಿ ಕೃಷಿ ಪರಿಕರಗಳ ಕಾಯ್ದೆಗಳಲ್ಲಿ ಕಾಲಕ್ರಮೇಣ ಹಲವು ತಿದ್ದುಪಡಿಗಳು ಆಗಿದ್ದು, ಅವುಗಳನ್ನು ಮಾರಾಟಗಾರರಿಗೆ ಮನದಟ್ಟು ಮಾಡುವ ಉದ್ದೇಶದಿಂದ ಸದರಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ಸಹಾಯಕ ಕೃಷಿ ನಿರ್ದೇಶಕ ಡಾ. ಎಂ.ಪಿ. ಪವನ್ ಮಾತನಾಡಿ, ಎಲ್ಲಾ ಕೃಷಿ ಪರಿಕರ ಮಾರಾಟಗಾರರು ಕಡ್ಡಾಯವಾಗಿ ಕೃಷಿ ಪರಿಕರಗಳ ಮಾರಾಟ ಪರವಾನಗಿಯನ್ನು ಪಡೆದಿರಬೇಕು. ಮಾರಾಟ ಪರವಾನಗಿ ಅವಧಿ ಮುಗಿಯುವ ಮುನ್ನವೇ ತಪ್ಪದೇ ನವೀಕರಿಸಿಕೊಳ್ಳಬೇಕು. ಕೃಷಿ ಪರಿಕರಗಳ ದರಪಟ್ಟಿಯನ್ನು ಪ್ರದರ್ಶಿಸಿರಬೇಕು. ಗರಿಷ್ಟ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೃಷಿ ಪರಿಕರ ಮಾರಾಟಗಾರಿಗೆ ರಸಗೊಬ್ಬರಗಳನ್ನು ಮಾರಾಟ ಮಾಡಲು ಹೊಸ ಪಿ.ಒ.ಎಸ್. ಉಪಕರಣಗಳನ್ನು ವಿತರಿಸಲಾಯಿತು. ಸಮಗ್ರ ಸಸ್ಯ ಪೋಷಕಾಂಶ ನಿರ್ವಹಣೆ ತರಬೇತಿ ಪೂರ್ಣಗೊಳಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಯೋಗೀಶ್, ಕೃಷಿ ಅಧಿಕಾರಿಗಳಾದ ಎಂ.ಜಿ. ಸವಿತ, ಬಿ.ಎಸ್. ದಿವ್ಯ, ಮಹೇಶ್, ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಸುರೇಶ್ ಬಾಬು, ಸದಸ್ಯರಾದ ಅರುಣ್‌ಕುಮಾರ್, ಗಿರಿರಾಜ್ ಸೇರಿದಂತೆ ಎಲ್ಲಾ ಕೃಷಿ ಪರಿಕರ ಮಾರಾಟಗಾರರು ಭಾಗವಹಿಸಿದ್ದರು.