ವಿಜಯ ದುಂದುಭಿ ಮೊಳಗಿಸಿದ ರಾಮಕುಮಾರ

| Published : Oct 23 2023, 12:15 AM IST

ಸಾರಾಂಶ

ದಿಗ್ವಿಜಯ ಪ್ರತಾಪಸಿಂಗ್‌ ಮಣಿಸಿದ ರಾಮಕುಮಾರ ರಾಮನಾಥನ್‌ಗೆ ಸಿಂಗಲ್ಸ್‌ ಪ್ರಶಸ್ತಿ ಪಡೆದರು. ಈ ಮೂಲಕ ಐಟಿಎಫ್‌ ಧಾರವಾಡ ಪುರುಷರ ವಿಶ್ವ ಟೆನಿಸ್‌ ಟೂರ್‌ ಪಂದ್ಯಾವಳಿ ಮುಕ್ತಾಯವಾಯಿತು.

ಕನ್ನಡಪ್ರಭ ವಾರ್ತೆ ಧಾರವಾಡ

ದಸರಾ ಹಬ್ಬದ ಸಮಯದಲ್ಲಿ ಇಲ್ಲಿಯ ಧಾರವಾಡ ಜಿಲ್ಲಾ ಲಾನ್‌ ಟೆನಿಸ್‌ ಸಂಸ್ಥೆಯ ರಾಜಾಧ್ಯಕ್ಷ ಪೆವಿಲಿಯನ್‌ ಕೋರ್ಟ್‌ನಲ್ಲಿ ಭಾನುವಾರ ನಡೆದ ತುರುಸಿನ ಅಂತಿಮ ಸಿಂಗಲ್ಸ್‌ ಪಂದ್ಯದಲ್ಲಿ 4ನೇ ಶ್ರೇಯಾಂಕಿತ ಭಾರತದ ರಾಮಕುಮಾರ ರಾಮನಾಥನ್‌ 3ನೇ ಶ್ರೇಯಾಂಕಿತ ದಿಗ್ವಿಜಯ ಪ್ರತಾಪಸಿಂಗ್‌ ಅವರನ್ನು ಮಣಿಸುವ ಮೂಲಕ ವಿಜಯದ ದುಂದುಭಿ ಮೊಳಗಿಸಿದರು.

ನಿರೀಕ್ಷೆಗೆ ತಕ್ಕಂತೆ ರಾಮಕುಮಾರ ಇಲ್ಲಿ ಮುಕ್ತಾಯಗೊಂಡ ಐಟಿಎಫ್‌ ಧಾರವಾಡ ಪುರುಷರ ವಿಶ್ವ ಟೆನಿಸ್‌ ಟೂರ್‌ ಪಂದ್ಯಾವಳಿಯಲ್ಲಿ 7-6 (5), 7-6(6) ಸೆಟ್‌ಗಳಿಂದ ಗೆಲವು ಸಾಧಿಸಿ ಸಿಂಗಲ್ಸ್‌ ಪ್ರಶಸ್ತಿ ಗೆದ್ದುಕೊಂಡರು. ರಾಮಕುಮಾರ 3600 ಅಮೆರಿಕನ್‌ ಡಾಲರ್‌ಗಳ ಚೆಕ್‌ ಜತೆಗೆ 20 ಎಟಿಪಿ (ಅಸೋಸಿಯೇಶನ್‌ ಆಫ್‌ ಟೆನಿಸ್‌ ಪ್ರೊಫೇಶನಲ್ಸ್‌) ಪಾಯಿಂಟ್‌ಗಳನ್ನು ಪಡೆದರೆ, ದಿಗ್ವಜಯ 2120 ಅಮೆರಿಕನ್‌ ಡಾಲರ್‌ ಹಾಗೂ 12 ಎಟಿಪಿ ಪಾಯಿಂಟ್‌ಗಳನ್ನು ಸಂಪಾದಿಸಿದರು.

ರೋಚಕದ ಆಟ:

ಸ್ಕೋರ್‌ ಸೂಚಿಸುವಂತೆ ಅಂತಿಮ ಪಂದ್ಯ ರೋಚಕವಾಗಿತ್ತು. ಭಾರತದ ಡೇವಿಸ್ ಕಪ್‌ ತಂಡದಲ್ಲಿ ಜೊತೆಗಾರರಾಗಿರುವ ರಾಮನಾಥನ್‌ ಮತ್ತು ದಿಗ್ವಿಜಯ ಐಟಿಎಫ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಥಮ ಬಾರಿ ಮುಖಾಮುಖಿಯಾಗಿದ್ದು, ತಮ್ಮ ಶ್ರೇಯಾಂಕಕ್ಕೆ ತಕ್ಕಂತೆ ಶ್ರೇಷ್ಠ ಆಟಗಾರಿಕೆ ಪ್ರದರ್ಶಿಸಿದರು. ಇಡೀ ಪಂದ್ಯದಲ್ಲಿ ಇಬ್ಬರೂ ಆಟಗಾರರು ಎದುರಾಳಿಯ ಸರ್ವೀಸ್‌ ಮುರಿಯಲಾಗದೇ ತಮ್ಮ ತಮ್ಮ ಸರ್ವೀಸ್‌ಗಳಲ್ಲಿ ಗೇಮ್‌ ಗೆಲ್ಲುತ್ತಾ ಎರಡೂ ಸೆಟ್‌ಗಳನ್ನು ಟೈ ಬ್ರೇಕರ್‌ ಹಂತಕ್ಕೆ ಒಯ್ದರು. ಮೊದಲ ಸೆಟ್‌ನ ಟೈ ಬ್ರೇಕರ್‌ನಲ್ಲಿ 5-0 ಮುನ್ನಡೆ ಗಳಿಸಿದ ರಾಮನಾಥನ್‌, ಮುಂದೆ 2 ಪಾಯಿಂಟ್‌ ತೆಗೆದುಕೊಳ್ಳುವ ಮೊದಲು ದಿಗ್ವಿಜಯ 5 ಪಾಯಿಂಟ್‌ಗಳನ್ನು ಗೆದ್ದು ಆತಂಕ ಮೂಡಿಸಿದ್ದರು.

ಎರಡನೇ ಸೆಟ್‌ನಲ್ಲಿ ಕೂಡಾ ಮೊದಲನೆಯ ಸೆಟ್‌ನ ಆಟದ ಪುನರಾವರ್ತನೆಯನ್ನು ಪ್ರೇಕ್ಷಕರು ವೀಕ್ಷಿಸುವಂತಾಯಿತು. ಟೈ ಬ್ರೇಕರ್‌ನಲ್ಲಿ ತುರುಸಿನ ಹೋರಾಟ ನಡೆದ 6-6ರಲ್ಲಿ ಸಮಸ್ಥಿತಿ ಇದ್ದಾಗ ದಿಗ್ವಿಜಯ ಮಾಡಿದ ತಪ್ಪು ರಾಮನಾಥನ್‌ಗೆ ಮ್ಯಾಚ್‌ ಪಾಯಿಂಟ್‌ ಒದಗಿಸಿತು. ತಮ್ಮ ಸರ್ವೀಸ್‌ನಲ್ಲಿ ಭರ್ಜರಿ ಏಸ್‌ ಸಿಡಿಸುವ ಮೂಲಕ ಕೊನೆಯ ಪಾಯಿಂಟ್‌ ಗೆದ್ದ ರಾಮನಾಥನ್‌ ಗೆಲುವಿನ ನಗು ಬೀರಿದರು.

ಬಹುಮಾನ ವಿತರಣೆ:

ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ನಿವೃತ್ತ ಹಿರಿಯ ಐಎಎಸ್‌ ಅಧಿಕಾರಿ ಕಪಿಲ ಮೋಹನ ವಿಜೇತರಿಗೆ ಟ್ರೋಫಿ ಮತ್ತು ಚೆಕ್‌ ವಿತರಿಸಿದರು. ಇನ್ನೊಬ್ಬ ಹಿರಿಯ ಐಎಎಸ್‌ ಅಧಿಕಾರಿ ಮಹೇಶ್ವರರಾವ್‌, ಡಿಡಿಎಲ್‌ಟಿ ಅಧ್ಯಕ್ಷ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕೃಷಿ ವಿವಿ ಕುಲಪತಿ ಪ್ರೊ. ಪಿ.ಎಲ್‌. ಪಾಟೀಲ, ಹು-ಧಾ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಡಿಡಿಎಲ್‌ಟಿಎ ಉಪಾಧ್ಯಕ್ಷ ನಾಗರಾಜ ಅಂಬಲಿ, ಕಾರ್ಯದರ್ಶಿ ಸಂದೀಪ ಬಣವಿ, ಖಜಾಂಚಿ ಕೆ.ಬಿ. ಪೂಜಾರ ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ಇಲಿಯಾಸ್‌ ನಾಯಿಕವಾಡಿ ಮತ್ತು ಆತ್ಮಾನಂದ ಪಾಟೀಲ ಇದ್ದರು.

ಕಳೆದ ಕೆಲವು ವಾರಗಳಿಂದ ಸಹಜ ಆಟಕ್ಕೆ ಕುದುರಿಕೊಳ್ಳುವಲ್ಲಿ ತೊಂದರೆ ಅನುಭವಿಸಿದ್ದೇನು. ಈಗ ಎಲ್ಲ ಸಹಜತೆಗೆ ಬಂದಿದ್ದು, ಈ ಜಯ ನಮ್ಮ ಮುಂದಿನ ಪಂದ್ಯಗಳಲ್ಲಿ ಹೆಚ್ಚು ಆತ್ಮವಿಶ್ವಾಸದಿಂದ ಆಡಲು ಸಹಾಯಕವಾಗಲಿದೆ ಎಂದು ಪಂದ್ಯ ವಿಜೇತ ರಾಮಕುಮಾರ ರಾಮನಾಥನ್‌ ಹೇಳಿದರು.