ಹೆಣ್ಣು ಭ್ರೂಣ ಪತ್ತೆ-ಹತ್ಯೆ ತಡೆಗೆ ಡೀಸಿಗೆ ವಕೀಲರ ಮನವಿ

| Published : Sep 07 2025, 01:00 AM IST

ಹೆಣ್ಣು ಭ್ರೂಣ ಪತ್ತೆ-ಹತ್ಯೆ ತಡೆಗೆ ಡೀಸಿಗೆ ವಕೀಲರ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಕೀಲರು ಶನಿವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರಾಮನಗರ: ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಕೀಲರು ಶನಿವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಅದಿವಕ್ತ ಪರಿಷತ್ ಕರ್ನಾಟಕ ಹಾಗೂ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ವಕೀಲರು, ಪ್ರಸವ ಪೂರ್ವ ಲಿಂಗಪತ್ತೆ ಪರೀಕ್ಷೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಹೆಣ್ಣು ಭ್ರೂಣಹತ್ಯೆ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಅದಿವಕ್ತ ಪರಿಷತ್ ಕರ್ನಾಟಕ ಸಂಘಟನೆ ಕಾರ್ಯದರ್ಶಿ ಕೃಷ್ಣಕುಮಾರ್ ಮಾತನಾಡಿ, ರಾಮನಗರದಲ್ಲಿ ಅವ್ಯಾಹತವಾಗಿ ಹೆಣ್ಣು ಭ್ರೂಣಹತ್ಯೆ ಪ್ರಕರಣಗಳು ನಡೆಯುತ್ತಿವೆ. ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗಾಗಿದ್ದು, ಸಮಾಜಕ್ಕೆ ಮಾರಕವಾಗಿದೆ. ಇಂತಹ ಹೇಯ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದರು.

ಭ್ರೂಣ ಲಿಂಗ ಪತ್ತೆಯನ್ನೇ ಕೆಲವರು ದಂಧೆ ಮಾಡಿಕೊಂಡಿದ್ದಾರೆ. ಅದರಲ್ಲೂ ಜಿಲ್ಲಾಸ್ಪತ್ರೆಯಲ್ಲೇ ಇಂತಹ ಕೃತ್ಯ ನಡೆದಿರುವುದು ನಾಚಿಕೆಗೇಡಿನ ವಿಚಾರ. ಸರ್ಕಾರ ಕ್ಲಿನಿಕ್, ಸರ್ಕಾರಿ ವೈದ್ಯರ ಮೇಲೆ ನಿಗಾ ವಹಿಸುವ ಜತೆಗೆ ಸ್ಕ್ಯಾನಿಂಗ್ ಸೆಂಟರ್‌ಗಳ ಪರಿಶೀಲನೆ ನಡೆಸಿ ಇಂಥ ಪಿಡುಗುಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಕುರಿತು ಜಾಗೃತಿ ಅಭಿಯಾನ ಕೈಗೊಂಡು, ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು, ಅಪರಾಧಿಗಳ ಮೇಲೆ ಸಕಾಲದಲ್ಲಿ ಸೂಕ್ತ ಕಠಿಣ ಕಾನೂನು ಕ್ರಮ ಜರಗಿಸುವ ಅವಶ್ಯಕತೆ ಇದೆ. ಪ್ರಭಾವಿ ಆಸ್ಪತ್ರೆಗಳು ಸೇರಿದಂತೆ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ನಡೆದಿರುವ ಹಲವು ಭ್ರೂಣ ಪತ್ತೆ ಪ್ರಕರಣಗಳನ್ನು ಮುಚ್ಚಿಹಾಕಲಾಗಿದೆ. ಹಾಗಾಗಿ ವಿಶೇಷ ತನಿಖಾದಳವನ್ನು ರಚಿಸಿ ಹೆಣ್ಣು ಭ್ರೂಣ ಹತ್ಯೆ ಕೃತ್ಯವನ್ನು ತಡೆಗಟ್ಟಲು ಜಿಲ್ಲಾಡಳಿತ ಕ್ರಮವಹಿಸಬೇಕಿದೆ ಎಂದು ಒತ್ತಾಯಿಸಿದರು.

ಅದಿವಕ್ತ ಪರಿಷತ್ ಕರ್ನಾಟಕ ಸಂಘಟನೆಯ ನವೀನ್ ಕುಮಾರ್ ಶೆಟ್ಟಿ, ಜಗದೀಶ್, ವಿಜಯ ಹಾವನೂರು, ರೂಪಶ್ರೀ, ಮನೋಜ್ ಕುಮಾರ್, ಚೇತನ್ ನಾಯಕ್, ಉಮಾಶಂಕರ್, ಶರತ್ ಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಎಂ.ಶ್ರೀವತ್ಸ,ಕಾರ್ಯದರ್ಶಿ ಟಿ.ತಿಮ್ಮೇಗೌಡ, ಪದಾಧಿಕಾರಿಗಳಾದ ಮಂಜೇಶ್ ಗೌಡ, ಶಿವಾನಂದ್, ದರ್ಶನ್, ವಿನೋದ್ ಕುಮಾರ್ ಮತ್ತಿತರರು ಹಾಜರಿದ್ದರು.

6ಕೆಆರ್ ಎಂಎನ್ 4.ಜೆಪಿಜಿ

ಅದಿವಕ್ತ ಪರಿಷತ್ ಕರ್ನಾಟಕ ಹಾಗೂ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ತೆರಳುತ್ತಿರುವುದು.