ಸಾರಾಂಶ
ಜಿಎಸ್ಟಿ ಸುಧಾರಣೆ ತಂದು ಜನರಿಗೆ ಅನುಕೂಲ ಕಲ್ಪಿಸಿದ ಕೇಂದ್ರ । ಇನ್ನು ರಾಜ್ಯ ಸರ್ಕಾರವೂ ಅನಗತ್ಯ ತೆರಿಗೆ, ಶುಲ್ಕ ಹೆಚ್ಚಳ ಇಳಿಸಲಿ
ಆರ್.ಅಶೋಕ್, ವಿಪಕ್ಷ ನಾಯಕ
ವಿಜಯದಶಮಿ ಆರಂಭವಾಗುವ ಹೊತ್ತಿನಲ್ಲಿ, ಸರಕು ಮತ್ತು ಸೇವಾ ತೆರಿಗೆ-ಜಿಎಸ್ಟಿ ವ್ಯವಸ್ಥೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಸುಧಾರಣೆಗಳನ್ನು ತಂದಿದೆ. ವಿಜಯದಶಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಹಾಗೂ ಜನರ ಮುಂದಿನ ಬದುಕು ಕೂಡ ವಿಜಯದ ನಗೆಯಿಂದಲೇ ಕೂಡಿರಲು ಈ ಆಮೂಲಾಗ್ರ ಸುಧಾರಣೆ ನೆರವಾಗಲಿದೆ. ಒಂದು ಸರ್ಕಾರ ಕಾಲಕಾಲಕ್ಕೆ ಅಪ್‌ಡೇಟ್ ಆಗುತ್ತಾ, ಜನರ ಬವಣೆಗಳನ್ನು ಅರಿತು ಅದರಂತೆ ನಡೆಯಬೇಕು ಎಂಬ ಸಂದೇಶವನ್ನು ಎನ್‌ಡಿಎ ಸರ್ಕಾರ ನೀಡಿದೆ. ಇದು ತೆರಿಗೆ ವ್ಯವಸ್ಥೆಯಲ್ಲಿ ನವ ಮನ್ವಂತರವನ್ನು ಹುಟ್ಟುಹಾಕಿದೆ.
ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ ಎಂದು ಆರೋಪ ಮಾಡಿಕೊಂಡೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ನಂತರ ಗ್ಯಾರಂಟಿಗಳ ಅನುಷ್ಠಾನದೊಂದಿಗೆ ತೆರಿಗೆಗಳ ಭಾರವೂ ಹೆಚ್ಚಾಗಿದೆ. ತೆರಿಗೆಯಲ್ಲಿ ಒಂದಷ್ಟು ಸುಧಾರಣೆಗಳನ್ನು ತಂದು ಜನಜೀವನಕ್ಕೆ ಅನುಕೂಲ ಮಾಡಿಕೊಡಬಹುದೆಂಬ ನಿರೀಕ್ಷೆ ಈಗ ಹುಸಿಯಾಗಿದೆ. ಎಲ್ಲ ಸರ್ಕಾರಗಳು ಹೀಗೆಯೇ ಎಂದು ಜನ ಚಿಂತಿಸುತ್ತಿರುವಾಗ, ಕೇಂದ್ರ ಸರ್ಕಾರ ಜಿಎಸ್ಟಿಯಲ್ಲಿ ಸುಧಾರಣೆ ತಂದು ಜನರ ಮೇಲಿನ ಹೊರೆ ತಗ್ಗಿಸಿದೆ. ಸ್ವಾತಂತ್ರ್ಯೋತ್ಸವದ ದಿನದಂದು ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಸುಳುಹು ನೀಡಿದ್ದರು. ಅವರು ಕೊಟ್ಟ ಮಾತಿನಂತೆಯೇ ನಡೆದು ತಮ್ಮ ಎಂದಿನ ಬದ್ಧತೆಯನ್ನು ಮತ್ತೆ ಪ್ರದರ್ಶಿಸಿದ್ದಾರೆ. ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಬಹಳ ದೂರದೃಷ್ಟಿ ಇಟ್ಟುಕೊಂಡು ಹಾಗೂ ಜನಜೀವನವನ್ನು ಗಮನದಲ್ಲಿರಿಸಿಕೊಂಡು ಚಾಣಾಕ್ಷತನದಿಂದ ಸುಧಾರಣೆ ಜಾರಿ ಮಾಡಿದ್ದಾರೆ.
ಕೃಷಿ ತೆರಿಗೆ ಕ್ರಾಂತಿ:
ಕೃಷಿ ಕ್ಷೇತ್ರದಲ್ಲಿ ರೈತರಿಗೆ ಅನುಕೂಲವಾಗುವಂತೆ ತೆರಿಗೆ ಇಳಿಸಲಾಗಿದೆ. ಇದನ್ನು ಕೃಷಿ ಕ್ಷೇತ್ರದ ತೆರಿಗೆ ಕ್ರಾಂತಿ ಎಂದು ಬಣ್ಣಿಸಬಹುದು. ಇದು ರೈತರು ಖರೀದಿಸುವ ಉಪಕರಣ, ಸಾಧನಗಳ ಬೆಲೆಯನ್ನು ಗಣನೀಯವಾಗಿ ಇಳಿಸುತ್ತದೆ. ರೈತರ ಆದಾಯ ಹೆಚ್ಚಿಸುವ ಗುರಿಗೆ ಇದು ಕೊಡುಗೆ ನೀಡಲಿದೆ. ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಅನುಭವಿಸುವ ರೈತರಿಗೆ ಇದು ಅನುಕೂಲ. ಹಾಗೆಯೇ ಕಡಿಮೆ ಬಂಡವಾಳ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸಲು ಇದು ನೆರವಾಗಲಿದೆ. ಕೃಷಿ ಕ್ಷೇತ್ರಕ್ಕೆ ಯುವಜನರನ್ನು ಸೆಳೆಯಲು ಅನೇಕ ಪ್ರಯತ್ನಗಳನ್ನು ಸರ್ಕಾರಗಳು ಮಾಡುತ್ತಲೇ ಇವೆ. ತೆರಿಗೆ ಇಳಿಕೆಯಂತಹ ಕ್ರಮಗಳು ಯುವಜನರು ಕೃಷಿ ಕ್ಷೇತ್ರದ ಕಡೆಗೆ ಆಕರ್ಷಿತರಾಗಲು ಪ್ರೇರಣೆ ನೀಡುತ್ತದೆ.
ಇತ್ತೀಚೆಗೆ ರಾಜ್ಯದಲ್ಲಿ ರಸಗೊಬ್ಬರ ಕೊರತೆ ಉಂಟಾಗಿ ರೈತರು ನಷ್ಟ ಹೊಂದುವ ಅಪಾಯಕ್ಕೆ ಸಿಲುಕಿದ್ದರು. ಕಾಂಗ್ರೆಸ್ ಸರ್ಕಾರ ಕೇಂದ್ರದ ಮೇಲೆ ಆರೋಪ ಹೊರಿಸುವುದು ಬಿಟ್ಟರೆ ಸೂಕ್ತ ಸಮಯದಲ್ಲಿ ತಕ್ಕ ಕ್ರಮ ಕೈಗೊಳ್ಳಲೇ ಇಲ್ಲ. ಈಗ ರಸಗೊಬ್ಬರಗಳ ತಯಾರಿಕೆಯಲ್ಲಿ ಬಳಸುವ ಸಲ್ಫ್ಯೂರಿಕ್ ಆ್ಯಸಿಡ್, ನೈಟ್ರಿಕ್ ಆ್ಯಸಿಡ್, ಅಮೋನಿಯಾಗಳ ಮೇಲಿನ ತೆರಿಗೆ ಶೇ.18 ರಿಂದ ಶೇ.5ಕ್ಕೆ ಇಳಿದಿದೆ. ಇದರಿಂದಾಗಿ ಕಡಿಮೆ ದರದಲ್ಲಿ ರಸಗೊಬ್ಬರ ರೈತರ ಕೈ ಸೇರಲಿದೆ. ಇನ್ನಾದರೂ ರಸಗೊಬ್ಬರ ಪೂರೈಕೆ ಹೊಣೆಯನ್ನು ರಾಜ್ಯ ಸರ್ಕಾರ ಗಂಭೀರತೆಯಿಂದ ಹೊತ್ತುಕೊಳ್ಳಬೇಕಿದೆ.
ಆರೋಗ್ಯ ವಲಯಕ್ಕೆ ಪ್ರಾಶಸ್ತ್ಯ:
ಆರೋಗ್ಯ ಕಾಪಾಡಿಕೊಳ್ಳಲು ಜನ ಸಾಕಷ್ಟು ಖರ್ಚು ಮಾಡುತ್ತಾರೆ. ಕೆಲವರಿಗೆ ಇಡೀ ಬದುಕಿನ ದುಡಿಮೆಯನ್ನು ಆರೋಗ್ಯ ಕಾಪಾಡಿಕೊಳ್ಳಲು ಖರ್ಚು ಮಾಡಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ ವೈಯಕ್ತಿಕ ಆರೋಗ್ಯ ವಿಮೆ ಹಾಗೂ ಜೀವ ವಿಮೆಗಳ ಮೇಲಿದ್ದ ಶೇ.18 ಜಿಎಸ್ಟಿ ತೆಗೆದುಹಾಕಿ, ಸಂಪೂರ್ಣ ವಿನಾಯ್ತಿ ಘೋಷಿಸಲಾಗಿದೆ. ಇದರಿಂದಾಗಿ ಎಲ್ಲರೂ ಆರೋಗ್ಯ ವಿಮೆ ಖರೀದಿ ಮಾಡಿ ಆರೋಗ್ಯದ ಭರವಸೆ ಪಡೆಯಬಹುದು. ಥರ್ಮೋಮೀಟರ್ ಜಿಎಸ್ಟಿ ಶೇ.18 ರಿಂದ ಶೇ.5, ಮೆಡಿಕಲ್ ಗ್ರೇಡ್ ಆಕ್ಸಿಜನ್, ಲ್ಯಾಬ್ ಕಿಟ್‌ಗಳು, ಕನ್ನಡಕ ಮೊದಲಾದವುಗಳ ಜಿಎಸ್ಟಿ ಶೇ.12 ರಿಂದ ಶೇ.5ಕ್ಕೆ ಇಳಿದಿದೆ.
ಈ ಎಲ್ಲ ಸುಧಾರಣೆಗಳಿಂದಾಗಿ ಕೇಂದ್ರ ಸರ್ಕಾರಕ್ಕೆ 48,000 ಕೋಟಿ ರು. ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಸವಾಲನ್ನು ಮೈ ಮೇಲೆ ಎಳೆದುಕೊಂಡೇ ಕೇಂದ್ರ ಸರ್ಕಾರ ಈ ಬದಲಾವಣೆ ಮಾಡಿದೆ. ಅಮೆರಿಕ ಸರ್ಕಾರ ಭಾರತದ ರಫ್ತು ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿರುವ ಸಂಕಷ್ಟದ ಸಮಯದಲ್ಲೂ, ಕೇಂದ್ರ ಸರ್ಕಾರ ಜನರ ಹಿತ ಗಮನದಲ್ಲಿಟ್ಟುಕೊಂಡು ಈ ಕ್ರಮಕ್ಕೆ ಮುಂದಾಗಿರುವುದು ʼಸಬ್ಕಾ ಸಾಥ್ ಸಬ್ಕಾ ವಿಕಾಸ್ʼ ಎಂಬ ಧ್ಯೇಯಮಂತ್ರದ ಬದ್ಧತೆಗೆ ನಿದರ್ಶನವಾಗಿದೆ.
ರಾಜ್ಯಕ್ಕೆ ನಷ್ಟವಿಲ್ಲ:
ಜಿಎಸ್ಟಿಯಲ್ಲಿ ಸುಧಾರಣೆ ಬೇಕೆಂದು ಆಗ್ರಹ ಮಾಡುತ್ತಿದ್ದವರು ಈಗ ಇದರಿಂದ ರಾಜ್ಯಕ್ಕೆ ನಷ್ಟವಾಗಲಿದೆ ಎಂಬ ಮೊಂಡು ವಾದ ಮುಂದಿಡುತ್ತಿದ್ದಾರೆ. ಜಿಎಸ್ಟಿ ಸರಳೀಕರಣದಿಂದಾಗಿ ಬೆಲೆ ಇಳಿಕೆಯಾಗಿ ಜನರಿಗೆ ಸಹಾಯವಾಗಲಿದೆ ಎಂಬುದು ಸ್ಪಷ್ಟ. ಇಷ್ಟಾದರೂ ತೆರಿಗೆ ಇಳಿಕೆಯಿಂದ ರಾಜ್ಯದ ಆದಾಯ ಖೋತಾ ಆಗಲಿದೆ ಎಂಬ ಟೀಕೆ ಮಾಡಲಾಗುತ್ತಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ತೆರಿಗೆ ಹೆಚ್ಚಳವಾಗುತ್ತಲೇ ಇದೆ. ಮಾರ್ಗಸೂಚಿ ದರ, ಸ್ಟಾಂಪ್ ಡ್ಯೂಟಿ ದರ, ವಿವಿಧ ಪ್ರಮಾಣಪತ್ರಗಳ ದರ, ಬಸ್ ಟಿಕೆಟ್ ದರ, ಹಾಲಿನ ದರ, ಪೆಟ್ರೋಲ್-ಡೀಸೆಲ್ ದರ, ವಿದ್ಯುತ್ ದರ ಹೀಗೆ ಅನೇಕ ದರಗಳನ್ನು ಹೆಚ್ಚಳ ಮಾಡಿ ಜನರಿಗೆ ಬರೆ ಹಾಕಲಾಗಿದೆ. 2023ರಲ್ಲಿ ಚುನಾವಣೆ ಸಮಯದಲ್ಲಿದ್ದ ದರಗಳಿಗೂ ಈಗಿನ ದರಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ರಾಜ್ಯದಲ್ಲಿ ಸರ್ಕಾರವೇ ಅಧಿಕೃತವಾಗಿ ಬೆಲೆ ಏರಿಕೆ ಮಾಡಿ, ಕೇಂದ್ರ ಸರ್ಕಾರ ತೆರಿಗೆ ಇಳಿಸಿದಾಗ ನಷ್ಟ ಎನ್ನುವುದು ಹಾಸ್ಯಾಸ್ಪದ. ಜನರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶವಿದ್ದರೆ, ಈಗಾಗಲೇ ಮಾಡಿರುವ ದರ-ತೆರಿಗೆ ಏರಿಕೆಯನ್ನು ಇಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕಿದೆ. ಗ್ಯಾರಂಟಿಗಳ ನೆಪದಲ್ಲಿ ಜನರ ಜೇಬಿಗೆ ಕತ್ತರಿ ಹಾಕಿ, ಕೊನೆಗೆ ಎಲ್ಲಕ್ಕೂ ಕೇಂದ್ರ ಸರ್ಕಾರ ಕಾರಣ ಎನ್ನುವ ನಾಟಕೀಯ ಮಾತುಗಳನ್ನು ಇನ್ನಾದರೂ ಕಾಂಗ್ರೆಸ್ ನಾಯಕರು ನಿಲ್ಲಿಸಬೇಕಿದೆ.
ಜಿಎಸ್ಟಿಯ ಹೊಸ ವ್ಯವಸ್ಥೆ ಇಡೀ ದೇಶದಲ್ಲಿ ಭರವಸೆ ಹಾಗೂ ಆಶಾಕಿರಣವನ್ನು ಉಂಟುಮಾಡಿದೆ. ಜನಸಾಮಾನ್ಯರು, ವರ್ತಕರು, ಉದ್ದಿಮೆಗಳು ಇದನ್ನು ಸ್ವಾಗತಿಸುತ್ತಿವೆ. ಇಂಥ ಸಮಯದಲ್ಲಿ ಸುಧಾರಿತ ಜಿಎಸ್ಟಿ ಜಾರಿ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕಿದೆ. ಅದೇ ರೀತಿ ರಾಜ್ಯ ಸರ್ಕಾರದಿಂದ ಅನಗತ್ಯವಾಗಿ ಹೆಚ್ಚಿಸಿರುವ ತೆರಿಗೆ, ಶುಲ್ಕಗಳನ್ನು ಕಡಿಮೆ ಮಾಡಿ ಮಾದರಿ ಆಡಳಿತ ನೀಡುವ ದಿಟ್ಟತನ ತೋರಬೇಕಿದೆ. ಪ್ರಧಾನಿ ಮೋದಿಯವರು ವಿಕಸಿತ ಭಾರತ ನಿರ್ಮಾಣ ನಿಟ್ಟಿನಲ್ಲಿ ಜನಪರ ಹೆಜ್ಜೆಗಳನ್ನು ನಿರಂತರವಾಗಿ ಇಡುತ್ತಿದ್ದಾರೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಕೂಡ ಅಂತಹ ಒಂದು ಹೆಜ್ಜೆಯನ್ನಾದರೂ ಇಡಲಿ ಎಂದು ಆಶಿಸುತ್ತೇನೆ.