ಸಾರಾಂಶ
ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ ನೇತೃತ್ವದಲ್ಲಿ ಸಭೆ ನಡೆಸಿದ ಪದಾಧಿಕಾರಿಗಳು ಮತ್ತು ಸದಸ್ಯರು ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಮುಸ್ಲಿಮರು ನಡೆಸಿದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ, ನ್ಯಾಯಾಲಯದ ಕಲಾಪದಿಂದ ಹೊರ ಗುಳಿಯಲು ನಿರ್ಣಯ ಕೈಗೊಂಡರು.
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದಲ್ಲಿ ಕಳೆದ ಭಾನುವಾರ ಗಣೇಶ ಮೂರ್ತಿ ಮೆರವಣಿಗೆ ವೇಳೆ ನಡೆದ ಗಲಭೆ ವಿರೋಧಿಸಿ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಮದ್ದೂರು ಬಂದ್‌ಗೆ ಬೆಂಬಲಿಸಿ ವಕೀಲರು ಮಂಗಳವಾರ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.ಪ್ರತಿಭಟನೆ ವೇಳೆ ಗಲಭೆಯಲ್ಲಿ ಭಾಗಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ಪರ ವಕಾಲತ್ತು ವಹಿಸದಂತೆ ವಕೀಲರು ಮಹತ್ವದ ತೀರ್ಮಾನ ಕೈಗೊಂಡರು.
ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ ನೇತೃತ್ವದಲ್ಲಿ ಸಭೆ ನಡೆಸಿದ ಪದಾಧಿಕಾರಿಗಳು ಮತ್ತು ಸದಸ್ಯರು ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಮುಸ್ಲಿಮರು ನಡೆಸಿದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ, ನ್ಯಾಯಾಲಯದ ಕಲಾಪದಿಂದ ಹೊರ ಗುಳಿಯಲು ನಿರ್ಣಯ ಕೈಗೊಂಡರು.ನಂತರ ನ್ಯಾಯಾಲಯದ ವಕೀಲರ ಸಂಘದ ಆವರಣದಲ್ಲಿ ಕೆಲಕಾಲ ಮೌನ ಪ್ರತಿಭಟನೆ ನಡೆಸಿದ ವಕೀಲರು ಬಳಿಕ ಪಾದಯಾತ್ರೆ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಆ ನಂತರ ಮಾತನಾಡಿದ ಹಿರಿಯ ವಕೀಲ ಎಚ್.ಮಾದೇಗೌಡ ಮಾಜಿ ಸಿಎಂ ದಿ.ಎಸ್.ಎಂ.ಕೃಷ್ಣ ಅವರನ್ನು ಆಯ್ಕೆ ಮಾಡಿದ ಮದ್ದೂರು ಕ್ಷೇತ್ರದಲ್ಲಿ ಇಂತಹ ಕೋಮು ಸಂಘರ್ಷಗಳು ನಡೆದಿರುವುದು ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.ನಮ್ಮೊಂದಿಗೆ ಇದ್ದುಕೊಂಡು ಹಿಂದುಗಳ ಮೇಲೆ ದುಷ್ಟೃತ್ಯ ನಡೆಸುತ್ತಿರುವ ವ್ಯಕ್ತಿಗಳನ್ನು ನಿಗ್ರಹ ಮಾಡದೆ ಹೋದರೆ ಶಾಂತಿಯುತ ಜಿಲ್ಲೆ ಎಂದು ಹೆಸರಾದ ಮಂಡ್ಯ ಜಿಲ್ಲೆಗೆ ಅಗೌರವ ತರುವಂತಹ ಕೃತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ವಕೀಲರು ಸೇರಿದಂತೆ ಜಿಲ್ಲೆಯ ಎಲ್ಲಾ ವಕೀಲರ ಸಂಘಗಳ ಸದಸ್ಯರು ಕೋಮು ಸಂಘರ್ಷಕ್ಕೆ ಕಾರಣರಾದ ಆರೋಪಿಗಳ ಪರ ಯಾವುದೇ ವಕಾಲತ್ತು ವಹಿಸದಂತೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ವಕೀಲ ಸಂಘದ ಉಪಾಧ್ಯಕ್ಷ ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ಎಂ.ಜೆ.ಸುಮಂತ್. ಹಿರಿಯ ವಕೀಲರಾದ ಗಿರೀಶ್, ಬಿ,ರಾಮಕೃಷ್ಣೇಗೌಡ, ಟಿ.ನಾಗರಾಜು, ಎಂ.ಎನ್.ಚಂದ್ರಶೇಖರ್, ಎಂ.ಎಂ.ಪ್ರಶಾಂತ್, ಮಾ.ಜ.ಚಿಕ್ಕಣ್ಣ, ಅಶೋಕ್ ಕುಮಾರ್, ಪುಟ್ಟಸ್ವಾಮಿ, ಚೆಲುವರಾಜು, ವಿ.ಟಿ.ರವಿಕುಮಾರ್, ಎ.ಶಿವಣ್ಣ, ದಯಾನಂದ್, ಕೆ.ಶಿವಣ್ಣ, ಎಚ್.ರಮೇಶ್, ನವೀನ್ ಕುಮಾರ್, ಜಗದೀಶ್, ಶ್ರೀನಿವಾಸ್, ಪ್ರಿಯಾಂಕ, ಮಂಜುಳ, ತ್ರಿವೇಣಿ, ಯೋಗಿತಾ, ವಿಲಾಸಿನಿ,ಗೀತಾ ಮತ್ತಿತರರು ಭಾಗವಹಿಸಿದ್ದರು.