ಉಪ ವಿಭಾಗಾಧಿಕಾರಿ ವಿರುದ್ಧ ಕ್ರಮಕ್ಕೆ ವಕೀಲರ ಆಗ್ರಹ

| Published : Jan 24 2025, 12:46 AM IST

ಸಾರಾಂಶ

Lawyers demand action against Deputy Divisional Officer

-ತರೀಕೆರೆ ಉಪ ವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್ ಅವಾಚ್ಯ ನಿಂದನೆ ಆರೋಪ । ವಕೀಲರಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

------

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ತರೀಕೆರೆ ಉಪ ವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್ ಅವರು ವಕೀಲರೊಬ್ಬರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ತರೀಕೆರೆ, ಚಿಕ್ಕಮಗಳೂರು, ಕಡೂರು ಮತ್ತು ಮೂಡಿಗೆರೆಯಲ್ಲಿ ವಕೀಲರು ನ್ಯಾಯಾಲಯದ ಕಲಾಪದಿಂದ ದೂರ ಉಳಿದರು. ನಂತರ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಭೂ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಉಪ ವಿಭಾಗಾಧಿಕಾರಿಗೆ ತಲುಪಿಸಲು ಕಡೂರಿನ ವಕೀಲ ಹರೀಶ್ ತೆರಳಿದ್ದರು. ಇದಕ್ಕೂ ಮುನ್ನ ಉಪವಿಭಾಗಾಧಿಕಾರಿ ಮಾಡಿದ್ದ ಆದೇಶ ಕಾನೂನಿಗೆ ವಿರುದ್ಧವಾಗಿದೆ ಎಂದು ಹರೀಶ್ ಅವರ ಕಕ್ಷಿದಾರರು ಮುಖ್ಯಮಂತ್ರಿಗೆ ದೂರ ನೀಡಿದ್ದರು. ಇದರಿಂದ ಕೋಪಗೊಂಡಿದ್ದ ಉಪ ವಿಭಾಗಾಧಿಕಾರಿ ಕಾಂತರಾಜ್ ಅವರು ವಕೀಲ ಹರೀಶ್ ಅವರನ್ನು ಮನ ಬಂದಂತೆ ನಿಂದಿಸಿದ್ದಾರೆಂದು ವಕೀಲರು ಆರೋಪಿಸಿದ್ದಾರೆ.

''''''''ಹೈಕೋರ್ಟ್ ಆದೇಶದ ಪ್ರತಿಯನ್ನು ಮುಖದ ಮೇಲೆ ಎಸೆದು ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಮೊಬೈಲ್ ಫೋನ್ ಕಸಿದುಕೊಂಡರು. ಬೇರೆ ವ್ಯಕ್ತಿಗಳನ್ನು ಕಚೇರಿಗೆ ಕರೆಸಿಕೊಂಡು ಬೆದರಿಸಿದರು. ಪೊಲೀಸರನ್ನೂ ಕರೆಸಿ ದೌರ್ಜನ್ಯ ನಡೆಸಲು ಯತ್ನಿಸಿದರು'''''''' ಎಂದು ವಕೀಲ ಹರೀಶ್ ಜಿಲ್ಲಾಧಿಕಾರಿಗೆ ವಿವರಿಸಿದರು.

ಉಪ ವಿಭಾಗಾಧಿಕಾರಿ ಕಾಂತರಾಜ್ ವಿರುದ್ಧ ಕ್ರಮ ಕೈಗೊಳ್ಳುವ ತನಕ ಜಿಲ್ಲೆಯ ಕಂದಾಯ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗುವುದಿಲ್ಲ ಎಂದು ವಕೀಲರು ಹೇಳಿದರು. ಉಪ ವಿಭಾಗಾಧಿಕಾರಿಯಿಂದ ವಿವರಣೆ ಕೇಳಲಾಗಿದೆ. ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇನೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸ್ಪಷ್ಟಪಡಿಸಿದರು.

-----

ಪೋಟೋ: ತರೀಕೆರೆ ಉಪ ವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್ ಅವರು ವಕೀಲರೊಬ್ಬರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ಗೆ ಮನವಿ ಸಲ್ಲಿಸಿದರು.

ಫೈಲ್‌ ನೇಮ್‌ 23 ಕೆಸಿಕೆಎಂ 4