ವಕೀಲರಿಗೆ ಭ್ರಷ್ಟಚಾರ ಬಯಲಿಗೆಳೆಯುವ ಶಕ್ತಿಯಿದೆ : ಭೋಜೇಗೌಡ

| Published : Jun 26 2024, 12:33 AM IST

ಸಾರಾಂಶ

ವಕೀಲರ ವೃತ್ತಿ ಅತ್ಯಂತ ಪವಿತ್ರವಾದುದು. ಕಕ್ಷಿಗಾರರ ಬದುಕು ಅನ್ಯಾಯಕ್ಕೆ ಒಳಗಾದ ವೇಳೆಯಲ್ಲಿ ಸೂಕ್ತವಾಗಿ ವಾದ ಮಂಡಿಸಿ ನ್ಯಾಯ ಒದಗಿಸುವ ಮೂಲಕ ವಕೀಲರು ಸಮಾಜಕ್ಕೆ ಮಾದರಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಹೇಳಿದರು.

ಚಿಕ್ಕಮಗಳೂರು ವಕೀಲರ ಸಂಘದಿಂದ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭ

ಕನ್ನಡಪ್ರಭವಾರ್ತೆ ಚಿಕ್ಕಮಗಳೂರು

ವಕೀಲರ ವೃತ್ತಿ ಅತ್ಯಂತ ಪವಿತ್ರವಾದುದು. ಕಕ್ಷಿಗಾರರ ಬದುಕು ಅನ್ಯಾಯಕ್ಕೆ ಒಳಗಾದ ವೇಳೆಯಲ್ಲಿ ಸೂಕ್ತವಾಗಿ ವಾದ ಮಂಡಿಸಿ ನ್ಯಾಯ ಒದಗಿಸುವ ಮೂಲಕ ವಕೀಲರು ಸಮಾಜಕ್ಕೆ ಮಾದರಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಹೇಳಿದರು.

ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರ ಸಂಘ ಮಂಗಳವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ರಾಜಕಾರಣಿಗಳ ಹಾಗೂ ಸರ್ಕಾರದ ಭ್ರಷ್ಟಚಾರವನ್ನು ಬಯಲಿಗೆಳೆಯುವ ಶಕ್ತಿ ವಕೀಲರ ವೃತ್ತಿಗಿದೆ. ಸಮಾಜದಲ್ಲಿ ಭ್ರಷ್ಟಮುಕ್ತ ಹಾಗೂ ಸಾಮಾಜಿಕ ನ್ಯಾಯವನ್ನು ಸಮರ್ಪಕವಾಗಿ ನಿಭಾಯಿಸಿದರೆ ಉತ್ತಮ ವಕೀಲರಾಗಲು ಸಾಧ್ಯ ಎಂದ ಅವರು, ಆಸೆ, ಆಮಿಷಗಳಿಗೆ ಒಳಗಾಗದೇ ನ್ಯಾಯಸಮ್ಮತ ವಾದಗಳನ್ನು ಮಂಡಿಸಲು ಮುಂದಾಗಬೇಕು ಎಂದರು.

ವಕೀಲರಿಗೆ ಸಮಾಜದಲ್ಲಿ ಬಹಳಷ್ಟು ಬೆಲೆಯಿದೆ. ಕಪ್ಪು ಕೋಟ್ ಧರಿಸಿದರೆ ಘನತೆ, ಗೌರವ ಹೆಚ್ಚುತ್ತದೆ. ಇಂದಿನ ಯುವ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ವಕೀಲ ವೃತ್ತಿಗೆ ಧಾವಿಸುತ್ತಿರುವುದು ಹೆಮ್ಮೆಯ ಸಂಗತಿ. ಅದೇ ರೀತಿ ಹಿರಿಯ ವಕೀಲರ ಸಲಹೆ, ಸಹಕಾರ ಹಾಗೂ ಮಾರ್ಗದರ್ಶನ ಪಡೆಯಬೇಕು ಎಂದು ಕಿವಿ ಮಾತು ಹೇಳಿದರು.

ವಕೀಲರು ಭಾವೈಕ್ಯತೆ ದೃಷ್ಟಿಯಲ್ಲಿ ನಾಡನ್ನು ಕಟ್ಟುವ ಕೆಲಸ ಮಾಡಬೇಕು. ವಕೀಲ ವೃತ್ತಿಗೆ ಯುವ ಜನಾಂಗ ಆಗಮಿಸುತ್ತಿದೆ. ಈ ಬಗ್ಗೆ ಹೆಮ್ಮೆ ಪಡಬೇಕು. ಸಣ್ಣಪುಟ್ಟ ಸಮಸ್ಯೆಗಳು ವೃತ್ತಿಯಲ್ಲಿ ಎದುರಾಗುವ ಸಾಧ್ಯತೆ ಇರುತ್ತದೆ. ಆಗ ದೃತಿಗೆಡಬಾರದು. ವಕೀಲರ ಸಂಘದ ಬೆಳವಣಿಗೆ ನಿಟ್ಟಿನಲ್ಲಿ 5 ಲಕ್ಷ ರು. ದೇಣಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ, ವಕೀಲರ ಶ್ರೇಯೋಭಿವೃದ್ಧಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಭೋಜೇಗೌಡರ ಕೊಡುಗೆ ಅಪಾರವಿದೆ. ಬೇಡಿಕೆಗಳನ್ನು ಈಡೇರಿಸುವ ಸಜ್ಜನ ವ್ಯಕ್ತಿತ್ವವಿದೆ. ಅಲ್ಲದೇ ಸಂಕಷ್ಟದ ಸಮಯದಲ್ಲೂ ಬೆನ್ನುಲುಬಾಗಿ ಜೊತೆಗಿದ್ದು ಸೂಕ್ತ ಮಾರ್ಗದರ್ಶನ ನೀಡುತ್ತಾ ನೆರವಾಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಸ್.ಶರತ್‌ಚಂದ್ರ, ಕಾರ್ಯದರ್ಶಿ ಆರ್.ಅನಿಲ್‌ಕುಮಾರ್, ಖಜಾಂಚಿ ದೀಪಕ್, ಸಹ ಕಾರ್ಯದರ್ಶಿ ಎನ್.ವಿ.ಪ್ರಿಯದರ್ಶಿನಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಹಿರಿಯ, ಕಿರಿಯ ವಕೀಲರು ಉಪಸ್ಥಿತರಿದ್ದರು.

------------------

25 ಕೆಸಿಕೆಎಂ 3

ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರ ಸಂಘ ಮಂಗಳವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಎಸ್‌.ಎಲ್‌. ಭೋಜೇಗೌಡ ಅವರು ಗೌರವ ಸ್ವೀಕರಿಸಿದರು. ಸುಜೇಂದ್ರ, ಶರತ್‌ಚಂದ್ರ, ಅನಿಲ್‌ಕುಮಾರ್‌, ದೀಪಕ್‌ ಹಾಗೂ ವಕೀಲರು ಇದ್ದರು.