ಸಾರಾಂಶ
ಹೊಸಪೇಟೆ: ವಕೀಲರಿಗೆ ನ್ಯಾಯಾಲಯವೇ ಮನೆಯಾಗಿದ್ದು, ಜೀವನದ ಅರ್ಧ ಭಾಗ ಇಲ್ಲೇ ಕಳೆಯುತ್ತೇವೆ. ಜನರಿಗೆ ನ್ಯಾಯ ಒದಗಿಸುವಲ್ಲಿ ವಕೀಲರ ಪಾತ್ರ ಹಿರಿದು ಎಂದು ಹೈಕೋರ್ಟ್ ನ್ಯಾಯಮೂರ್ತಿ, ಬಳ್ಳಾರಿ ಜಿಲ್ಲಾಡಳಿತ ನ್ಯಾಯಾಧೀಶ ನಟರಾಜ್ ಹೇಳಿದರು.
ಬಳ್ಳಾರಿ ಜಿಲ್ಲಾ ನ್ಯಾಯಾಂಗ ಲೋಕೋಪಯೋಗಿ ಇಲಾಖೆ, ವಕೀಲರ ಸಂಘದಿಂದ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.ನೂತನ ವಿಜಯನಗರ ಜಿಲ್ಲೆಗೆ ನಾಲ್ಕು ವರ್ಷದ ನಂತರ ನ್ಯಾಯಾಲಯಕ್ಕೆ ಸಂಪೂರ್ಣ ಜೀವ ಬಂದಿದೆ. ನ್ಯಾಯಾಲಯದಿಂದ ಕೆಲವರಿಗೆ ಮಾತ್ರ ನೋವು ನೀಡಬಹುದು. ಆದರೆ, ಹಲವರಿಗೆ ಜೀವನ ನೀಡುತ್ತದೆ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು ಎಂದರು.
ಕಾನೂನು ಪ್ರಕಾರ ಪೊಲೀಸರಿಂದ ಬಂಧನಕ್ಕೆ ಒಳಗಾದವರನ್ನು ನೇರವಾಗಿ ನ್ಯಾಯಾಲಯಕ್ಕೆ ಒಪ್ಪಿಸಬೇಕು. ಆದರೆ, ಅದು ಆಗಲ್ಲ. ಈ ರೀತಿ ಆಗಬಾರದು ಎಂದು ಸೂಚ್ಯವಾಗಿ ಹೇಳಿದ ಅವರು, ಸಮಾಜದಲ್ಲಿ ಆರೋಪಿಗಳು ಎಂದು ಎನಿಸಿಕೊಳ್ಳುವರ ಮನೆ ಬಾಗಿಲು ತಟ್ಟಲಾಗುತ್ತಿದೆ. ಸಮಾಜದಲ್ಲೂ ಮನೋಭಾವ ಬದಲಾಗಬೇಕು ಎಂದರು.ನ್ಯಾಯಾಲಯ ಅನ್ಯಾಯಕ್ಕೆ ಒಳಗಾದವರಿಗೆ ಆಸರೆಯಾಗಿದೆ.
ಆಡಳಿತದಲ್ಲಿರುವವರನ್ನು ನ್ಯಾಯಾಲಯ ಎಚ್ಚರಿಸುತ್ತದೆ. ಮನುಷ್ಯನಿಗೆ ಮೂಲಭೂತ ಹಕ್ಕು ಬೇಕು ಎಂದರೆ ಅದು ನ್ಯಾಯಾಲಯದಿಂದ ಸಾಧ್ಯವಾಗಲಿದೆ. ಎಲ್ಲರೂ ಕಾನೂನು, ಕಾಯ್ದೆ ಕುರಿತು ಮಾಹಿತಿ ಪಡೆಯಬೇಕು ಎಂದರು.ಬಳ್ಳಾರಿಯಿಂದ ಒಂದು ಭಾಗ ಕತ್ತರಿಸಿ ಹೋಗುತ್ತಿದೆ. ವಿಜಯನಗರ ಸಂಪದ್ಭರಿತ ಜಿಲ್ಲೆಯಾಗಿದೆ.
ಎರಡು, ಮೂರು ವರ್ಷದಲ್ಲಿ ಹೊಸ ಕಟ್ಟಡ ಬರಲಿದೆ. ಅಲ್ಲಿಯವರೆಗೆ ಈ ನ್ಯಾಯಾಲವನ್ನು ಮನೆ ರೀತಿಯಲ್ಲಿ ನೋಡಿಕೊಳ್ಳಬೇಕಿದೆ. ಸಾರ್ವಜನಿಕರಿಗೆ ಜಿಗುಪ್ಸೆ ಮಾಡದಿರಲು, ಆದಷ್ಟು ಬೇಗ ಹೊಸ ಕಟ್ಟಡ ನಿರ್ಮಿಸಿದರೇ, ಜನರಿಗೂ ಅನುಕೂಲ ಆಗಲಿದೆ ಎಂದರು.ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶ್ರೀಧರ್ ರಾವ್ ಮಾತನಾಡಿ, ಪ್ರತಿ ವರ್ಷ ಐದಾರು ಸಾವಿರ ಯುವ ವಕೀಲರು ನೋಂದಣಿ ಆಗುತ್ತಿದ್ದಾರೆ. ವಕೀಲ ವೃತ್ತಿ ಸಾಮಾನ್ಯವಲ್ಲ. ಹಿರಿಯ ವಕೀಲರ ಸಲಹೆಗಳನ್ನು ಪಡೆಯಬೇಕು. ಆದಷ್ಟು ಅಧ್ಯಯನ ಮಾಡಬೇಕು ಎಂದರು.
ಬಳ್ಳಾರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಕೆ.ಜಿ.ಶಾಂತಿ ಮಾತನಾಡಿದರು.ನ್ಯಾಯಾಲಯದ ಉದ್ಘಾಟನೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್, ರಾಜ್ಯ ವಕೀಲರ ಪರಿಷತ್ತಿನ ಜೆ.ಎಂ. ಅನಿಲ್ ಕುಮಾರ್, ಕೋಟೇಶ್ವರ ರಾವ್, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕುಮಾರ ಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಕೆ.ಪ್ರಹ್ಲಾದ ಮತ್ತಿತರರಿದ್ದರು.