ಸಾರಾಂಶ
ವಕೀಲರು ನಿತ್ಯ ಜೀವನದಲ್ಲಿ ತಮ್ಮ ವೃತ್ತಿಯ ಜೊತೆಗೆ ಆರೋಗ್ಯದ ಕಡೆಗೂ ಕಾಳಜಿ ವಹಿಸಬೇಕು ಎಂದು ಜೆಎಂಎಫ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರುಣ್ ಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹೊಸಕೋಟೆ
ವಕೀಲರು ನಿತ್ಯ ಜೀವನದಲ್ಲಿ ತಮ್ಮ ವೃತ್ತಿಯ ಜೊತೆಗೆ ಆರೋಗ್ಯದ ಕಡೆಗೂ ಕಾಳಜಿ ವಹಿಸಬೇಕು ಎಂದು ಜೆಎಂಎಫ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರುಣ್ ಕುಮಾರ್ ತಿಳಿಸಿದರು.ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘದಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ಮನುಷ್ಯನಿಗೆ ಆರೋಗ್ಯ ತುಂಬಾ ಅಮೂಲ್ಯವಾದುದು. ನಿತ್ಯ ಜೀವನದ ಕರ್ತವ್ಯದ ನಡುವೆ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮುಖ್ಯವಾಗಿ ವಕೀಲರು ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ಆದ್ದರಿಂದ ವಕೀಲರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯರು ನೀಡುವ ಆರೋಗ್ಯದ ಸಲಹೆ ಸೂಚನೆಗಳನ್ನು ಸಮರ್ಪಕವಾಗಿ ಪಾಲಿಸಬೇಕು ಎಂದು ತಿಳಿಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ವೆಂಕಟಸ್ವಾಮಿ ಮಾತನಾಡಿ, ವಕೀಲರ ಸಂಘದಿಂದ ಆರೋಗ್ಯ ತಪಾಸಣೆ ಆಯೋಜಿಸಿದ್ದು, ವಕೀಲರು ನಿತ್ಯ ಜೀವನದಲ್ಲಿ ಒಂದು ಗಂಟೆ ತಮ್ಮ ಆರೋಗ್ಯ ಕಾಳಜಿಗೆ ಗಮನಹರಿಸಬೇಕು. ವಾಯು ವಿಹಾರ, ಯೋಗ, ಧ್ಯಾನದ ಮೂಲಕ ಆರೋಗ್ಯ ಸಮತೋಲನ ಕಾಪಾಡಿಕೊಳ್ಳಬೇಕು ಎಂದರು.ಹೊಸಕೋಟೆ ಜೆಎಂಎಫ್ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಸತೀಶ್ ಕುಮಾರ್, ಅಪರ ಸಿವಿಲ್ ನ್ಯಾಯಾಧೀಶೆ ಚೈತ್ರ ವಿ. ಕುಲಕರ್ಣಿ, ವಕೀಲರ ಸಂಘದ ಉಪಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ ನವೀನ್ ಕುಮಾರ್, ಜಂಟಿ ಕಾರ್ಯದರ್ಶಿ ಮುನಿರಾಜು, ಖಜಾಂಚಿ ರವಿಕುಮಾರ್ ಹಾಜರಿದ್ದರು.