ಸಾರಾಂಶ
ಸಂಡೂರು: ತಮ್ಮ ವೃತ್ತಿಯಲ್ಲಿ ಉತ್ತಮ ಹೆಸರನ್ನು ಗಳಿಸಲು, ಕಕ್ಷಿದಾರರ ನಂಬಿಕೆಯನ್ನು ಗಳಿಸಲು ವಕೀಲರು ನಿತ್ಯ ಅಧ್ಯಯನದಲ್ಲಿ ತೊಡಗಬೇಕು. ಕಲಿಕೆ ನಿರಂತರವಾಗಿರಬೇಕು ಎಂದು ರಾಜ್ಯ ವಕೀಲರ ಪರಿಷತ್ ಸದಸ್ಯ ಕೆ. ಕೋಟೇಶ್ವರ ರಾವ್ ಅಭಿಪ್ರಾಯಪಟ್ಟರು.
ಪಟ್ಟಣದ ವಕೀಲರ ಸಂಘದ ಸಭಾಂಗಣದಲ್ಲಿ ರಾಜ್ಯ ವಕೀಲರ ಪರಿಷತ್, ಬೆಂಗಳೂರು ಹಾಗೂ ಸಂಡೂರು ವಕೀಲರ ಸಂಘದ ವತಿಯಿಂದ ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನಗಳವರೆಗೆ ವಕೀಲರಿಗಾಗಿ ಹಮ್ಮಿಕೊಂಡಿರುವ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹಿಂದೆ ಜಡ್ಜ್‌ಮೆಂಟ್‌ಗಳಿಗಾಗಿ ಹುಡುಕಾಡಬೇಕಿತ್ತು. ಇಂದು ಸುಲಭವಾಗಿ ಪಡೆಯಬಹುದಾಗಿದೆ. ವಕೀಲರಿಗೆ ತರಬೇತಿಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ವಕೀಲರಿಗಾಗಿ ಕಾನೂನು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಹೊಸದಾಗಿ ವಕೀಲಿ ವೃತ್ತಿಯನ್ನು ಆರಂಭಿಸಿದವರು ಹಿರಿಯ ವಕೀಲರ ಬಳಿಯಲ್ಲಿ ತರಬೇತಿ ಪಡೆಯಬೇಕು. ಕೇಸ್ ಸ್ಟಡಿ ಮಾಡಬೇಕು. ಹಿರಿಯ ವಕೀಲರು ಮಂಡಿಸುವ ವಾದವನ್ನು ಗಮನಿಸಬೇಕು. ನೋಟ್ ಮಾಡಿಕೊಳ್ಳಬೇಕು. ನ್ಯಾಯಾಧೀಶರ ಮುಂದೆ ವಾದವನ್ನು ಹೇಗೆ ಮಂಡಿಸಬೇಕು. ನಮ್ಮ ವಾದ ನಿಖರವಾಗಿರಬೇಕು. ಹಿರಿಯ ವಕೀಲರು ಸಹ ನ್ಯಾಯಾಂಗ ವ್ಯವಸ್ಥೆಯಲ್ಲಿನ ಹೊಸ ಬೆಳವಣಿಗೆಗಳನ್ನು ತಿಳಿಯುವುದು ಅಗತ್ಯವಿದೆ ಎಂದು ತಿಳಿಸಿದರು.
ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಮಹ್ಮದ್ ಶಾಯಿಜ್ ಚೌತಾಯ್ ಹಾಗೂ ಸಂಡೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ. ಮೃತ್ಯುಂಜಯಪ್ಪ ಹಾಗೂ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಮಲ್ಲಪ್ಪ ಅರಳಿ ಮಾತನಾಡಿದರು.ನಂತರ ನಡೆದ ಅಧಿವೇಶನದಲ್ಲಿ ಧಾರವಾಡದ ಹಿರಿಯ ವಕೀಲರಾದ ಕೆ.ಬಿ. ನಾವಲಗಿಮಠ ಭಾರತೀಯ ಸಾಕ್ಷ ಅಧಿನಿಯಮ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ಮಹ್ಮದ್ ಶಾಯಿಜ್ ಚೌತಾಯ್ ಮಹಮ್ಮದೀಯ ಕಾನೂನು ಮತ್ತು ಇತರೆ ಕಾನೂನುಗಳ ಕುರಿತು ಉಪನ್ಯಾಸ ನೀಡಿದರು.
ಎನ್.ಎಂ. ನಟರಾಜಶರ್ಮ ಪ್ರಾರ್ಥಿಸಿದರು. ಪರಶುರಾಮ್ ಪೂಜಾರ್ ಸ್ವಾಗತಿಸಿದರು. ಅಂಜಿನಪ್ಪ ಎಂ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಸರ್ಕಾರಿ ಅಭಿಯೋಜಕ ಹೊಸವಡ್ರ ಅಣ್ಣೇಶ, ಬಸವರಾಜ, ತಾಲ್ಲೂಕು ವಕೀಲರ ಸಂಘದ ಉಪಾಧ್ಯಕ್ಷ ಕೆ.ಆರ್. ದಾದಾಪೀರ್, ಕಾರ್ಯದರ್ಶಿ ಹೆಚ್. ಕುಮಾರಸ್ವಾಮಿ, ಗ್ರಂಥಪಾಲಕ ಡಿ. ನಾಗರಾಜ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಆರ್.ವಿ. ನಾಗರಾಜ, ಹೆಚ್. ನಾಗರಾಜ, ಹುಚ್ಚಪ್ಪ ಕೆ, ಸಿದ್ಧಿವಿನಾಯಕ ಪಾಟೀಲ್, ಬಿ. ಶೃತಿ, ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ನಾಗರಾಜ ಗುಡೆಕೋಟೆ, ಆರ್. ವೀರೇಶಪ್ಪ, ಎಚ್.ಕೆ. ಬಸವರಾಜ ಸೇರಿದಂತೆ ವಕೀಲರ ಸಂಘದ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.