ಆದಿಜಾಂಬವ ಸೇರಿದಂತೆ ಎಡಗೈ ಸಮುದಾಯದ ಜನರಲ್ಲಿ ನಾಯಕತ್ವದ ಕೊರತೆ ಎದುರಾಗಿರುವ ಸಂದರ್ಭದಲ್ಲಿ ಧರ್ಮಸೇನ ಅವರಿಗೆ ಎಂಎಲ್‌ಸಿ ಸ್ಥಾನ ಹಾಗೂ ಸಚಿವ ಸ್ಥಾನ ನೀಡುವುದರಿಂದ ತಳಸಮುದಾಯಗಳ ಧ್ವನಿಗೆ ಸರ್ಕಾರದಲ್ಲಿ ಸಮರ್ಪಕ ಪ್ರಾತಿನಿಧ್ಯ ದೊರೆಯಲಿದೆ. ಜೊತೆಗೆ ಒಳಮೀಸಲಾತಿ ಸೇರಿದಂತೆ ಸಮುದಾಯದ ವಿವಿಧ ಬೇಡಿಕೆಗಳಿಗೆ ನ್ಯಾಯ ಒದಗಿಸಲು ಸಹಕಾರಿಯಾಗಲಿದೆ ಎಂದರು. ಹೀಗಾಗಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಆರ್. ಧರ್ಮಸೇನ ಅವರ ಸುದೀರ್ಘ ರಾಜಕೀಯ ಅನುಭವ, ಸಂಘಟನಾ ಸಾಮರ್ಥ್ಯ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ, ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಕನ್ನಡ ಪ್ರಭವಾರ್ತೆ ಹಾಸನ
ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಆರ್. ಧರ್ಮಸೇನ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ (ಎಂಎಲ್‌ಸಿ) ನೇಮಕ ಮಾಡಿ, ಮುಂಬರುವ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಸೇರಿಸಿಕೊಳ್ಳಬೇಕು ಎಂದು ಹಾಸನ ಜಿಲ್ಲಾ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಎಂ.ಜೆ. ಲಕ್ಷ್ಮಣ್ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಜಿಲ್ಲಾ ಘಟಕದ ಮುಖಂಡ ಆರ್. ಧರ್ಮಸೇನ ಅವರು ಸುಮಾರು ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದು, ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು. ಧರ್ಮಸೇನ ಅವರು ಟಿ. ನರಸೀಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯ ಜೀವನ ಆರಂಭಿಸಿ, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ನಂತರ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸುಮಾರು 11 ವರ್ಷ 7 ತಿಂಗಳು ಕಾರ್ಯನಿರ್ವಹಿಸಿದ್ದಾರೆ. ಬಳಿಕ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಒಟ್ಟು 8 ವರ್ಷ 5 ತಿಂಗಳ ಕಾಲ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇದರ ಜೊತೆಗೆ ವಿವಿಧ ನಿಗಮ- ಮಂಡಳಿಗಳ ನಿರ್ದೇಶಕರಾಗಿ, ವಿಧಾನಮಂಡಲದ ಸದನ ಸಮಿತಿಗಳ ಸದಸ್ಯರಾಗಿ ಕಾರ್ಯನಿರ್ವಹಿಸುವ ಮೂಲಕ ಆಡಳಿತಾತ್ಮಕ ಹಾಗೂ ಶಾಸನಾತ್ಮಕ ಅನುಭವವನ್ನು ಪಡೆದಿದ್ದಾರೆ ಎಂದು ಹೇಳಿದರು. ಪ್ರಸ್ತುತ ಅವರು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷರಾಗಿ ನಾಲ್ಕು ವರ್ಷಕ್ಕೂ ಹೆಚ್ಚು ಅವಧಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಷ್ಟ್ರೀಯ ಸಂಯೋಜಕರಾಗಿಯೂ ಹಾಗೂ ಕೇರಳ ರಾಜ್ಯದ ಉಸ್ತುವಾರಿಯಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.ಪಕ್ಷದ ಸಂಘಟನೆ ಹಾಗೂ ದಲಿತ ಸಮುದಾಯದ ಸಬಲೀಕರಣಕ್ಕಾಗಿ ಅವರು ನಿರಂತರವಾಗಿ ದುಡಿಯುತ್ತಿದ್ದಾರೆ. ಆರ್. ಧರ್ಮಸೇನ ಅವರ ಕುಟುಂಬವೂ ಕಾಂಗ್ರೆಸ್ ಪಕ್ಷದೊಂದಿಗೆ ಸುದೀರ್ಘ ರಾಜಕೀಯ ನಂಟು ಹೊಂದಿದೆ. ಅವರ ತಂದೆ ಎನ್. ರಾಚಯ್ಯ ಅವರು 1952ರಲ್ಲಿ ಭಾರತದ ಮೊದಲ ಲೋಕಸಭೆಗೆ ಸಂಸದರಾಗಿದ್ದು, 1957ರಲ್ಲಿ ಎಚ್.ಡಿ. ಕೋಟೆ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಳಿಕ 1973ರಲ್ಲಿಯೂ ಸಚಿವ ಸ್ಥಾನ ಅಲಂಕರಿಸಿ ಎಲ್ಲಾ ವರ್ಗಗಳ ಬಡವರ ಹಾಗೂ ದಲಿತರ ಕಲ್ಯಾಣಕ್ಕಾಗಿ ದುಡಿದಿದ್ದರು ಎಂದು ಸ್ಮರಿಸಿದರು. ಮೈಸೂರು ವಿಭಾಗದಲ್ಲಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಧರ್ಮಸೇನ ಅವರಿಗೆ ಅವಕಾಶ ನೀಡುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು. ಮೈಸೂರು ವಿಭಾಗದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಎಡಗೈ ಸಮುದಾಯದ ಶಾಸಕರ ಪ್ರಾತಿನಿಧ್ಯ ಇಲ್ಲದಂತಾಗಿದ್ದು, 1997 ರಿಂದ2000ರ ಅವಧಿಯಲ್ಲಿ ಇದ್ದ ರಾಜಕೀಯ ಪ್ರಾಬಲ್ಯ ಈಗ ಕ್ಷೀಣಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು. ಆದಿಜಾಂಬವ ಸೇರಿದಂತೆ ಎಡಗೈ ಸಮುದಾಯದ ಜನರಲ್ಲಿ ನಾಯಕತ್ವದ ಕೊರತೆ ಎದುರಾಗಿರುವ ಸಂದರ್ಭದಲ್ಲಿ ಧರ್ಮಸೇನ ಅವರಿಗೆ ಎಂಎಲ್‌ಸಿ ಸ್ಥಾನ ಹಾಗೂ ಸಚಿವ ಸ್ಥಾನ ನೀಡುವುದರಿಂದ ತಳಸಮುದಾಯಗಳ ಧ್ವನಿಗೆ ಸರ್ಕಾರದಲ್ಲಿ ಸಮರ್ಪಕ ಪ್ರಾತಿನಿಧ್ಯ ದೊರೆಯಲಿದೆ. ಜೊತೆಗೆ ಒಳಮೀಸಲಾತಿ ಸೇರಿದಂತೆ ಸಮುದಾಯದ ವಿವಿಧ ಬೇಡಿಕೆಗಳಿಗೆ ನ್ಯಾಯ ಒದಗಿಸಲು ಸಹಕಾರಿಯಾಗಲಿದೆ ಎಂದರು. ಹೀಗಾಗಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಆರ್. ಧರ್ಮಸೇನ ಅವರ ಸುದೀರ್ಘ ರಾಜಕೀಯ ಅನುಭವ, ಸಂಘಟನಾ ಸಾಮರ್ಥ್ಯ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ, ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಐ.ಎನ್.ಟಿ.ಸಿ. ಜಿಲ್ಲಾಧ್ಯಕ್ಷ ಕಬ್ಬಳ್ಳಿ ರಾಮಚಂದ್ರ, ಉಪಾಧ್ಯಕ್ಷ ಸೋಮಣ್ಣ, ಎಸ್.ಸಿ. ಕಾರ್ಯದರ್ಶಿ ಎಚ್. ಆರ್. ಮಹಾದೇವ್, ಮುಖಂಡರಾದ ಹರೀಶ್, ಧರ್ಮಣ್ಣ ಇತರರು ಉಪಸ್ಥಿತರಿದ್ದರು.