ಪಟ್ಟಣದಲ್ಲಿನ ಕೊಳವೆ ಬಾವಿ ಸೇರಿದಂತೆ ಇತರೆ ಜಲಮೂಲಗಳಿಗೆ ಅಂತರ್ಜಲ ಹೆಚ್ಚಿಸುವ ಏಕೈಕ ಕೆರೆಯಾದ ಇಟ್ಟಿಗೆರಿ ಕೆರೆಯಲ್ಲಿ ಅವೈಜ್ಞಾನಿಕವಾಗಿ ಬಂಡು ನಿರ್ಮಿಸುತ್ತಿರುವುದು ಸಲ್ಲದು.

ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿ ಏಕೈಕೆ ಕೆರೆಗೆ ನೀರು ಬರುವ ದಾರಿ ಬಂದ್ ಮಾಡಿ ಕೆರೆಗೆ ಬಂಡು ಹಾಕಿರುವುದು ಅವೈಜ್ಞಾನಿಕವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.

ಶನಿವಾರ ಪಟ್ಟಣದ ಇಟ್ಟಗೆರಿ ಪ್ರದೇಶದಲ್ಲಿ ನಿರ್ಮಿಸಿರುತ್ತಿರುವ ಬಂಡು ಕಾಮಗಾರಿ ವೀಕ್ಷಿಸಿದ ಶಾಸಕ ಡಾ. ಚಂದ್ರು ಲಮಾಣಿ ಅವರು ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೆರೆಗೆ ಹರಿದು ಬರುವ ನೀರಿನ ದಾರಿಗೆ ಅಡ್ಡಲಾಗಿ ಬಂಡು ನಿರ್ಮಿಸಿರುವುದರಿಂದ ಕೆರೆಗೆ ಬರುವ ಹಿನ್ನೀರು ಕೆರೆಯ ಪಾತ್ರದಲ್ಲಿ ನಿರ್ಮಿಸಿರುವ ಮನೆಗಳಿಗೆ ನೀರು ಹೋಗುವುದು ಗ್ಯಾರಂಟಿಯಾಗಿದೆ. ಆಪತ್ತು ಬರುವ ಮುನ್ನ ಕೆರೆ ಅಭಿವೃದ್ಧಿ ಪ್ರಾಧಿಕಾರಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಅಗತ್ಯ ಎಂದರು.

ಪಟ್ಟಣದಲ್ಲಿನ ಕೊಳವೆ ಬಾವಿ ಸೇರಿದಂತೆ ಇತರೆ ಜಲಮೂಲಗಳಿಗೆ ಅಂತರ್ಜಲ ಹೆಚ್ಚಿಸುವ ಏಕೈಕ ಕೆರೆಯಾದ ಇಟ್ಟಿಗೆರಿ ಕೆರೆಯಲ್ಲಿ ಅವೈಜ್ಞಾನಿಕವಾಗಿ ಬಂಡು ನಿರ್ಮಿಸುತ್ತಿರುವುದು ಸಲ್ಲದು. ಈಗಾಗಲೆ ಕೆರೆ ಒತ್ತುವರಿಯಾಗಿ ಅಲ್ಪ ಸ್ವಲ್ಪ ಉಳಿದುಕೊಂಡಿದೆ. ಈಗ 12.30 ಎಕರೆ ವಿಸ್ತೀರ್ಣವಾಗಿರುವ ಕೆರೆ ಮುಚ್ಚುವ ಹಂತಕ್ಕೆ ಬಂದಿರುವುದು ನೋವಿನ ಸಂಗತಿಯಾಗಿದೆ. ಯಾರೋ ನಾಲ್ಕಾರು ಜನರನ್ನು ಸಂತೃಪ್ತಿಪಡಿಸಲು ಕೆರೆಯಲ್ಲಿ ಬಂಡು ನಿರ್ಮಿಸಿರುವ ಅಧಿಕಾರಿಗಳ ಕಾರ್ಯ ಸರಿಯಲ್ಲ.

ಕೆರೆಗೆ ಬರುವ ನೀರನ್ನು ಬಂದ್ ಮಾಡಿದಲ್ಲಿ ಕೆರೆಗೆ ಎಲ್ಲಿಂದ ನೀರು ಬರುತ್ತದೆ ಹಾಗೂ ಕೆರೆಯ ಪಾತ್ರದಲ್ಲಿ ನಿರ್ಮಿಸಿರುವ ಮನೆಗಳಿಗೆ ನೀರು ನುಗ್ಗುವುದು ಶತಸಿದ್ಧವಾಗಿದೆ. ಆಗ ಕೆರೆಯ ಪಾತ್ರದಲ್ಲಿನ ಜನರು ನಮ್ಮ ಮನೆಗಳಿಗೆ ನೀರು ಹೊಕ್ಕಿದೆ ಎಂದು ನಮ್ಮ ಹತ್ತಿರ ಬರಬಾರದು.

ಕೆರೆಯ ನೀರು ಖಂಡಿತವಾಗಿಯೂ ಕೆರೆ ಪಾತ್ರದಲ್ಲಿ ನಿರ್ಮಿಸಿದ ಮನೆಗಳಿಗೆ ಹೋಗುತ್ತದೆ. ಹೀಗಾಗಿ ವೈಜ್ಞಾನಿಕವಾಗಿ ಕೆರೆ ಕಾಮಗಾರಿ ಮಾಡಬೇಕು. ಇದರಿಂದ ಯಾವುದೇ ತೊಂದರೆ ಬಾರದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಅವರು, ಕೆರೆ ಒತ್ತುವರಿ ತೆರವುಗೊಳಿಸಿ ಕೆರೆಯನ್ನು ಉಳಿಸಿ ಮುಂದಿನ ಜನಾಂಗಕ್ಕೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ಈ ವೇಳೆ ಉಪವಿಭಾಗಾಧಿಕಾರಿ ಗಂಗಪ್ಪ, ತಹಸೀಲ್ದಾರ್ ಧನಂಜಯ ಎಂ. ಪುರಸಭೆಯ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಕೆರೆಯ ಅಭಿವೃದ್ಧಿ ಪ್ರಾಧಿಕಾರಿದ ಅಧಿಕಾರಿ ರಫೀಕ್, ಪುರಸಭೆಯ ಅಧಿಕಾರಿ ವರ್ಗ ಹಾಗೂ ಸಾರ್ವಜನಿಕರು ಇದ್ದರು.